ಕೈಗಾರಿಕೆಗೆ ರೈತರಿಂದ ಜಮೀನು ಖರೀದಿಗೆ ಹೊಸ ಮಾರ್ಗಸೂಚಿ ಪ್ರಕಟ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.16- ಕರ್ನಾಟಕ ಭೂಸುಧಾರಣೆ ಕಾಯ್ದೆಯಡಿ ಕೈಗಾರಿಕೆ ಉದ್ದೇಶಕ್ಕಾಗಿ ಕೃಷಿ ಭೂಮಿಯನ್ನು ರೈತರಿಂದ ಖರೀದಿಸಲು ಎಸ್‍ಎಲ್‍ಎಸ್‍ಡಬ್ಲ್ಯುಸಿಸಿ/ಎಸ್‍ಎಚ್‍ಎಲ್‍ಸಿಸಿ ಅನುಮೋದನೆಗೊಂಡ ಪ್ರಸ್ತಾವನೆಗಳಿಗೆ ಪರಿಭಾವಿತ ಭೂ ಪರಿವರ್ತನೆಗೆ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಕೈಗಾರಿಕೆಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಹಾಗೂ ಕೈಗಾರಿಕೆಗಳನ್ನು ತ್ವರಿತವಾಗಿ ಸ್ಥಾಪಿಸುವ ಉದ್ದೇಶ ಹಾಗೂ ಸರಳೀಕರಣ ಮಾಡುವ ಸಲುವಾಗಿ ಕರ್ನಾಟಕ ಭೂಸುಧಾರಣಾ ಕಾಯ್ದೆ 1961- ಕಲಂ 109(1)(ಐ) ಹಾಗೂ ಅದೇ ಕಾಯ್ದೆಯ ಕಲಂ 109(2)ರ ಉಲ್ಲೇಖಿತ ಅಧಿಸೂಚನೆಯಲ್ಲಿ ತಿದ್ದುಪಡಿ ಮಾಡಲಾಗಿದ್ದು

ಇದರ ಅನ್ವಯ ರಾಜ್ಯಮಟ್ಟದ ಏಕಗವಾಕ್ಷಿ ಒಪ್ಪಿಗೆ ಸಮಿತಿ/ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ಸಮಿತಿಗಳು ಅನುಮೋದಿಸಿದ ನಂತರ ಕರ್ನಾಟಕ ಭೂಸುಧಾರಣಾ ಕಾಯ್ದೆ 63,79ಎ, 79ಬಿ ಹಾಗೂ 80ರಿಂದ ವಿನಾಯಿತಿ ದೊರೆಯುತ್ತದೆ.

ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಅಂದರೆ ಕೈಗಾರಿಕೆ ಉದ್ದೇಶಕ್ಕೆ ಖರೀದಿಸಲು ಇಚ್ಛಿಸುವ ಕೈಗಾರಿಕೋದ್ಯಮಿಗಳು ಕರ್ನಾಟಕ ಉದ್ಯೋಗ ಮಿತ್ರ ವೆಬ್‍ಪೋರ್ಟಲ್‍ನಲ್ಲಿ ಅನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸದರಿ ಜಮೀನುಗಳ ವಾಸ್ತವಾಂಶ ವರದಿ ಹಾಗೂ ನಿಯಮಾನುಸಾರ ಭೂಪರಿವರ್ತನಾ ನಿಗದಿಗೊಳಿಸಿ ಶುಲ್ಕ ಕರ್ನಾಟಕ ಉದ್ಯೋಗಮಿತ್ರಕ್ಕೆ ಕಳುಹಿಸಬೇಕು. ಸಂಬಂಧಪಟ್ಟ ವರದಿಯನ್ನು 15 ದಿನಗಳೊಳಗೆ ಜಿಲ್ಲಾಧಿಕಾರಿಗಳು ನೀಡತಕ್ಕದ್ದು.

ಜಮೀನುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ ಪಡೆದ ನಂತರ ನಿಗಧಿತ ಅವಧಿಯೊಳಗೆ ಮಾಹಿತಿ ಬರದಿದ್ದಲ್ಲಿ ಪ್ರಸ್ತಾವನೆಯನ್ನು ಲ್ಯಾಂಡ್ ಆಡಿಟ್ ಕಮಿಟಿ ಮುಂದೆ ಮಂಡಿಸತಕ್ಕದ್ದು.

ಲ್ಯಾಂಡ್ ಆಡಿಟ್ ಕಮಿಟಿ ಅನುಮೋದಿಸಿದ ಪ್ರಸ್ತಾವನೆಯನ್ನು ಕರ್ನಾಟಕ ಉದ್ಯೋಗ ಮಿತ್ರವು ರಾಜ್ಯಮಟ್ಟದ ಏಕಗವಾಕ್ಷಿ ಒಪ್ಪಿಗೆ ಸಮಿತಿ ಮುಂದೆ ಮಂಡಿಸಬಹುದು. ಇಲ್ಲಿಂದ ಅನುಮೋದನೆಗೊಂಡ ಪ್ರಸ್ತಾವನೆಗಳಿಗೆ ಹೊರಡಿಸಲಾಗುವ ಸರ್ಕಾರಿ ಆದೇಶ ಭೂ ಸುಧಾರಣೆ ಕಾಯ್ದೆ ನೀಡುವ ಆದೇಶವಾಗಿರುತ್ತದೆ.

ಸಂಬಂಧಪಟ್ಟ ಉಪನೋಂದಣಾಧಿಕಾರಿಗಳು ಭೂಮಿಯನ್ನು ನೋಂದಾಣಿ ಮಾಡತಕ್ಕದ್ದು, ನೋಂದಾಣಿ ಶುಲ್ಕ, ಮುದ್ರಣ ಶುಲ್ಕ ಆನ್‍ಲೈನ್‍ನಲ್ಲಿ ಪಡೆದು ಕಲಂ-109ರ ಪ್ರಕಾರ ಅನುಮೋದನೆಗೊಂಡ ಜಮೀನುಗಳನ್ನು ಕೈಗಾರಿಕೋದ್ಯಮಿಗಳು ಖರೀದಿಸಲು ಕಂದಾಯ ಇಲಾಖೆ ನಿಯಮಾನು ಸಾರ ಭೂಮಿ ತತ್ರಾಂಶದ ಮೂಲಕ ಹಕ್ಕು ಬದಲಾವಣೆ ಮಾಡಬೇಕು,

ಹಕ್ಕು ಬದಲಾವಣೆ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಭೂ ಪರಿವರ್ತನಾ ಶುಲ್ಕ ಪಾವತಿಸುವಂತೆ ಕೈಗಾರಿಕೆಗಳಿಗೆ ಆನ್‍ಲೈನ್ ಪೇಮೆಂಟ್ ಡಿಮಾಂಡ್ ನೋಟ್, ಆನ್‍ಲೈನ್ ಮೂಲಕವೇ ಜನರೇಟ್ ಮಾಡಿ ಉದ್ದಿಮೆದಾರರು ಪಡೆದುಕೊಳ್ಳಬಹುದಾಗಿದೆ.

ಈ ಎಲ್ಲಾ ತಂತ್ರಾಂಶಗಳನ್ನು ಕಾವೇರಿ ತಂತ್ರಾಂಶ ಹಾಗೂ ಕರ್ನಾಟಕ ಉದ್ಯೋಗ ಮಿತ್ರ ತಂತ್ರಾಂಶಗಳಲ್ಲಿ ಅಗತ್ಯ ಮಾರ್ಪಾಟುಗಳನ್ನು ಮಾಡಿಕೊಳ್ಳುವ ಮಾರ್ಗಸೂಚಿಗಳನ್ನು ಹೊರಡಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ವಿ.ಪ್ರಕಾಶ್ ಅವರು ಆದೇಶಿಸಿದ್ದಾರೆ.

Facebook Comments