“ಕೃಷಿ ವಿವಿಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳ ಭರ್ತಿ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.17- ರಾಜ್ಯದ ನಾಲ್ಕು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು. ವಿಧಾನ ಪರಿಷತ್‍ನ ಪ್ರಶ್ನೋತ್ತರ ಅವಧಿಯಲ್ಲಿ ಬಸವರಾಜಪಾಟೀಲ್ ಇಟಗಿ ಅವರು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಕೇಳಿದರು.

ಆಗ ಬಿ.ಸಿ.ಪಾಟೀಲ್‍ರು, ಬೆಂಗಳೂರಿನ ಜಿಕೆವಿಕೆಯಲ್ಲಿ 212, ಧಾರವಾಡದ ವಿಶ್ವವಿದ್ಯಾಲಯದಲ್ಲಿ 225, ಶಿವಮೊಗ್ಗ ವಿಶ್ವವಿದ್ಯಾಲಯದಲ್ಲಿ 187, ರಾಯಚೂರು ವಿಶ್ವವಿದ್ಯಾಲಯದಲ್ಲಿ 245 ಬೋಧಕ ಹುದ್ದೆಗಳು ಖಾಲಿ ಇವೆ. ನಾಲ್ಕು ವಿಶ್ವವಿದ್ಯಾಲಯಗಳಲ್ಲಿ 2609 ಬೋಧಕೇತರ ಹುದ್ದೆಗಳು ಖಾಲಿ ಇವೆ. ಕೋವಿಡ್‍ನಿಂದಾಗಿ ಕೆಲ ಕಾಲ ನೇಮಕಾತಿಗೆ ತಡೆ ನೀಡಲಾಗಿತ್ತು. ಖಾಲಿ ಇರುವ ಬೋಧಕ ಹುದ್ದೆಗಳ ಪೈಕಿ ಶೇ.50ರಷ್ಟನ್ನು ಭರ್ತಿ ಮಾಡಲು ನಿರ್ಧರಿಸಲಾಗಿದೆ. ಹಾಗಾಗಿ ಖಾಲಿ ಹುದ್ದೆಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ವಿಶ್ವವಿದ್ಯಾಲಯಕ್ಕೆ ಪತ್ರ ಬರೆಯಲಾಗಿದೆ. ಐಸಿಆರ್ ಹುದ್ದೆಗಳ ಭರ್ತಿಗೆ ಹಣಕಾಸಿನ ಕೊರತೆ ಇಲ್ಲ ಎಂದು ಸ್ಪಷ್ಟ ಪಡಿಸಿದರು.

ಜೆಡಿಎಸ್‍ನ ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರೈತರ ಆದಾಯವನ್ನು 2024ರ ವೇಳೆಗೆ ದ್ವಿಗುಣಗೊಳಿಸುವ ಗುರಿಯನ್ನು ಪ್ರಧಾನ ಮಂತ್ರಿಗಳು ನೀಡಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿವೆ. ರಾಜ್ಯದಲ್ಲಿ ಈ ಯೋಜನೆಗಳ ಪ್ರಗತಿ ಪರಿಶೀಲನೆಗೆ ಅಪರ ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಸದಸ್ಯರು ಜಂಟಿ ಸದನ ಸಮಿತಿ ರಚಿಸುವಂತೆ ಸಲಹೆ ನೀಡಿದ್ದಾರೆ. ಶೀಘ್ರವೇ ಆಸಕ್ತ ಸದಸ್ಯರ ಸಭೆ ನಡೆಸಿ ರೈತರ ಜೀವನ ಮಟ್ಟ ಸುಧಾರಣೆಗೆ ಸಲಹೆಗಳನ್ನು ಪಡೆಯಲಾಗುವುದು ಎಂದರು.

ಕಾಂಗ್ರೆಸ್‍ನ ಎಂ.ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಬಿ.ಸಿ.ಪಾಟೀಲರು, ರಾಜ್ಯದಲ್ಲಿ ಆತ್ಮ ನಿರ್ಭರ ಭಾರತದ ಅಡಿ ಸಾವಯವ ರೈತ ಉತ್ಪಾದಕ ಸಂಸ್ಥೆಗಳಿಗೆ ಕಿರು ಉದ್ದಿಮೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ 2020-21ರಲ್ಲಿ 32.46 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಹೊಸದಾಗಿ 700 ಸಾವಯವ ರೈತ ಉತ್ಪಾದಕ ಸಂಸ್ಥಗಳನ್ನು (ಎಫ್‍ಪಿಓ) ಸ್ಥಾಪಿಸಲು ನಿರ್ಧರಿಸಲಾಗಿದೆ.

ಪ್ರತಿಯೊಂದು ಸಂಘಕ್ಕೂ ರೈತರ ಅಧ್ಯನ ಪ್ರವಾಸ, ತರಬೇತಿ, ಸಿಬ್ಬಂದಿ ವೇತನ, ರೈತರ ಆವರ್ತ ವೆಚ್ಚ ಸೇರಿ 13¸ ಅಂಶಗಳ ವೆಚ್ಚಗಳಿಗೆ ಪ್ರತಿ ಸಂಸ್ಥೆಗೆ ವಾರ್ಷಿಕ್ಕೆ 10 ಲಕ್ಷದಂತೆ ಮೂರು ವರ್ಷಕ್ಕೆ 30 ಲಕ್ಷ ರೂಪಾಯಿಗಳು ಸೇರಿ ಒಟ್ಟು ರಾಜ್ಯದಲ್ಲಿ 250 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಯಾವ ಎಫ್‍ಪಿಒಗಳು ಮುಚ್ಚಿಲ್ಲ. ಇವುಗಳಿಗೆ ಬೇಡಿಕೆ ಹೆಚ್ಚಾಗಿದೆ. ಸಾಕಷ್ಟು ಅಭಿವೃದ್ಧಿ ಕೆಲಸಗಳು ಹೆಚ್ಚಾಗಿದೆ. 300ರಿಂದ ಒಂದು ಸಾವಿರ ಮಂದಿ ಇವುಗಳಲ್ಲಿ ಸದಸ್ಯರಿದ್ದಾರೆ ಎಂದರು.

Facebook Comments