ಕಾಂಗ್ರೆಸ್ ಅರ್ಜಿಗಳು ಮಾರಾಟವಾಗುತ್ತಿಲ್ಲ : ಬಿ.ಸಿ.ಪಾಟೀಲ್ ವ್ಯಂಗ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.16- ಕಾಂಗ್ರೆಸ್‍ನಲ್ಲಿ ಅರ್ಜಿಗಳು ಮಾರಾಟವಾಗುತ್ತಿಲ್ಲ. ಹೀಗಾಗಿ ಹರಾಜಿಗಿಟ್ಟಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕನಸು ನನಸಾಗುವುದಿಲ್ಲ. ಅವರ ತಟ್ಟೆಯಲ್ಲೇ ಕತ್ತೆ ಸತ್ತು ಬಿದ್ದಿದೆ. ನಮ್ಮ ತಟ್ಟೆಯಲ್ಲಿ ಬಿದ್ದಿರುವ ನೊಣವನ್ನು ನೋಡಲು ಮುಂದಾಗಿದ್ದಾರೆ ಎಂದು ಟೀಕಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರೊಂದಿಗಿನ ಸಂಬಂಧವನ್ನು ಸರಿಮಾಡಿಕೊಳ್ಳಲಿ ಎಂದರು. ಮುಂದಿನ ವಾರ ದೆಹಲಿಗೆ ತೆರಳಲಿದ್ದು, ಆ ಸಂದರ್ಭದಲ್ಲಿ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಕೂಬ ಅವರನ್ನು ಭೇಟಿ ಮಾಡಿ ರಾಜ್ಯದ ಕೃಷಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಸಚಿವರು, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 77 ಲಕ್ಷ ಹೆಕ್ಟೇರ್‍ನಲ್ಲಿ ಬಿತ್ತನೆ ಗುರಿ ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ 44 .18 ಲಕ್ಷ ಹೆಕ್ಟೇರ್‍ನಲ್ಲಿ ಬಿತ್ತನೆಯಾಗಿದ್ದು, ಶೇ.57.38ರಷ್ಟು ಬಿತ್ತನೆಯಾದಂತಾಗಿದೆ. ಕಳೆದ ವರ್ಷ 153.08 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಉತ್ಪಾದನೆಯಾಗಿದೆ. ದೇಶದ ಸರಾಸರಿಗೆ ಹೋಲಿಸಿದರೆ ಶೇ.2ರಷ್ಟು ಹಾಗೂ ರಾಜ್ಯದ ಸರಾಸರಿಗೆ ಹೋಲಿಸಿದರೆ ಶೇ.10ರಷ್ಟು ಉತ್ಪಾದನೆಯಾಗಿದೆ ಎಂದರು.

ಜುಲೈ 1ರಿಂದ 15ರವರೆಗೆ ರಾಜ್ಯದಲ್ಲಿ ವಾಡಿಕೆ ಮಳೆ ಪ್ರಮಾಣ 433 ಮಿ.ಮೀ ಆಗಿದ್ದು, ಈ ಅವಧಿಯಲ್ಲಿ 364ರಷ್ಟು ಮಿ.ಮೀನಷ್ಟು ಮಳೆಯಾಗಿದ್ದು, ಶೇ.7.4ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ 6 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆಯಿದೆ. ಆದರೆ 8 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಲಭ್ಯವಿದ್ದು, ಬಿತ್ತನೆ ಬೀಜದ ಕೊರತೆ ಇಲ್ಲ ಎಂದರು.

ರಾಜ್ಯದಲ್ಲಿ ಏಪ್ರಿಲ್‍ನಿಂದ ಜುಲೈವರೆಗೆ 17,44,448 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆಯಿದ್ದು, 14,61,424 ಮೆಟ್ರಿಕ್ ಟನ್ ಮಾರಾಟವಾಗಿದೆ. 10,34,610 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 2.10 ಕೋಟಿ ತಾಕುಗಳಲ್ಲಿ ಬೆಳೆ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಿದ್ದು, ರೈತರಿಂದಲೇ ಜಮೀನಿನ ಬೆಳೆ ಮಾಹಿತಿಯನ್ನು ಆ್ಯಪ್ ಮೂಲಕ ಅಪ್‍ಲೋಡ್ ಮಾಡಿಸುವ ಮೂಲಕ ಬೆಳೆ ಸಮೀಕ್ಷೆ ಮಾಹಿತಿಯನ್ನು ದಾಖಲಿಸಲಾಗುತ್ತದೆ. ಪೂರ್ವ ಮುಂಗಾರಿನ ಹಂಗಾಮಿನಲ್ಲಿ 1.09 ಲಕ್ಷ ತಾಕುಗಳನ್ನು ರೈತರೇ ಆ್ಯಪ್‍ನಲ್ಲಿ ಅಪ್‍ಲೋಡ್ ಮಾಡಲಿದ್ದಾರೆ.

ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ 36 ಬೆಳೆಗಳನ್ನು ಬೆಳೆ ವಿಮೆಗೆ ನೊಂದಾಯಿಸಲು ಅಧಿಸೂಚಿಸಲಾಗಿದೆ. ಇಲ್ಲಿಯವರೆಗೆ 3.71 ಲಕ್ಷ ರೈತರು ನೋಂದಣಿ ಮಾಡಿಕೊಂಡಿದ್ದಾರೆ. 695 ಕೃಷಿ ಯಂತ್ರಧಾರ ಕೇಂದ್ರಗಳ ಸ್ಥಾಪನೆ ಮಾಡಲಾಗಿದ್ದು, 210 ಕೃಷಿ ಯಂತ್ರೋಪಕರಣಗಳ ಬ್ಯಾಂಕ್‍ನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

Facebook Comments