ಕೃಷಿ ಕ್ಷೇತ್ರಕ್ಕೂ ಮಾಹಿತಿ ತಂತ್ರಜ್ಞಾನದ ಅಗತ್ಯವಿದೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು :  ಕೃಷಿ ಮತ್ತು ಸಮಗ್ರ ಕ್ಷೇತ್ರಕ್ಕೆ ಮಾಹಿತಿ-ತಂತ್ರಜ್ಞಾನದ ಪ್ರಗತಿಯ ಲಾಭ ಪಡೆದುಕೊಳ್ಳುವ ಅಗತ್ಯವಿದೆ. ಕೃಷಿ ಮತ್ತು ಪಾಲುದಾರರ ಪಾತ್ರವನ್ನು ಪರಿಗಣಿಸಿ ಈ ಕ್ಷೇತ್ರಗಳಿಗೆ ದೊಡ್ಡ ದತ್ತಾಂಶ ವೇದಿಕೆ ರಚಿಸಲು ರಾಷ್ಟ್ರೀಯ ಚೌಕಟ್ಟಿನಲ್ಲಿ ಕೆಲಸ ಮಾಡುವುದು ಅತ್ಯಗತ್ಯ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಧ್ಯಕ್ಷ ಡಾ.ಕೈಲಾಸವಡಿವೋ ಸಿವನ್ ಪ್ರತಿಪಾದಿಸಿದರು.

ಕೃಷಿ ವಿಶ್ವವಿದ್ಯಾನಿಲಯದ 54ನೆ ಘಟಿಕೋತ್ಸವ ದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಜಾಗತಿಕವಾಗಿ ಸ್ಪರ್ಧಿಸಲು ಮತ್ತು ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಲು ಉತ್ತಮ ಮಾನವ ಸಂಪನ್ಮೂಲ ನಿರ್ಮಿಸಬೇಕಿದೆ. ಕೃಷಿಯಲ್ಲಿನ ಸವಾಲುಗಳನ್ನು ಎದುರಿಸಲು ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳು ತಂತ್ರಜ್ಞಾನ, ನ್ಯಾನೋ ತಂತ್ರಜ್ಞಾನ, ಪರಿಸರ ವಿಜ್ಞಾನ, ನಿಖರ ಕೃಷಿ, ಭೌಗೋಳಿಕ ಮಾಹಿತಿ ವ್ಯವಸ್ಥೆಯನ್ನು ಪ್ರಾಯೋಗಿಕ ತರಬೇತಿ ಮೂಲಕ ಸಾಮಥ್ರ್ಯ ಪಡೆದುಕೊಳ್ಳಬೇಕಿದೆ.

ಭಾರತ ಕೃಷಿ ಪ್ರಧಾನ ಸಮಾಜವಾಗಿರುವುದರಿಂದ ನಮ್ಮಲ್ಲಿ ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ನಾವು ಎದುರಿಸುತ್ತಿರುವ ಸವಾಲುಗಳಿಂದಲೇ ನಮಗೆ ಅವಕಾಶಗಳು ಉದ್ಭವಿಸುತ್ತವೆ. ಇನ್ನೂ ಬಗೆಹರಿಯದ ಸಾಕಷ್ಟು ಸಮಸ್ಯೆಗಳೆಂದರೆ ಬಡತನ ಮತ್ತು ಹಸಿವಿನ ನಿರ್ಮೂಲನೆ, ಉತ್ತಮ ಆರೋಗ್ಯ ಆರೋಗ್ಯ, ಶುದ್ಧ ಕುಡಿಯುವ ನೀರಿನ ಸಮರ್ಪಕ ಪೂರೈಕೆ, ಗುಣಮಟ್ಟದ ಶಿಕ್ಷಣ ಒದಗಿಸುವುದು ಸೇರಿದೆ.

ಜೈವಿಕ ಎಂಜಿನಿಯರಿಂಗ್, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ದೊಡ್ಡ ದತ್ತಾಂಶದ ವಿಶ್ಲೇಷಣೆಗಳು ಕೃಷಿ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಸೃಷ್ಟಿಸುವಲ್ಲಿ ಅಪಾರ ಭರವಸೆ ನೀಡುತ್ತಿವೆ. ಬಾಹ್ಯಾಕಾಶ ತಂತ್ರಜ್ಞಾನಗಳ ಬಗ್ಗೆ ಮಾತನಾಡುವುದಾದರೆ ಇದು ಹೆಚ್ಚು ಪರಿಣಾಮಕಾರಿಯಾದದ್ದು.

ಭೌಗೋಳಿಕ ಮಾಹಿತಿ ವ್ಯವಸ್ಥೆ, ರಿಮೋಟ್ ಸೆನ್ಸಿಂಗ್, ಮಾನವ ರಹಿತ ವೈಮಾನಿಕ ವಾಹನ ಹಾಗೂ ಡ್ರೋಣ್ ತಂತ್ರಜ್ಞಾನವನ್ನು ಒಳಗೊಂಡಿದೆ. ಒಬ್ಬ ರೈತ ತನ್ನ ಜಮೀನನ್ನು ಆಕಾಶದಿಂದ ನೋಡಲು ಮತ್ತು ಕೃಷಿ ಕಾರ್ಯಾಚರಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಸಂಯೋಜಿಸಲು ಇಂತಹ ತಂತ್ರಜ್ಞಾನಗಳು ಅನುವು ಮಾಡಿಕೊಡುತ್ತವೆ ಎಂದು ವಿವರಿಸಿದರು.

ರೈತರು ಈಗ ಮೊದಲಿಗಿಂತಲೂ ಹೆಚ್ಚು ತಿಳುವಳಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸಮರ್ಥರಾಗಿದ್ದಾರೆ. ಅವರಿಗೆ ಉಪಯುಕ್ತವಾದ ಇಂತಹ ತಂತ್ರಜ್ಞಾನಗಳನ್ನು ಉತ್ತಮ ರೆಸಲ್ಯೂಷನ್ ಮತ್ತು ಚುರುಕುಗೊಳಿಸುವಿಕೆಯೊಂದಿಗೆ ಸುಧಾರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 2018-19ನೆ ವರ್ಷದಲ್ಲಿ ತೇರ್ಗಡೆಯಾದ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ವಿಷಯಗಳಲ್ಲಿ 986 ವಿದ್ಯಾರ್ಥಿಗಳಿಗೆ 84ನೆ ಘಟಿಕೋತ್ಸವದ ಸಂದರ್ಭದಲ್ಲಿ ಪದವಿ ಪ್ರದಾನ ಮಾಡಲಾಯಿತು.

ಇದರಲ್ಲಿ 638 ವಿದ್ಯಾರ್ಥಿಗಳು ವಿವಿಧ ಸ್ನಾತಕ ಪದವಿ, 280 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಹಾಗೂ 68 ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿ ಪಡೆದರು.  ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್, ವಿವಿ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್, ಕುಲಸಚಿವ ಡಾ.ಜಿ.ಎನ್.ಧನ್‍ಪಾಲ್ ಮತ್ತಿತರರು ಉಪಸ್ಥಿತರಿದ್ದರು.

Facebook Comments