ಕಾಂಗ್ರೆಸ್‍ನ ನಾಯಕ ಅಹಮ್ಮದ್ ಪಟೇಲ್‍ಗೆ ಇಡಿ 2ನೇ ಸುತ್ತಿನ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜೂ.30-ಪಿಎಂಎಲ್‍ಎ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‍ನ ಪ್ರಭಾವಿ ನಾಯಕ, ರಾಜ್ಯಸಭಾ ಸದಸ್ಯ ಅಹಮ್ಮದ್ ಪಟೇಲ್ ಅವರನ್ನು ಜಾರಿ ನಿರ್ದೇಶನಾಲಯ ಇಂದು 2ನೇ ಸುತ್ತಿನ ವಿಚಾರಣೆಗೊಳಪಡಿಸಿದೆ.

ದೆಹಲ್ಲಿಯಲ್ಲಿರುವ ಅವರ ನಿವಾಸದಲ್ಲಿ ಇಂದು ಬೆಳಗ್ಗೆಯಿಂದಲೇ ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆಗೆ ಆರೋಪಗಳ ಸಂಬಂಧ ತೀವ್ರ ವಿಚಾರಣೆಗೊಳಪಡಿಸಿ ಕೆಲವು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದರು.

ದೇಶದಲ್ಲಿ ಭಾರೀ ಸದ್ದು ಮಾಡಿದ್ದ ಸಂದೇಸರ ಗ್ರೂಪ್ ಕಂಪನಿಯ 15 ಸಾವಿರ ಕೋಟಿ ವಂಚನೆ ಪ್ರಕರಣದಲ್ಲಿ ಅಹಮ್ಮದ್ ಪಟೇಲ್ ಶಾಮೀಲಾಗಿರುವ ಆರೋಪದ ಮೇಲೆ ಇಡಿ ಇತ್ತೀಚೆಗೆ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿ ವಿಚಾರಣೆ ನಡೆಸಿತ್ತು.

ಸ್ಟೆರ್ಲಿಂಗ್ ಬಯೋಟೆಕ್ ಒಡೆತನದ ಸಂದೇಸರ ಗ್ರೂಪ್‍ಗೆ ಅಹಮ್ಮದ್ ಪಟೇಲ್ ತಮ್ಮ ಪ್ರಭಾವ ಬಳಸಿ ವಿವಿಧ ಬ್ಯಾಂಕ್‍ಗಳಿಂದ 15 ಸಾವಿರ ಕೋಟಿ ಹಣವನ್ನು ಸಾಲದ ರೂಪದಲ್ಲಿ ಕೊಡಿಸಿದ್ದರು.

ಆದರೆ ಈ ಸಂದೇಸರ ಗ್ರೂಪ್ ಬ್ಯಾಂಕ್‍ಗಳಿಗೆ ಹಣ ಹಿಂತಿರುಗಿಸದೆ ವಂಚನೆ ಮಾಡಿದ ಆರೋಪವಿತ್ತು. ಬ್ಯಾಂಕ್‍ಗಳಿಂದ ಇಷ್ಟು ದೊಡ್ಡ ಮೊತ್ತದ ಸಾಲ ಕೊಡಿಸಲು ಅಹಮ್ಮದ್ ಪಟೇಲ್ ಆ ಕಂಪನಿಯವರಿಂದ ನೂರಾರು ಕೋಟಿ ಲಂಚ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಈ ಹಿಂದೆಯೇ ಇಡಿ ಅಧಿಕಾರಿಗಳು ಸಂದೇಸರ ಗ್ರೂಪ್ ಮೇಲೆ ದಾಳಿ ನಡೆಸಿದಾಗ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿತ್ತು. ಅದರಲ್ಲಿ ಅಹಮ್ಮದ್ ಪಟೇಲ್ ಸಾಲ ಕೊಡಿಸಲು ಲಂಚದ ರೂಪದಲ್ಲಿ ಹಣ ಪಡೆದಿದ್ದಾರೆ ಎಂಬ ಆರೋಪವಿತ್ತು.

ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಬೇಕೆಂದು ಇಡಿ ಅಧಿಕಾರಿಗಳು ಹಲವು ಬಾರಿ ನೋಟಿಸ್ ಜಾರಿ ಮಾಡಿದ್ದರು. 60 ವರ್ಷದ ಅಹಮ್ಮದ್ ಪಟೇಲ್ ಆರೋಗ್ಯದ ನೆಪವೊಡ್ಡಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು.  ಕಳೆದ ಮೂರು ತಿಂಗಳಿನಿಂದ ಇಡಿ ನಿರಂತರವಾಗಿ ನೋಟಿಸ್ ನೀಡುತ್ತಾ ಬಂದಿತ್ತು.

ಆದರೆ ಅಹಮ್ಮದ್ ಪಟೇಲ್ ಕೋವಿಡ್ ನೆಪ ಹೇಳಿ ವಿಚಾರಣೆಯಿಂದ ದೂರ ಉಳಿದಿದ್ದರು. ಹೀಗೆ ಪ್ರತಿ ನೋಟಿಸ್‍ಗೂ ಕುಂಟು ನೆಪ ಹೇಳುತ್ತಾ ಅಹಮ್ಮದ್ ಪಟೇಲ್ ಇಡಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದರು ಎನ್ನಲಾಗಿದೆ.

ಇದೇ ಪ್ರಕರಣದಲ್ಲಿ ಅಹಮ್ಮದ್ ಪಟೇಲ್ ಅವರ ಪುತ್ರ ಫೈಸಲ್ ಪಟೇಲ್ ಕೂಡ ಶಾಮೀಲಾಗಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಅವರಿಗೂ ಕೂಡ ಈ ಹಿಂದೆಯೇ ಇಡಿ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಿತ್ತು.

ಸಂದೇಸರ ಅವರ ಸಹೋದರರಾದ ಚೇತನ್ ಜಯಂತಿಲಾಲ್ ಸಂದೇಸರ ಮತ್ತು ನಿತಿನ್ ಜಯಂತಿಲಾಲ್ ಸಂದೇಸರ ಅವರಿಂದ ಅಹಮ್ಮದ್ ಪಟೇಲ್ ಪುತ್ರ ಪೈಸಲ್ ಪಟೇಲ್ ಬ್ಯಾಂಕ್‍ಗಳಿಂದ ಸಾಲ ಕೊಡಿಸಲು ಲಂಚ ಪಡೆದಿದ್ದರು ಎನ್ನಲಾಗಿದೆ.

ಸಂದೇಸರ ಹಗರಣವು ದೇಶದಲ್ಲಿಯೇ ಬಹುದೊಡ್ಡ ಹಗರಣ ಎನ್ನಲಾಗುತ್ತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ವಂಚನೆ ಮಾಡಿದ ನೀರವ್ ಮೋದಿ, ಮೆಹುಲ್ ಚೌಕ್ಸಿ, ವಿಜಯ್ ಮಲ್ಯ ಮಾಡಿರುವ ವಂಚನೆಗಳಿಗಿಂತಲೂ ಇದು ಭಾರೀ ದೊಡ್ಡ ಹಗರಣ ಎಂಬ ಮಾತುಗಳು ಕೇಳಿಬರುತ್ತಿವೆ.

Facebook Comments