ತಿಹಾರ್ ಜೈಲಲ್ಲಿ ಡಿಕೆಶಿ ಭೇಟಿಯಾಗಿ ಧೈರ್ಯ ತುಂಬಿದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಅ.23- ಅಕ್ರಮ ಹಣದ ವಹಿವಾಟು ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ತಿಹಾರ್ ಜೈಲ್ ಸೇರಿರುವ ಕಾಂಗ್ರೆಸ್ ಪ್ರಭಾವಿ ಮುಖಂಡ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭೇಟಿ ಮಾಡಿ ಧೈರ್ಯ ತುಂಬಿದರು.

ಬೆಳಗ್ಗೆ 9 ಗಂಟೆಗೆ ತಿಹಾರ್ ಜೈಲಿಗೆ ವಿಶೇಷ ವಾಹನದಲ್ಲಿ ಆಗಮಿಸಿದ ಸೋನಿಯಾ ಗಾಂಧಿ ಅವರು ಸುಮಾರು 20 ನಿಮಿಷಗಳ ಕಾಲ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದರು. ನೀವು ಧೈರ್ಯಗೆಡಬೇಡಿ, ನಿಮ್ಮೊಂದಿಗೆ ಪಕ್ಷವಿದೆ. ಎಲ್ಲವೂ ಕಾನೂನಿನ ಮೂಲಕವೇ ಎದುರಿಸಿ.

ನಿಮ್ಮ ವಿರುದ್ಧ ಬಿಜೆಪಿ ರಾಜಕೀಯ ಷಡ್ಯಂತ್ರ ನಡೆಸುತ್ತಿರುವುದು ಸ್ಪಷ್ಟವಾಗಿದೆ. ನೀವು ಏನು ತಪ್ಪೇ ಮಾಡಿಲ್ಲ ಎಂದರೆ ನ್ಯಾಯಾಲಯದಿಂದ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಆತ್ಮಸ್ಥೈರ್ಯ ತುಂಬಿದರು. ಈ ವೇಳೆ ಭಾವುಕರಾದ ಶಿವಕುಮಾರ್ ಗುಜರಾತ್ ರಾಜ್ಯಸಭೆ ಚುನಾವಣೆ ವೇಳೆ ಅಲ್ಲಿನ ಶಾಸಕರನ್ನು ರಕ್ಷಣೆ ಮಾಡಿದೆ ಎಂಬ ಒಂದೇ ಕಾರಣಕ್ಕಾಗಿ ಕೇಂದ್ರ ಬಿಜೆಪಿ ನಾಯಕರು ನನ್ನ ವಿರುದ್ಧ ರಾಜಕೀಯ ಹಗೆತನ ಸಾಧಿಸುತ್ತಿದ್ದಾರೆ. ನಾನು ಕಾನೂನಿಗೆ ವಿರುದ್ದವಾಗಿ ಯಾವುದೇ ತಪ್ಪು ಮಾಡಿಲ್ಲ. ನನ್ನ ಪ್ರತಿಯೊಂದು ವ್ಯವಹಾರಕ್ಕೂ ದಾಖಲೆಗಳಿವೆ.

ಐಟಿ ಮತ್ತು ಇಡಿ ಕೇಳಿದ ಪ್ರತಿಯೊಂದು ದಾಖಲೆಗಳನ್ನು ನೀಡಿದ್ದೇನೆ. ಆದರೆ ಸಂಬಂಧವಿಲ್ಲದ ಪ್ರಶ್ನೆಗಳನ್ನು ಕೇಳಿದಾಗ ನನಗೆ ಗೊತ್ತಿಲ್ಲ ಎಂದಷ್ಟೇ ಉತ್ತರಿಸಿದ್ದೇನೆ. ನಾನು ವಿಚಾರಣೆಗೆ ಸಹಕಾರ ನೀಡುತ್ತಿಲ್ಲ ಎಂದು ಇಡಿ ಬಂಧಿಸಿದೆ. ಇವೆಲ್ಲವೂ ಬಿಜೆಪಿ ನಾಯಕರ ಪಿತೂರಿ. ಇಂದಲ್ಲ ನಾಳೆ ನನಗೆ ನ್ಯಾಯಾಲಯದಿಂದ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಶಿವಕುಮಾರ್ ತಮ್ಮ ನೋವು ಹೊರಹಾಕಿದರು.

ಈ ವೇಳೆ ಸಾಂತ್ವನ ಹೇಳಿದ ಸೋನಿಯಾ ಗಾಂಧಿ ಅವರು ನಿಮಗೆ ಏನೇ ಕಷ್ಟ ಬಂದರೂ ಪಕ್ಷ ದೂರ ಮಾಡುವುದಿಲ್ಲ. ಕಾನೂನಿನ ನೆರವು ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡಲಿದ್ದೇವೆ. ಇಂದಲ್ಲ ನಾಳೆ ನ್ಯಾಯಾಲಯ ನಿಮ್ಮನ್ನು ಆರೋಪ ಮುಕ್ತಗೊಳಿಸುತ್ತದೆ ಎಂದು ಸಮಾಧಾನ ಹೇಳಿ ನಿರ್ಗಮಿಸಿದರು.

ಈ ವೇಳೆ ಕೇಂದ್ರದ ಮಾಜಿ ಸಚಿವೆ ಅಂಬಿಕಾ ಸೋನಿ ಹಾಜರಿದ್ದರು. ಸೋನಿಯಾ ಗಾಂಧಿ ಭೇಟಿಯಾದ ಬಳಿಕ ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಇಂದು ನಮ್ಮ ಪಕ್ಷದ ಅಧಿನಾಯಕಿ ನಮ್ಮ ಸೋದರ ಶಿವಕುಮಾರ್ ಅವರನ್ನು ಭೇಟಿಯಾಗಿದ್ದರಿಂದ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದರು.

ಶಿವಕುಮಾರ್ ಈವರೆಗೂ ಧೃತಿಗೆಟ್ಟಿಲ್ಲ. ವಿಚಾರಣೆಗೆ ಎಲ್ಲ ರೀತಿಯ ಸಹಕಾರ ಕೊಟ್ಟಿದ್ದಾರೆ. ಆದರೆ ಇಡಿಯವರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ನ್ಯಾಯಾಲಯದಲ್ಲಿ ಇಂದು ಜಾಮೀನು ಅರ್ಜಿಯ ವಿಚಾರಣೆಯ ತೀರ್ಪು ಪ್ರಕಟವಾಗಲಿದೆ. ದೇವರ ದಯೆಯಿಂದ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.

Facebook Comments

Sri Raghav

Admin