ಕಾಂಗ್ರೆಸ್ ನಾಯಕತ್ವದ ಹೈಡ್ರಾಮಾ : ಅಸಮಾಧಾನ ಹೊರಹಾಕಿದ ಕಪಿಲ್ ಸಿಬಲ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಆ.25- ಗಾಂಧಿ ಕುಟುಂಬದ ನಾಯಕತ್ವ ಬದಲಾವಣೆ ಕುರಿತು ಭುಗಿಲೆದ್ದ ಭಿನ್ನಾಭಿಪ್ರಾಯ ನಿನ್ನೆ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ (ಸಿಡಬ್ಲ್ಯುಸಿ) ಭಾರೀ ಹೈಡ್ರಾಮಕ್ಕೆ ಕಾರಣವಾಗಿ ಭಿನ್ನಾಭಿಪ್ರಾಯ ಶಮನಗೊಂಡರೂ ಪಕ್ಷದಲ್ಲಿ ಈಗ ಬೂದಿಮುಚ್ಚಿದ ಕೆಂಡದಂತಹ ವಾತಾವರಣವಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಕಾಂಗ್ರೆಸ್ ಧುರೀಣ ಮತ್ತು ಕೇಂದ್ರದ ಮಾಜಿ ಸಚಿವ ಕಪಿಲ್ ಸಿಬಲ್ ಇಂದು ಟ್ವಿಟರ್‍ನಲ್ಲಿ ಪಕ್ಷದ ನಾಯಕತ್ವದ ವಿರುದ್ಧ ಪರೋಕ್ಷವಾಗಿ ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ.

ಕಾಂಗ್ರೆಸ್ ಪಕ್ಷದ ಉನ್ನತ ಹುದ್ದೆಗಿಂತ ದೇಶದ ಹಿತಾಸಕ್ತಿ ಮುಖ್ಯ ಎಂದು ಅವರು ಮಾಡಿರುವ ಟ್ವೀಟ್ ಕಪಿಲ್ ಸಿಬಾಲ್ ಅವರಲ್ಲಿ ಇನ್ನೂ ಹೊಗೆಯಾಡುತ್ತಿರುವ ಭಿನ್ನಮತದ ಸ್ಪಷ್ಟ ಸೂಚನೆಯಾಗಿದೆ.

ನಿನ್ನೆ ಏಳು ತಾಸುಗಳ ಕಾಲ ನಡೆದ ಸಿಡಬ್ಲ್ಯುಸಿ ಸಭೆಯ ನಂತರ ಪಕ್ಷದ ನಾಯಕ ಗುಲಾಂನಬಿ ಅಜಾದ್ ಅವರ ನಿವಾಸದಲ್ಲಿ ಕಪಿಲ್ ಸಿಬಾಲ್, ಮುಖಂಡರಾದ ಮುಕುಲ್ ವಾಸ್ನಿಕ್ , ಶಶಿತರೂರ್, ಮನೀಶ್ ತಿವಾರಿ ಸೇರಿದಂತೆ ಭಿನ್ನಮತ ಪತ್ರಕ್ಕೆ ಸಹಿ ಮಾಡಿದ್ದ ಕೆಲವರು ಭಾಗಹಿಸಿದ್ದರು.

ಸಭೆಯಲ್ಲಿ ರಾಹುಲ್ ಗಾಂ ಅವರ ಹೇಳಿಕೆ ಮತ್ತು ತಮ್ಮ ಪಕ್ಷದ ಸಂಪೂರ್ಣ ನಿಷ್ಠೆ ಬಗ್ಗೆ ವ್ಯಕ್ತವಾದ ಅನುಮಾನಗಳ ಬಗ್ಗೆ ಈ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸೋನಿಯಾ ಗಾಂ ನಿಷ್ಠರ ಬಣದ ಕೈ ಮೇಲಾಗಿ ಭಿನ್ನಮತದ ಪಾಳೆಯದ ಮುಖಂಡರಿಗೆ ಮುಖಭಂಗವಾದ ನಂತರ ಪತ್ರಕ್ಕೆ ಸಹಿ ಮಾಡಿರುವ 23 ನಾಯಕರಲ್ಲಿ ತೀವ್ರ ಅಸಮಾಧಾನವಾಗಿರುವುದು ಗುಟ್ಟಾಗಿ ಉಳಿದಿಲ್ಲ.
ಎಐಸಿಸಿ ಅವೇಶನದಲ್ಲಿ ಹೊಸ ನಾಯಕತ್ವ ಆಯ್ಕೆ ಕುರಿತು ಹೊರಬೀಳುವ ತೀರ್ಮಾನದವರೆಗೂ ತಾಳ್ಮೆಯಿಂದ ಕಾದುನೋಡುವ ತಂತ್ರವನ್ನು ಈ ಭಿನ್ನಮತ ನಾಯಕರು ಅನುಸರಿಸಿದ್ದಾರೆ.

ಈ ಮುಖಂಡರಿಗೆ ಸಮ್ಮತವಾಗದೇ ಇರುವ ಹೊಸ ನಾಯಕ ಆಯ್ಕೆಯಾದ ಪಕ್ಷದಲ್ಲಿ ಭಿನ್ನಮತ ಮತ್ತೆ ಸ್ಪೋಟಗೊಳ್ಳುವ ಸಾಧ್ಯತೆ ಇದೆ. ಒಟ್ಟಾರೆ ಕಾಂಗ್ರೆಸ್‍ನಲ್ಲಿ ಈಗ ಭಿನ್ನಮತ ಶಮನವಾಗುವಂತೆ ಕಂಡುಬಂದರೂ ಬೂದಿಮುಚ್ಚಿದ ಕೆಂಡದ ವಾತಾವರಣವಿದೆ.

ಸೋನಿಯಾ ಗಾಂ ನಾಯಕತ್ವ ಬದಲಾವಣೆಗಾಗಿ 23 ಹಿರಿಯ ಮುಖಂಡರು ಬರೆದ ಪತ್ರ ನಿನ್ನೆಯ ಸಿಡಬ್ಲ್ಯುಸಿ ಸಭೆಯಲ್ಲಿ ಭಾರೀ ಚರ್ಚೆ ಕೋಲಾಹಲ ವಾತಾವರಣಕ್ಕೆ ಕಾರಣವಾಗಿತ್ತು.

ಪತ್ರ ಬರೆದಿರುವವರು ಬಿಜೆಪಿ ಜೊತೆ ಶಾಮೀಲಾಗಿದ್ದಾರೆ ಎಂಬ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂ ಅವರು ನೀಡಿದರು ಎನ್ನಲಾದ ಹೇಳಿಕೆ ಹಿರಿಯ ಮುಖಂಡರನ್ನು ಕೆರಳಿಸಿತು.

ಹಿರಿಯ ಧುರೀಣ ಮತ್ತು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಂನಬಿ ಅಜಾದ್ ರಾಹುಲ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಬಿಜೆಪಿ ಜೊತೆ ಶಾಮೀಲಾಗಿದ್ದಾರೆ ಎಂಬ ಆರೋಪ ಸಾಬೀತಾದಾರೆ ರಾಜೀನಾಮೆ ನೀಡುವುದಾಗಿ ಗುಡುಗಿದರು.

ನಂತರ ನಡೆದ ಬೆಳವಣಿಗೆಯಲ್ಲಿ ಸುದೀರ್ಘ ಚರ್ಚೆ ಬಳಿಕ ಭಿನ್ನಮತ ತಾತ್ಕಾಲಿಕವಾಗಿ ಶಮನವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಯವರನ್ನೇ ಇನ್ನು ಆರು ತಿಂಗಳ ಕಾಲ ಹಂಗಾಮಿ ಅಧ್ಯಕ್ಷರನ್ನಾಗಿ ಮುಂದುವರೆಸುವ ನಿರ್ಧಾರವನ್ನು ಕೈಗೊಳ್ಳಲಾಯಿತು.

ಎಐಸಿಸಿ ಅವೇಶನದಲ್ಲಿ ಹೊಸ ನಾಯಕರನ್ನು ಆಯ್ಕೆ ಮಾಡುವ ಮತ್ತು ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.

Facebook Comments

Sri Raghav

Admin