ಮನುಕುಲಕ್ಕೆ ಸವಾಲಾದ ಹೆಮ್ಮಾರಿ ಏಡ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಶತಶತಮಾನಗಳಿಂದ ಮನು ಕುಲವನ್ನು ಅನೇಕ ಸಾಂಕ್ರಾಮಿಕ ರೋಗ- ರುಜಿನಗಳು ಕಾಡುತ್ತಿವೆ. ಪ್ಲೇಗ್, ಸಿಡುಬು, ಕಾಲರಾ, ಕ್ಷಯ, ಕ್ಯಾನ್ಸರ್, ಗೊನ್ರೆರಿಯಾ, ಸಿಪಿಲಿಸ್ ಇತ್ಯಾದಿ. ಈ ಕಾಯಿಲೆಗಳು ಮಾನವನ ಅಸ್ತಿತ್ವಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದವು. ಇವುಗಳಲ್ಲಿ ಹೃದಯ ವಿದ್ರಾವಕ ಮತ್ತು ಮಾರಕ ರೋಗವೆಂದರೆ ಏಡ್ಸ್. 1981ರಲ್ಲಿ ಕಾಣಿಸಿಕೊಂಡ ಈ ಹೆಮ್ಮಾರಿ ಮಾನವನನ್ನು ಕಾಡುತ್ತಲೆ ಇದೆ.

ಇವುಗಳಲ್ಲಿ ಬಹಳಷ್ಟು ರೋಗಗಳನ್ನು ಔಷಧಿಗಳಿಂದ ಗುಣಪಡಿಸಬಹುದು. ಆದರೆ, ಏಡ್ಸ್ ಮತ್ತು ಕ್ಯಾನ್ಸರ್‍ನಂಥ ರೋಗಗಳನ್ನು ಗುಣಪಡಿಸಲು ಈ ಕ್ಷಣದಲ್ಲೂ ಸಂಶೋಧನೆಗಳು ಮುಂದುವರೆದಿವೆ. ಮನಸೋ ಇಚ್ಚೆಯ ಜೀವನಶೈಲಿ ಮತ್ತು ಸ್ವೇಚ್ಛಾಚಾರದ ಮಂದಿಗೆ ಈ ಭಯಾನಕ ರೋಗ ಅಮರಿಕೊಳ್ಳುತ್ತದೆ.  ಈ ರೋಗದ ಪ್ರಭಾವದಿಂದ ರೋಗಿಗಳು ತಾರತಮ್ಯ, ತಾತ್ಸಾರ ಮತ್ತು ನಿರಾಕರಣೆಗೆ ಒಳಗಾಗುತ್ತಾರೆ. ಇದು ಕುಟುಂಬಗಳು, ಸಮುದಾಯಗಳು, ಕೆಲಸ ಮಾಡುವ ಸ್ಥಳಗಳು, ಶಾಲಾ-ಕಾಲೇಜುಗಳು ಮತ್ತು ಆರೋಗ್ಯ ಆರೈಕೆ ಕೇಂದ್ರಗಳ ಮೇಲೆ ಪರಿಣಾಮ ಬೀರುತ್ತದೆ.

ಹೆಚ್‍ಐವಿ/ಏಡ್ಸ್: ಅಕ್ವೈರ್ಡ್ ಇಮ್ಯೂನೋ ಡಿಫಿಸಿಯೆನ್ಸಿ ಸಿಂಡೋಮ್‍ಇದು ಹೆಚ್‍ಐವಿ-ಹ್ಯೂಮನ್ ಇಮ್ಯೂನೋ ಡಿಫಿಸಿಯೆನ್ಸಿ ವೈರಸ್ ಎಂಬ ಸೂಕ್ಷ್ಮಜೀವಿಯಿಂದ ಕಂಡು ಬರುತ್ತದೆ. ಈ ವೈರಾಣು ದೇಹದ ರೋಗ ಪ್ರತಿರೋಧಕ ಶಕ್ತಿಯನ್ನು ಹಾನಿಗೊಳಿಸುತ್ತದೆ.  ದೇಹದ ರೋಗ-ನಿರೋಧಕ ಶಕ್ತಿ ಒಮ್ಮೆ ಕುಂಠಿತಗೊಂಡರೆ, ಬ್ಯಾಕ್ಟೀರಿಯ, ಫಂಗೈ, ವೈರಸ್‍ನಂಥ ವಿವಿಧ ಸೂಕ್ಷ್ಮ ಜೀವಿಗಳು ಹಾಗೂ ಇತರ ಪರಾವಲಂಬಿಗಳು ದೇಹದ ಮೇಲೆ ದಾಳಿ ನಡೆಸಿ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ರೋಗ-ಪ್ರತಿರೋಧಕ ಕುಂಠಿತಗೊಳ್ಳುವುದರಿಂದ ಹಾಗೂ ಬಹು ಸೋಂಕುಗಳು ತಗಲುವುದರಿಂದ ಕ್ಯಾನ್ಸರ್ ಸಹ ಅಮರಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಹೆಚ್‍ಐವಿ/ಏಡ್ಸ್ ಅಂಕಿ-ಅಂಶಗಳು: ವಿಶ್ವಾದ್ಯಂತ 65 ದಶಲಕ್ಷಕ್ಕೂ ಅಧಿಕ ಮಂದಿ ಹೆಚ್‍ಐವಿ ಸೋಂಕಿನಿಂದ ಬಳಲುತ್ತಿದ್ದಾರೆ. ಈ ಮಾರಕ ರೋಗಕ್ಕೆ ಈಗಾಗಲೇ 25 ದಶಲಕ್ಷ ಜನರು ಬಲಿಯಾಗಿದ್ದಾರೆ.  ಜಗತಿಕವಾಗಿ ಕಾಡುತ್ತಿರುವ ಈ ಮಹಾಮಾರಿ ಉಪಟಳದ ಬಗ್ಗೆ ವಿಶ್ವಸಂಸ್ಥೆಯ ವರದಿ ಅಂದಾಜು ಮಾಡಿರುವಂತೆ ಭಾರತವು 5.7 ದಶಲಕ್ಷ ಎಚ್‍ಐವಿ, ಏಡ್ಸ್ ಸೋಂಕಿತ ವ್ಯಕ್ತಿಗಳೊಂದಿಗೆ ದಕ್ಷಿಣ ಆಫ್ರಿಕಾವನ್ನೂ ಹಿಂದಿಕ್ಕಿದೆ. ದಕ್ಷಿಣ ಆಫ್ರಿಕಾದಲ್ಲಿ 5.5 ದಶಲಕ್ಷದಷ್ಟು ಎಚ್‍ಐವಿ, ಏಡ್ಸ್ ಸೋಂಕಿತ ಜನರಿದ್ದಾರೆ.

ಈ ಮಾರಕ ರೋಗದಿಂದ ಪುರುಷರು ಮತ್ತು ಮಹಿಳೆಯರು ಸಮನಾಗಿ ಬಳಲುತ್ತಾರೆ. ಈ ಹೆಮ್ಮಾರಿ ಬಹುತೇಕ 15 ರಿಂದ 49 ವರ್ಷದ ವಯೋ ಮಾನದ ವರನ್ನು ಕಾಡುತ್ತದೆ.
ರೋಗ ಲಕ್ಷಣಗಳು ಮತ್ತು ಚಿಹ್ನೆಗಳು: ಎಚ್‍ಐವಿ ಮತ್ತು ಏಡ್ಸ್ ರೋಗ ಲಕ್ಷಣಗಳು ಸೋಂಕಿನ ತೀವ್ರತೆ ಆಧಾರದ ಮೇಲೆ ಭಿನ್ನ-ವಿಭಿನ್ನವಾಗಿರುತ್ತದೆ. ಆರಂಭಿಕ ಹಂತದಲ್ಲಿ ವ್ಯಕ್ತಿಯಲ್ಲಿ ಇದರ ಯಾವುದೇ ಲಕ್ಷಣ ಮತ್ತು ಚಿಹ್ನೆಗಳು ಕಂಡುಬರುವುದಿಲ್ಲ. ಆದರೆ ಫ್ಲೂನಂಥ ರೋಗದ ಸೋಂಕಿನ ಹಲವಾರು ವಾರಗಳ ಬಳಿಕ ಲಕ್ಷಣಗಳು ಸಾಮಾನ್ಯವಾಗಿ ಕಂಡು ಬರುತ್ತದೆ.

ಜ್ವರ, ತೂಕ ಇಳಿಕೆ, ತಲೆನೋವು, ಗಂಟಲು ಹುಣ್ಣು, ಲಂಫ್ ಗಂಥಿಯ ಊತ (ಇದು ಹೆಚ್‍ಐವಿ ಸೋಂಕಿನ ಮೊದಲ ಲಕ್ಷಣಗಳಲ್ಲಿ ಒಂದು) ಈ ರೀತಿಯ ಗುಣ ಲಕ್ಷಣಗಳ ಚಿಹ್ನೆಗಳು ಗೋಚರಿಸುತ್ತವೆ. ರಾತ್ರಿ ವೇಳೆ ಧಾರಾಕಾರ ಬೆವರು, ಹಲವು ವಾರಗಳ ಕಾಲ ಚಳಿ ಜ್ವರ ಅಥವಾ 100 ಡಿಗ್ರಿ ಫ್ಯಾರನ್‍ಹೀಟ್‍ಗಿಂತ ಅಧಿಕ ತಾಪಮಾನದ ಜ್ವರ, ದೀರ್ಘಕಾಲ ಅತಿಸಾರ, ನಿರಂತರ ತಲೆನೋವು.

ಎಚ್‍ಐವಿ ಪಾಸಿಟಿವ್ ಇರುವ ಮಕ್ಕಳಲ್ಲಿ ತೂಕ ವೃದ್ಧಿ ವಿಫಲವಾಗಿರುತ್ತದೆ ಮತ್ತು ಸಾಮಾನ್ಯ ಬೆಳವಣಿಗೆ ಕುಂಠಿತವಾಗಿರುತ್ತದೆ. ರೋಗ ಮುಂದುವರೆದಂತೆ ನಡೆದಾಡಲು ಕಷ್ಟವಾಗುತ್ತದೆ. ಮಾನಸಿಕ ಬೆಳವಣಿಗೆ ವಿಳಂಬವಾಗುತ್ತದೆ. ಕಿವಿ ಸೋಂಕು, ನ್ಯೂಮೋನಿಯಾ ಮತ್ತು ದಡಾರ ಇತ್ಯಾದಿಯಂಥ ಬಾಲ್ಯದ ರೋಗಗಳು ಕಾಣಿಸಿಕೊಳ್ಳುತ್ತವೆ.

ವೈರಸ್ ಹರಡುವಿಕೆ: ಒಮ್ಮೆ ಎಚ್‍ಐವಿ ವೈರಸ್ ದೇಹವನ್ನು ಹೊಕ್ಕರೆ ಅದರ ಮುಖ್ಯ ಗುರಿ ಶರೀರದ ರೋಗ-ನಿರೋಧಕ ವ್ಯವಸ್ಥೆಯನ್ನು ಕುಂಠಿತಗೊಳಿಸುತ್ತದೆ. ವೈರಾಣುಗಳು ದ್ವಿಗುಣಗೊಳ್ಳುತ್ತ ಸಿಡಿ 4 ಲಿಂಫೋಸೈಟ್ಸ್ ರೋಗ-ಪ್ರತಿರೋಧಕ ವ್ಯವಸ್ಥೆಯಾದ ಹೆಲ್ಫರ್ ಟಿ ಕೋಶಗಳನ್ನು ನಾಶಗೊಳಿಸುತ್ತದೆ. ಈ ವೈರಸ್‍ಗಳು ದೇಹದ ಪ್ರತಿರೋಧಕ ಶಕ್ತಿಯನ್ನು ದುರ್ಬಲ ಗೊಳಿಸಲು ದೊಡ್ಡಮಟ್ಟದ ಆಕ್ರಮಣ ನಡೆಸುತ್ತದೆ.

ಈ ಪ್ರಕ್ರಿಯೆ ಯಲ್ಲಿ 10 ಶತಕೋಟಿ ಹೊಸ ಎಚ್‍ಐವಿ ಕಣಗಳು ಪ್ರತಿದಿನ ಉತ್ಪತ್ತಿಯಾಗುತ್ತವೆ. ಈ ಬೃಹತ್ ಮೊತ್ತದ ವೈರಾಣು ಸಂಖ್ಯೆಯನ್ನು ಮಟ್ಟ ಹಾಕಲು ನಮ್ಮ ರೋಗ-ಪ್ರತಿರೋಧಕ ವ್ಯವಸ್ಥೆಯು ಪ್ರತಿ ದಿನ ಎರಡು ಶತಕೋಟಿ ಹೊಸ ಸಿಡಿ 4 ಕೋಶಗಳನ್ನು ಬಲಿ ಕೊಡುತ್ತದೆ. ಈ ಹೋರಾಟದಲ್ಲಿ ವೈರಾಣುಗಳು ಜಯ ಸಾಧಿಸುತ್ತವೆ. ನಮ್ಮ ದೇಹದಲ್ಲಿನ ಸಿಡಿ4 ಕೋಶಗಳು ಕಾಲ ಕ್ರಮೇಣ ನಶಿಸುತ್ತವೆ . ಇದರಿಂದ ರೋಗ- ಪ್ರತಿರೋಧಕ ಶಕ್ತಿಯ ತೀವ್ರ ಕೊರತೆ ಉಂಟಾಗಿ ವೈರಾಣುಗಳು ಮಾರಕ ಆಕ್ರಮಣವನ್ನು ಮುಂದುವರೆಸುತ್ತದೆ.
ಎಚ್‍ಐವಿ ಹರಡುವಿಕೆ: ಸೋಂಕು ಇರುವ ಸಂಗಾತಿ ಜೊತೆ ಲೈಂಗಿಕ ಕ್ರಿಯೆ ನಡೆಸುವ ಮಂದಿಯಲ್ಲಿ ಇದು ಹರಡುತ್ತದೆ. ಈಗಾಗಲೇ ಯಾವುದೇ ವ್ಯಕ್ತಿ ಬೇರೆ ಲೈಂಗಿಕವಾಗಿ ಹರಡುವ ರೋಗವನ್ನು ಹೊಂದಿದ್ದರೆ, ಆತ, ಆಕೆಗೆ ಹೆಚ್‍ಐವಿ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಕೆಲವು ಪ್ರಕರಣಗಳಲ್ಲಿ ರಕ್ತದ ಮೂಲಕ ವೈರಾಣುಗಳು ಹರಡುತ್ತವೆ. ಸೋಂಕು ರಕ್ತದೊಂದಿಗೆ ಕಲುಷಿತಗೊಂಡ ಶುಚಿತ್ವವಿಲ್ಲದ ಸೂಜಿಗಳು, ದಂತ ಮತ್ತು ಶಸ್ತ್ರಕ್ರಿಯೆ ಉಪಕರಣಗಳ ಮೂಲಕ ಹೆಚ್‍ಐವಿ ಹರಡುತ್ತದೆ.  ಪ್ರತಿ ವರ್ಷ ಸುಮಾರು 7,00,000 ಶಿಶುಗಳು ಗರ್ಭಧಾರಣೆ ಸಂದರ್ಭದಲ್ಲಿ ಅಥವಾ ಸ್ತನಪಾನದ ಮೂಲಕ ಹೆಚ್‍ಐವಿ ಸೋಂಕಿಗೆ ಒಳಗಾಗುತ್ತವೆ.

ತಪ್ಪು ಕಲ್ಪನೆ: ಆಲಿಂಗನ, ನೃತ್ಯ ಅಥವಾ ಹಸ್ತ ಲಾಘವ. ಬೆವರು ಅಥವಾ ಕಣ್ಣೀರಿನೊಂದಿಗಿನ ಸಂಪರ್ಕ. ಆಹಾರ, ಪಾತ್ರೆಗಳು, ಟವೆಲ್‍ಗಳು ಅಥವಾ ಹಾಸಿಗೆ, ಈಜುಕೊಳ, ಫೆÇೀನ್ ಅಥವಾ ಶೌಚಾಲಯ ಬಳಸಿದರೆ, ತಿಗಣೆ ಅಥವಾ ಸೊಳ್ಳೆ ಕಚ್ಚಿದರೆ ಏಡ್ಸ್ ರೋಗಿಗೆ ಚುಂಬಿಸುವುದರಿಂದ ಎಚ್‍ಐವಿ ಹರಡುತ್ತದೆ ಎಂಬ ತಪ್ಪುಕಲ್ಪನೆ ಇದೆ.

ರೋಗ ನಿರ್ಧಾರ: ಹೆಚ್‍ಐವಿ ಸೋಂಕನ್ನು ಸಾಮಾನ್ಯವಾಗಿ ಇಎಲ್‍ಐಎಸ್‍ಎ-ಎಲಿಸಾ ಪರೀಕ್ಷೆ ಮೂಲಕ ನಿರ್ಧರಿಸಲಾಗುತ್ತದೆ. ವೈರಸ್ ಇರುವುದನ್ನು ತಿಳಿದುಕೊಳ್ಳಲು ವೆಸ್ಟರ್ನ್ ಬ್ಲಾಟ್ ಟೆಸ್ಟ್ ಎಂಬ ಪರೀಕ್ಷೆ ಮಾಡಲಾಗುತ್ತದೆ. ಈ ಟೆಸ್ಟ್ ಸ್ಯಾಂಪಲ್‍ಗಳಿಗಾಗಿ ರಕ್ತ, ಮೂತ್ರ, ಎಂಜಲು ಅಥವಾ ಬುಕಲ್ ಸ್ವಾಬ್ ಮಾದರಿಗಳನ್ನು ಪಡೆಯಲಾಗುತ್ತದೆ. ಈ ಸಿಡಿ4 ಕೋಶವು ಕಟಿಂಗ್ ಮಾಡುವುದರಿಂದ ಎಚ್‍ಐವಿ ಸೋಂಕು ದೃಢಪಡುತ್ತದೆ.

ತೊಡಕುಗಳು: ಎಚ್‍ಐವಿ ಸೋಂಕು ರೋಗ-ಪ್ರತಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ನ್ಯುಮೋನಿಯಾ, ಕ್ಷಯ, ಸಾಲ್ಮೋನೆಲ್ಲೋಸಿಸ್ ಇತ್ಯಾದಿಯಂಥ
ಬ್ಯಾಕ್ಟೀರಿಯಾ ಸೋಂಕುಗಳು ಹಾಗೂ ಬಂಜೆತನ ಉಂಟಾಗುತ್ತದೆ.

ಚಿಕಿತ್ಸೆ: ಜೀವನಚಕ್ರದ ವಿವಿಧ ಹಂತಗಳಲ್ಲಿ ಎಚ್‍ಐವಿ ಬೆಳವಣಿಗೆ ಮತ್ತು ಮರು ಕಳುಹಿಸುವುದನ್ನು ತಡೆಗಟ್ಟಲು ಆ್ಯಂಟಿ ರಿಟ್ರೋವೈರಲ್ ಔಷಧಿಗಳನ್ನು ನೀಡಲಾಗುತ್ತದೆ. ಈ ಔಷಧಿಗಳ ಹಲವಾರು ವರ್ಗಗಳು ಲಭ್ಯವಿದೆ.

ತಡೆಗಟ್ಟುವಿಕೆ: ಎಚ್‍ಐವಿ ಸೋಂಕು ತಡೆಗಟ್ಟಲು ಯಾವುದೇ ಲಸಿಕೆ ಇಲ್ಲ ಹಾಗೂ ಏಡ್ಸ್ ಅನ್ನು ಗುಣಪಡಿಸಲಾಗದು. ಆದರೆ, ನಮಗೆ ನಾವೇ ಈ ಮಾರಕ ಸೋಂಕಿನಿಂದ ರಕ್ಷಿಸಿಕೊಳ್ಳಲು ಸಾಧ್ಯವಿದೆ.  ಹೆಚ್ಚು ಸುಶಿಕ್ಷಿತರಾಗಬೇಕು. ಆಸ್ಪತ್ರೆಯಲ್ಲಿ ಸ್ವಚ್ಛ ಸ್ಟಿರಿಲೈಸ್ ಆದ ಸೂಜಿಗಳ ಬಳಕೆ ಮಾಡಬೇಕು. ಆಗಾಗ ತಪಾಸಣೆಗೆ ಒಳಗಾಗಬೇಕು. ಅಸುರಕ್ಷಿತ ಲೈಂಗಿಕ ಕ್ರಿಯೆ ಮಾಡಬಾರದು.

Facebook Comments