ಎಪಿಎಂಸಿ ಆವರಣದಲ್ಲಿ ಏರ್‌ಗನ್‌ನಿಂದ ಫೈರ್ ಮಾಡಿದ್ದ ಅಪ್ಪ-ಮಗನ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಡಿ.3- ಎಪಿಎಂಸಿ ಆವರಣದಲ್ಲಿ ಏರ್‌ಗನ್‌ ಮೂಲಕ ಗುಂಡು ಹಾರಿಸಿ ನಾಗರಿಕರನ್ನು ಆತಂಕಕ್ಕೀಡು ಮಾಡಿದ್ದ ಅಪ್ಪಮಗನನ್ನು ಕ್ಯಾತಸಂದ್ರ ಠಾಣೆ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.  ದೇವರಾಯ ಪಟ್ಟಣದ ನಿವಾಸಿಗಳಾದ ತಂದೆ ಚಿಕ್ಕರಾಮಯ್ಯ(55), ಮಗ ಅಶೋಕ್(18) ಬಂಧಿತ ಆರೋಪಿಗಳು.

ತುಮಕೂರು ಹೊರಭಾಗದ ಕ್ಯಾತಸಂದ್ರ ವ್ಯಾಪ್ತಿಯ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದ ಬಳಿ ರಾತ್ರಿ 11 ಗಂಟೆ ಸುಮಾರಿನಲ್ಲಿ ಇವರಿಬ್ಬರು ಏರ್‍ಗನ್ ಹಿಡಿದು ಓಡಾಡುತ್ತಿದುದ್ದನ್ನು ಸಾರ್ವಜನಿಕರು ಗಮನಿಸಿದ್ದಾರೆ. ಅಲ್ಲದೆ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಆತಂಕಗೊಂಡ ನಾಗರಿಕರು ತಕ್ಷಣ ಎಸ್‍ಪಿ ಕೋನವಂಶಿಕೃಷ್ಣ ಅವರಿಗೆ ಮಾಹಿತಿ ನೀಡಿದ್ದಾರೆ. ಕ್ಯಾತಸಂದ್ರ ಠಾಣೆ ಸಬ್‍ಇನ್‍ಸ್ಪೆಕ್ಟರ್ ರಾಮ್‍ಪ್ರಸಾದ್ ಅವರಿಗೆ ಸ್ಥಳಕ್ಕೆ ಹೋಗುವಂತೆ ಎಸ್‍ಪಿ ಸೂಚಿಸಿದ್ದಾರೆ.

ಸ್ಥಳಕ್ಕೆ ಡಿವೈಎಸ್ಪಿ ತಿಪ್ಪೇಸ್ವಾಮಿ, ಕ್ಯಾತಸಂದ್ರ ವೃತ್ತ ನಿರೀಕ್ಷಕ ಶ್ರೀಧರ್, ಸಬ್ ಇನ್‍ಸ್ಪೆಕ್ಟರ್ ರಾಮಪ್ರಸಾದ್ ಅವರು ತೆರಳಿ ಸುತ್ತಮುತ್ತಲಿನ ಸಿಸಿಟಿವಿ ಫುಟೇಜ್‍ನ್ನು ಪರಿಶೀಲಿಸಿ ಬಂದೂಕು ಹಿಡಿದು ಓಡಾಡುತ್ತಿದ್ದ ಅಪ್ಪ ಮಗನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಬ್ಬರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಎಪಿಎಂಸಿ ಆವರಣದ ಬಳಿ ಕಳ್ಳರು ಬಂದಿದ್ದರು. ಅದಕ್ಕಾಗಿ ನಾವು ಫೈರ್ ಮಾಡಿದೆವು ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ.  ಒಟ್ಟಾರೆ ಇವರು ಲೈಸೆನ್ಸ್ ಇಲ್ಲದ ಏರ್‍ಗನ್‍ನನ್ನು ಏತಕ್ಕೆ ಇಟ್ಟುಕೊಂಡಿದ್ದರು ಎಂಬ ಬಗ್ಗೆ ತನಿಖೆ ಮುಂದುವರೆದಿದೆ.

ಇತ್ತೀಚೆಗಷ್ಟೇ ಅಮೆರಿಕದಲ್ಲಿ ಲೈಸೆನ್ಸ್ ಪಡೆದು ಬಳಕೆಯಾಗುತ್ತಿದ್ದ ಏರ್‌ಗನ್‌ನನ್ನು ಭಾರತದಲ್ಲಿ ನಿಷೇಧ ಹೇರಿದ್ದರೂ ಕೂಡ ಅಂತಹ ಗನ್‍ನ್ನು ತೆಗೆದುಕೊಂಡು ಕಾಡುಪ್ರಾಣಿಗಳ ಬೇಟೆಗೆ ಬಳಸುತ್ತಿದ್ದರು.  ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಾರಹಳ್ಳಿ ಅಂಡರ್‍ಪಾಸ್ ಬಳಿ ಗುಬ್ಬಿನಗರದ ಪ್ರಭಾವಿಯೊಬ್ಬರು ಏರ್‌ಗನ್‌ ಇಟ್ಟುಕೊಂಡಿದ್ದಾಗ ಸಿಕ್ಕಿಬಿದ್ದಿದ್ದರು.
ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಏರ್‌ಗನ್‌ ಬಳಕೆ ಮಾಡಿರುವುದು ಬಹಳಷ್ಟು ಅನುಮಾನ ವ್ಯಕ್ತವಾಗಿದೆ.

Facebook Comments