ಏರ್ ಇಂಡಿಯಾ ಮಾರಾಟ ಕುರಿತಂತೆ ಪ್ರತಿಕ್ರಿಯೆ ನೀಡಿದ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ಲಕ್ನೋ, ಅ.20- ದೇಶದಲ್ಲಿ ಆರ್ಥಿಕ ಸುಭದ್ರತೆ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ತಿಳಿಸಿದ್ದಾರೆ. ಖುಷಿ ನಗರದಲ್ಲಿ ಇಂದು ನೂತನ ವಿಮಾನ ನಿಲ್ದಾಣ ಉದ್ಘಾಟಿಸಿ ಮಾತನಾಡಿದ ಅವರು, ದೇಶದಾದ್ಯಂತ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶಗಳಿದ್ದು, ಅದನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಸಂಪರ್ಕ ಪ್ರಮುಖ ವಿಷಯವಾಗಿದ್ದು, ಈ ನಿಟ್ಟಿನಲ್ಲಿ ವಿಮಾನ ಯಾನಕ್ಕೆ ಹೊಸ ಕಾಯಕಲ್ಪ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಗೌತಮ ಬುದ್ಧನ ಪವಿತ್ರ ಕ್ಷೇತ್ರವಾದ ಖುಷಿ ನಗರ್‍ನಲ್ಲಿ ಅಭಿವೃದ್ಧಿ ಕಾಮಗಾರಿಗಳು ಶರವೇಗದಲ್ಲಿ ನಡೆಯಲಿದ್ದು , ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಎಲ್ಲಾ ರೀತಿಯ ಸಹಕಾರ ನೀಡುತ್ತದೆ ಎಂದು ತಿಳಿಸಿದರು. ಇದೇ ವೇಳೆ ಏರ್ ಇಂಡಿಯಾ ಷೇರು ಮಾರಾಟ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಸಾರ್ವಜನಿಕರ ಸುರಕ್ಷತೆ ಮತ್ತು ಸುಲಲಿತವಾಗಿ ಉದ್ಯಮ ಮುಂದುವರೆಯಲು ನಾವು ಈ ದೊಡ್ಡ ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ಇದರಿಂದಾಗಿ ದೇಶದಲ್ಲಿ ವೈಮಾನಿಕ ಕ್ಷೇತ್ರಕ್ಕೆ ಹೊಸ ಶಕ್ತಿ ಸಿಗಲಿದೆ ಎಂದು ತಿಳಿಸಿದ ಅವರು, ಈಗಾಗಲೇ ರಕ್ಷಣಾ ಇಲಾಖೆಯ ಸುಪರ್ದಿಯಲ್ಲಿರುವ ವಾಯು ನೆಲೆಗಳನ್ನು ಪ್ರಯಾಣಿಕರ ವಿಮಾನ ಯಾನಕ್ಕೂ ಅವಕಾಶ ಮಾಡಿಕೊಡುವ ಯೋಜನೆಯನ್ನು ಕೂಡ ಹಾಕಿಕೊಂಡಿರುವುದಾಗಿ ಅವರು ತಿಳಿಸಿದರು.

Facebook Comments