ದೇಶದೆಲ್ಲೆಡೆ ಶುದ್ಧಗಾಳಿ ಕೊರತೆ : ದೆಹಲಿ, ಹರಿಯಾಣ, ಯುಪಿ ಪರಿಸ್ಥಿತಿ ಗಂಭೀರ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ನ.20- ದೆಹಲಿಯ ನಂತರ ವಿವಿಧ ರಾಜ್ಯಗಳಲ್ಲಿ ಜೀವ ವಾಯುವಿನ ಗುಣಮಟ್ಟ ಕುಸಿತವಾಗಿ ಅಪಾಯಕಾರಿ ಹಂತ ತಲುಪಿರುವ ವೇಳೆಯಲ್ಲೇ ಕರ್ನಾಟಕದಲ್ಲಿ ಮಾಲಿನ್ಯದ ಪ್ರಮಾಣ ಗರಿಷ್ಠ ಮಟ್ಟದಲ್ಲಿ ತಗ್ಗಿದ್ದು, ಶುದ್ದ ವಾಯು ಸೇವ ನೆಗೆ ಅವಕಾಶ ಸಿಕ್ಕಿದೆ.  ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಗರಿಷ್ಠ ಮಟ್ಟ ತಲುಪಿದ್ದು, ಕರ್ನಾಟಕದಲ್ಲಿ ಅತಿ ಕಡಿಮೆ ಸೂಚ್ಯಂಕ ದಾಖಲಾಗಿದೆ.

ಅದರಲ್ಲೂ ದಕ್ಷಿಣ ಭಾರತದ ಕಾಶ್ಮೀರ ಎಂದೇ ಖ್ಯಾತಿಯಾಗಿರುವ ಮಡಿಕೇರಿಯಲ್ಲಿ ಅತಿ ಕಡಿಮೆ ಮಾಲಿನ್ಯ ವರದಿಯಾಗಿದೆ. ರಾಷ್ಟ್ರ ರಾಜಧಾನಿ ಪ್ರದೇಶದ ವಾಯುಗುಣಮಟ್ಟ ಶನಿವಾರ ಅತಿ ಕಳಪೆ ವರ್ಗದಲ್ಲಿಯೇ ಮುಂದುವರೆದಿದೆ. ಆದರೆ ಪ್ರಬಲ ಗಾಳಿ ಬೀಸುವುದರಿಂದಾಗಿ ಭಾನುವಾರ ಪರಿಸ್ಥಿತಿ ಕೊಂಚ ಸುಧಾರಿಸುವುದಾಗಿ ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.

ಇಂದು ಬೆಳಗ್ಗೆ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿರುವ ಮಾಲಿನ್ಯ ಪಟ್ಟಿಯಲ್ಲಿ ದೆಹಲಿಯ ಜಹಾಂಗೀರ್‍ಪುರ್ (439), ಸೆಕ್ಟರ್11 ಫರೀದಾಬಾದ್(425)ದಲ್ಲಿ ಗರಿಷ್ಠ ಪ್ರಮಾಣದ ಮಾಲಿನ್ಯ ದಾಖಲಾಗಿದೆ. ಇಲ್ಲಿ ಪಿಎಂ5, ಪಿಎಂ10 ಮಾಲಿನ್ಯ ಕಣಗಳು ತೀವ್ರವಾಗಿವೆ. ಉಳಿದಂತೆ ದೆಹಲಿಯ ಕೇಂದ್ರ ಭಾಗ, ಉತ್ತರಪ್ರದೇಶದ ನೋಯ್ಡಾ, ಹಾಪುರ್, ಹರಿಯಾಣದ ಹಿಸ್ಸಾರ್, ಗುರುಗ್ರಾಂ ರಾಜಸ್ಥಾನ ಬಿವಾಡಿ, ಮುಜಾಫರ್ ನಗರಗಳಲ್ಲಿ ಗಾಳಿಯ ಗುಣಮಟ್ಟ 350 ಸೂಚ್ಯಂಕಕ್ಕಿಂತ ಮೇಲಿದ್ದು, ಉಸಿರಾಟದ ಸಮಸ್ಯೆ ಎದುರಿಸುವಂತಾಗಿದೆ.

ಒಂದೆಡೆ, ದೆಹಲಿ, ಉತ್ತರಪ್ರದೇಶ, ಹರಿಯಾಣ ಸೇರಿದಂತೆ ಕೆಲವೆಡೆ ಜೀವವಾಯು ವಿಷವಾಗುತ್ತಿದ್ದರೆ, ಅದೃಷ್ಟವಶಾತ್ ಕರ್ನಾಟಕದಲ್ಲಿ ಗಾಳಿಯ ಗುಣಮಟ್ಟ ಉತ್ತಮವಾಗಿದೆ. ಬೆಂಗಳೂರಿನ ಜಯನಗರದ 5ನೇ ಬ್ಲಾಕ್‍ನಲ್ಲಿ 103 ಸೂಚ್ಯಂಕ ದಾಖಲಿಸಿರುವುದು ಹೊರತುಪಡಿಸಿದರೆ ಉಳಿದಂತೆ ಎಲ್ಲ ಕಡೆ ಉತ್ತಮ ಗಾಳಿ ಲಭ್ಯವಿದೆ.

ಅದರಲ್ಲೂ ಕರ್ನಾಟಕದ ಕಾಶ್ಮೀರ ಕೊಡುಗಿನಲ್ಲಿ 19 ಸೂಚ್ಯಂಕ ದಾಖಲಾಗಿದೆ. ದಾವಣಗೆರೆಯಲ್ಲಿ 21, ಬೆಂಗಳೂರು ಹೊಂಬೇಗೌಡನಗರದಲ್ಲಿ 27, ಸಾಣೆಗೊರವನಹಳ್ಳಿಯಲ್ಲಿ 22, ಸಿಲ್ಕ್ ಬೋರ್ಡ್‍ನಲ್ಲಿ 31, ಕಲ್ಯಾಣನಗರದಲ್ಲಿ 29, ಚಿಕ್ಕಬಳ್ಳಾಪುರದಲ್ಲಿ 30, ಮಂಗಳೂರಿನಲ್ಲಿ 58, ಯಾದಗಿರಿಯಲ್ಲಿ 28 ಮಾಲಿನ್ಯ ಸೂಚ್ಯಂಕ ದಾಖಲಾಗಿದೆ.

ಬೆಂಗಳೂರಿನ ಪೀಣ್ಯದಲ್ಲಿ 64 ಸೂಚ್ಯಂಕ ದಾಖಲಾಗಿದ್ದು, ಸಾಮಾನ್ಯ ಮಟ್ಟಕ್ಕಿಂತ 14 ಅಂಶಗಳು ಹೆಚ್ಚಾಗಿದೆ. ಇಲ್ಲಿ ಪಿಎಂ 2.5, ಪಿಎಂ 10 ಗುಣಮಟ್ಟ ಸುಧಾರಣೆಯಾಗಿದೆ. ಹೀಗಾಗಿ ಕರ್ನಾಟಕದ ಜನ ಸದ್ಯಕ್ಕೆ ಸುರಕ್ಷಿತ ವಲಯದಲ್ಲಿದ್ದಾರೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಧೂಳಿನ ಕಣಗಳು ಅಡಗಿವೆ. ಕೋವಿಡ್ ನಂತರ ಬಹಳಷ್ಟು ಚಟುವಟಿಕೆಗಳು ಚೇತರಿಸಿಕೊಂಡಿಲ್ಲ. ಹೀಗಾಗಿ ಪರಿಸರ ಮಾಲಿನ್ಯ ನಿಯಂತ್ರಣದಲ್ಲಿದೆ ಎಂಬ ಲೆಕ್ಕಾಚಾರಗಳು ಕೇಳಿಬಂದಿವೆ.

Facebook Comments