ವಿಮಾನಕ್ಕೆ ಬಳಸುವ ಇಂಧನಕ್ಕಿಂತ ಕಾರು-ಬೈಕ್‍ಗಳ ಪೆಟ್ರೋಲ್ ದುಬಾರಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.17- ಜನಸಾಮಾನ್ಯರು ತಮ್ಮ ಕಾರು ಹಾಗೂ ದ್ವಿಚಕ್ರ ವಾಹನಗಳಿಗೆ ಬಳಸುವ ಪೆಟ್ರೋಲ್‍ನ ಬೆಲೆ ವಿಮಾನಗಳಿಗೆ ಬಳಸುವ ಇಂಧನಕ್ಕಿಂತಲೂ ಶೇ.33ರಷ್ಟು ಹೆಚ್ಚಾಗುವ ಮೂಲಕ ದೇಶದಲ್ಲೇ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಭಾನುವಾರ ಕೂಡ ಪೆಟ್ರೋಲ್, ಡೀಸೆಲ್ ಬೆಲೆ 35 ಪೈಸೆ ಹೆಚ್ಚಳವಾಗಿದ್ದು , ಸತತ 4ನೆ ದಿನ ಕೂಡ ತೈಲ ಬೆಲೆ ಜನಸಾಮಾನ್ಯರನ್ನು ಕಂಗೆಡುವಂತೆ ಮಾಡಿದೆ.

ದೇಶದ 12 ರಾಜ್ಯಗಳಲ್ಲಿ ಸರಕು ಸಾಗಾಣಿಕೆಯ ಡೀಸೆಲ್ ದರ 100 ರೂ. ಗಡಿ ದಾಟಿದೆ. ರಾಜಸ್ತಾನದ ಗಡಿ ಭಾಗವಾಗಿರುವ ಗಂಗಾ ನಗರದಲ್ಲಿ ಪೆಟ್ರೋಲ್ ಬೆಲೆ 117.86 ರೂ. ಡೀಸೆಲ್ 105.95 ರೂ. ಗಳಷ್ಟಾಗಿದೆ. ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು ಸೇರಿದಂತೆ ಅನೇಕ ಮಹಾ ನಗರಗಳಲ್ಲಿ ಪೆಟ್ರೋಲ್ ಬೆಲೆ ದಾಖಲಾರ್ಹ ಮಟ್ಟದಲ್ಲಿ ಏರಿಕೆಯಾಗಿದೆ.

ಕರ್ನಾಟಕದಲ್ಲಿ ಈ ಮೊದಲು ವಿಜಯಪುರ ಹಾಗೂ ಕೆಲವು ಜಿಲ್ಲೆಗಳಲ್ಲಿ ಡೀಸೆಲ್ ದರ 100 ರೂ. ಗಡಿ ದಾಟಿತ್ತು. ಆದರೆ ಇಂದು ರಾಜಧಾನಿ ಬೆಂಗಳೂರಿನಲ್ಲೂ ಶತಕದ ಗಡಿ ದಾಟುವ ಮೂಲಕ ಜನಸಾಮಾನ್ಯರನ್ನು ಬೆಚ್ಚಿ ಬೀಳುವಂತೆ ಮಾಡಿದೆ.

ವಿಮಾನಗಳಿಗೆ ಬಳಸುವ ಏವಿಯೇಷನ್ ಟ್ರುಬೈನ್ ಫ್ಯುಯಲ್ (ಎಟಿಎಫ್) ದರ ಕಿಲೋ ಮೀಟರ್‍ಗೆ 79,020. 16 ರೂ.ಗಳಿದೆ. ಪ್ರತಿ ಲೀಟರ್‍ಗೆ 79 ರೂ.ಗಳಷ್ಟಾಗುತ್ತದೆ. ಆದರೆ ಜನಸಾಮಾನ್ಯರು ಕಾರು ದ್ವಿಚಕ್ರ ವಾಹನಗಳಿಗೆ ಬಳಸುವ ಪೆಟ್ರೋಲ್‍ನ ಬೆಲೆ ಕನಿಷ್ಠ 105 ರಿಂದ 117 ರೂ.ವರೆಗೂ ದರವಿದ್ದು , ಇದು ಎಟಿಎಫ್ ಇಂಧನಕ್ಕಿಂತಲೂ ಶೇ.33ರಷ್ಟು ದುಬಾರಿ ಎಂದು ಅಂಕಿ ಅಂಶಗಳು ಸ್ಪಷ್ಟಪಡಿಸಿವೆ.

ಸೆಪ್ಟೆಂಬರ್ ತಿಂಗಳ ಕೊನೆ ವಾರದಿಂದ ಪೆಟ್ರೋಲ್ ಬೆಲೆ 16 ಬಾರಿ ಹೆಚ್ಚಳವಾಗಿದೆ. ಡೀಸೆಲ್ ಸೆಪ್ಟೆಂಬರ್‍ನಿಂದೀಚೆಗೆ 19 ಬಾರಿ ಏರಿಕೆ ಕಂಡಿದೆ.
ಮಧ್ಯಪ್ರದೇಶ, ರಾಜಸ್ತಾನ, ಒಡಿಸಾ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ , ಛತ್ತೀಸ್‍ಗಢ, ಬಿಹಾರ್, ಕೇರಳ, ಕರ್ನಾಟಕ ಮತ್ತು ಲಡಾಕ್‍ನಲ್ಲಿ ಪೆಟ್ರೋಲ್ 100 ರೂ. ಗಡಿ ದಾಟಿದೆ.

ಆದಾಗ್ಯೂ ಕೂಡ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇಂಧನದ ಮೇಲಿನ ಸ್ಥಳೀಯ ತೆರಿಗೆಯನ್ನು ಕಡಿಮೆ ಮಾಡದೆ ಇರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ದುಬಾರಿಯಾಗಿರುವುದನ್ನೇ ನೆಪವಾಗಿಟ್ಟುಕೊಂಡು ಸೆ.28ರ ಬಳಿಕ ಇಂಧನದ ಬೆಲೆಯನ್ನು ಏರಿಕೆ ಮಾಡಲಾಗಿದ್ದು, ಪೆಟ್ರೋಲ್ ಬೆಲೆ 5.95 ರೂ., ಡೀಸೆಲ್ 4.65 ರೂ. ದರ ಹೆಚ್ಚಿಸಲಾಗಿದೆ.

ಕಳೆದ ಮೇ 4 ರಿಂದ ಜು.19ರ ನಡುವೆ ಪೆಟ್ರೋಲ್ 11.44 ರೂ. ಡೀಸೆಲ್ 9.14 ಪೈಸೆ ಹೆಚ್ಚಳವಾಗಿತ್ತು. ಸತತವಾಗಿ ಏರಿಕೆಯಾಗುತ್ತಿರುವ ಇಂಧನ ಬೆಲೆಯಿಂದ ಸರಕು ಸಾಗಣಿಕೆಯ ಮೇಲೂ ಪರಿಣಾಮ ಬೀರಿದ್ದು ದಿನನಿತ್ಯದ ವಸ್ತುಗಳ ಬೆಲೆ ಕೂಡ ಹೆಚ್ಚಾಗಿದೆ.

Facebook Comments