ಮಹಾಮಾರಿ ಕೊರೊನ ವೈರಸ್ ಭೀತಿ, ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ತೀವ್ರ ಕಟ್ಟೆಚ್ಚರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.24-ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನ ವೈರಸ್ ಸೋಂಕು ರಾಜ್ಯದಲ್ಲಿ ಹಬ್ಬದಂತೆ ವಿಮಾನ ಹಾಗೂ ರೈಲು ನಿಲ್ದಾಣ ಸೇರಿದಂತೆ ಎಲ್ಲೆಡೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ವೈದ್ಯರಿಗೆ ಪ್ರಾಥಮಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕಳೆದ ಎರಡು ದಿನಗಳಿಂದ ಚೀನಾದಿಂದ ಆಗಮಿಸಿರುವ 493 ಪ್ರಯಾಣಿಕರನ್ನು ತಪಾಸಣೆಗೊಳಪಡಿಸಲಾಗಿದ್ದು, ಯಾರೊಬ್ಬರಲ್ಲೂ ಕೊರೊನ ವೈರಸ್ ಸೋಂಕು ತಗುಲಿರುವುದು ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಮುಖವಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣ, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ ವಿಮಾನ ನಿಲ್ದಾಣದಲ್ಲಿ ಹೊರಭಾಗಗಳಿಂದ ಬರುವ ಪ್ರಯಾಣಿಕರನ್ನು ತಪಾಸಣೆಗೊಳಪಡಿಸಲು ನುರಿತ ತಜ್ಞರ ತಂಡವನ್ನು ನಿಯೋಜನೆ ಮಾಡಲಾಗಿದೆ.  ದಿನದ 24 ಗಂಟೆಯೂ ಈ ತಜ್ಞರು ಕಾರ್ಯ ನಿರ್ವಹಿಸಲು ದೇಶ, ವಿದೇಶಗಳಿಂದ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರನ್ನ ತಪಾಸಣೆಗೊಳಪಡಿಸಿ ಕೊರೊನ ವೈರಸ್ ಸೋಂಕಿದೆಯೇ ಎಂಬುದನ್ನು ಪರೀಕ್ಷಿಸುವರು.

ಈಗಾಗಲೇ ವಿಮಾನ ನಿಲ್ದಾಣಗಳಲ್ಲಿ ತಜ್ಞ ವೈದ್ಯರ ತಂಡ ನಿಯೋಜನೆಗೊಂಡಿದ್ದು, ತಪಾಸಣೆಗಾಗಿಯೇ ನಿಲ್ದಾಣಗಳಲ್ಲಿ ಪ್ರತ್ಯೇಕ ಕೌಂಟರ್‍ಗಳನ್ನು ತೆರೆಯಲಾಗಿದೆ. ಚೀನಾದಲ್ಲಿ ಕೊರೊನ ಸೋಂಕು ತಗುಲಿ 25 ಮಂದಿ ಸಾವನ್ನಪ್ಪಿದ್ದು, ಐದು ಮಹಾನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ದುಬೈಯಲ್ಲಿರುವ ಕೇರಳ ಮೂಲದ ನರ್ಸ್‍ವೊಬ್ಬರಿಗೆ ಈ ಸೋಂಕು ತಗಲಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ಇದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳಿಗೂ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದು, ವಿಮಾನ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ತಪಾಸಣೆಗೊಳಪಡಿಸುವಂತೆ ಸೂಚನೆ ಕೊಟ್ಟಿದೆ. ಹೀಗಾಗಿ ರಾಜ್ಯ ಸರ್ಕಾರ ರಾಜ್ಯದ ಪ್ರಮುಖ ವಿಮಾನ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ನಿನ್ನೆಯಿಂದಲೇ ಆರೋಗ್ಯ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.

ವಿಶೇಷವಾಗಿ ಚೀನಾದಿಂದ ರಾಜ್ಯಕ್ಕೆ ಆಗಮಿಸುವ ಪ್ರತಿಯೊಬ್ಬರನ್ನು ಒಂದಲ್ಲ ಮೂರು ಬಾರಿ ತಪಾಸಣೆ ನಡೆಸಲೇಬೇಕೆಂದು ಸಚಿವ ಶ್ರೀರಾಮುಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಅಲ್ಲದೆ ಈ ಸೋಂಕು ತಗುಲದಂತೆ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಸೂಚಿಸಿದ್ದಾರೆ.  ಕೊರೊನ ಸೋಂಕು ನಿಯಂತ್ರಣಕ್ಕೆ ಬರುವವರೆಗೂ ಅಧಿಕಾರಿಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಬೇಕು. ಯಾರಿಗಾದರೂ ವಿಶೇಷ ಜ್ವರ, ನೆಗಡಿ, ಕೆಮ್ಮು ಪದೇ ಪದೇ ಕಾಣಿಸಿಕೊಂಡರೆ ಅಂಥವರನ್ನು ತಕ್ಷಣವೇ ದಾಖಲು ಮಾಡಿಕೊಂಡು ಚಿಕಿತ್ಸೆ ಕೊಡಬೇಕು.

ಒಂದು ವೇಳೆ ಚಿಕಿತ್ಸೆ ಪಡೆಯಲು ಹಿಂದೇಟು ಹಾಕಿದರೆ ಬಲವಂತವಾಗಿಯಾದರೂ ಆಸ್ಪತ್ರೆಗೆ ದಾಖಲಿಸಬೇಕು . ಆಸ್ಪತ್ರೆಯಲ್ಲಿ ಅವರಿಗಾಗಿ ಪ್ರತ್ಯೇಕ ವಾರ್ಡ್‍ಗಳು ಹಾಗೂ ಈ ಸೋಂಕು ನಿಯಂತ್ರಿಸಲು ಅಗತ್ಯವಿರುವ ಔಷಧಿಗಳನ್ನು ಸಹ ಶೇಖರಿಸಿಡುವಂತೆ ಸೂಚಿಸಿದ್ದಾರೆ.  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಯು ನಿರಂತರವಾಗಿ ವೈದ್ಯರಿಂದ ಮಾಹಿತಿ ಪಡೆಯಬೇಕು. ಎಲ್ಲಾದರೂ ಇಂತಹ ಸಣ್ಣ ಪ್ರಕರಣ ಕಂಡುಬಂದರೆ ತಕ್ಷಣವೇ ನಿಯಂತ್ರಿಸಬೇಕೆಂದು ಶ್ರೀರಾಮುಲು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

Facebook Comments