ಸುಟ್ಟು ಕರಕಲಾದ ಮನೆ ಕಂಡು ಕಣ್ಣೀರಿಟ್ಟ ಶಾಸಕರ ಕುಟುಂಬ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.13-ಕೆಜಿಹಳ್ಳಿ ಮತ್ತು ಡಿಜೆಹಳ್ಳಿಯಲ್ಲಿ ನಡೆದ ಕೋಮುಗಲಭೆ ವೇಳೆ ಶಾಸಕ ಅಖಂಡ ಶ್ರೀನಿವಾಸ್ ಅವರ ಮನೆಗೆ ಬೆಂಕಿ ಹಾಕಿದ್ದರಿಂದ ಸಂಪೂರ್ಣವಾಗಿ ಸುಟ್ಟುಹೋಗಿರುವ ಮನೆಯನ್ನು ಕಂಡು ಶಾಸಕರ ಕುಟುಂಬ ಕಣ್ಣೀರಿಟ್ಟಿತು.

ಸಂಪೂರ್ಣ ಸುಟ್ಟು ಕರಕಲಾಗಿರುವ ಮನೆಯ ಸ್ಥಿತಿ ಕಂಡು ತೀವ್ರವಾಗಿ ನೊಂದ ಅಖಂಡ ಶ್ರೀನಿವಾಸಮೂರ್ತಿ ಅವರು ಮನೆಯಲ್ಲಿದ್ದ ಚಿನ್ನಾಭರಣಗಳು ದೋಚಲಾಗಿದೆ. ಎಲ್ಲ ದಾಖಲೆಗಳು ಸುಟ್ಟುಹೋಗಿವೆ. ನನ್ನ ತಾಯಿಯವರ ಮಾಂಗಲ್ಯ ಸರವನ್ನೂ ದೋಚಿದ್ದಾರೆ ಎಂದು ನೊಂದು ನುಡಿದರು.

ಅವರ ಪತ್ನಿ ಹಾಗೂ ಮಗಳು ಪ್ರಿಯಾಂಕ, ನಾವು ಯಾವ ತಪ್ಪು ಮಾಡಿದೆವು. 40 ವರ್ಷದಿಂದ ಬಾಳಿಬದುಕಿದ ಮನೆಯನ್ನು ಈ ರೀತಿ ಮಾಡಿದ್ದಾರೆ ಎಂದು ಬಿಕ್ಕಿಬಿಕ್ಕಿ ಅತ್ತರು.

ಈಗ ನಮ್ಮ ಮನೆ ಎಲ್ಲಿದೆ, ನಾವು ಮುಂದೆ ಎಲ್ಲಿರೋದು ಎಂದು ಪ್ರಶ್ನಿಸಿದ್ದಲ್ಲದೆ, ಏನೂ ಮಾಡದ ನಮಗೇಕೆ ಈ ಶಿಕ್ಷೆ ಎಂದು ಹಲುಬಿದರು.
ಮನೆಯಲೆಲ್ಲ ಓಡಾಡಿ ಬೂದಿಯಾದ ವಸ್ತುಗಳನ್ನು ಕಂಡು ಕಣ್ಣೀರಿಡುತ್ತಲೇ ದುಷ್ಕರ್ಮಿಗಳಿಗೆ ಹಿಡಿಶಾಪ ಹಾಕಿದರು.

ನಮಗೆ ಭದ್ರತೆ ಕೊಡಿ. ನೆಮ್ಮದಿ ಇಲ್ಲದೆ ಬದುಕುವಂತಾಗಿದೆ. ಇನ್ನಾದರೂ ನಮ್ಮ ಕುಟುಂಬಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದರು.

ಹೊರಗಿನವರಿಂದಲೇ ದೊಂಬಿ: ನಮ್ಮ ಏರಿಯಾದ ಮುಸ್ಲಿಮರು ಗಲಾಟೆ ಮಾಡಿಲ್ಲ. ಹೊರಗಿನವರು ಬಂದು ಇಲ್ಲಿ ದೊಂಬಿ ಮಾಡಿದ್ದಾರೆ ಎಂದು ಅಖಂಡ ಶ್ರೀನಿವಾಸಮೂರ್ತಿ ಅವರ ಅಕ್ಕ ಅಶ್ವಥಮ್ಮ ಹೇಳಿದ್ದಾರೆ.

ತಮ್ಮ ಸಹೋದರನ ಮನೆಯನ್ನು ದುಷ್ಕರ್ಮಿಗಳು ಸುಟ್ಟು ಹಾಕಿದ್ದಾರೆ. ಎಲ್ಲಾ ವಸ್ತುಗಳು ನಾಶವಾಗಿವೆ ಎಂದು ನೊಂದು ನುಡಿದ ಅವರು, 40 ವರ್ಷದಿಂದ ಇಲ್ಲೇ ಬಾಳುತ್ತಿದ್ದೇವೆ. ಒಮ್ಮೆಯೂ ಗಲಾಟೆ ಆಗಿರಲಿಲ್ಲ.

ಈಗ ಬೇಕೆಂದೇ ಗಲಾಟೆ ಮಾಡಲಾಗಿದೆ ಎಂದು ಹೇಳಿದರು. ನನ್ನ ತಮ್ಮನ ರಾಜಕೀಯ ಚಟುವಟಿಕೆ ಮುಗಿಸಲು ಯಾರೊ ದೊಂಬಿ ಮಾಡಿಸಿದ್ದಾರೆ ಎಮದು ನೊಂದು ನುಡಿದರು.

Facebook Comments

Sri Raghav

Admin