ಗ್ಯಾಂಗ್‍ಸ್ಟರ್ ವಿಕಾಸ್ ದುಬೆಯದು ಫೇಕ್ ಎನ್ಕೌಂಟರ್ : ಅಖಿಲೇಶ್ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ಲಖ್ನೋ,ಜು.10- ಬೆಳ್ಳಂಬೆಳಗ್ಗೆ ಕುಖ್ಯಾತ ರೌಡಿ ವಿಕಾಸ್ ದುಬೆ ಎನ್‍ಕೌಂಟರ್‍ನಲ್ಲಿ ಮೃತಪಟ್ಟಿರುವ ಘಟನೆ ಇದೀಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ನಿನ್ನೆ ದುಬೆಯನ್ನು ಪೊಲೀಸರು ಅರೆಸ್ಟ್ ಮಾಡಿದ ಸಂದರ್ಭದಲ್ಲಿ, ಇದು ಪೊಲೀಸರು ದುಬೆಯನ್ನು ಬಂಧಿಸಿದ್ದಲ್ಲ, ಬದಲಿಗೆ ಆತನೇ ಪೊಲೀಸರಿಗೆ ಶರಣಾಗಿದ್ದಾನೆ ಎಂಬ ಬಗ್ಗೆ ಘಂಟಾಘೋಷವಾಗಿ ಸಾರಿದ್ದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಇಂದು ಕೂಡ ಇದೊಂದು ಫೇಕ್ ಎನ್ಕೌಂಟರ್ ಎಂದು ಕಿಡಿ ಕಾರಿದ್ದಾರೆ.

ವಾಸ್ತವವಾಗಿ ದಬೆ ಇರುವ ಕಾರು ಉರುಳಿಲ್ಲ, ಬದಲಿಗೆ ಸರ್ಕಾರದ ರಹಸ್ಯ ಬಹಿರಂಗಗೊಂಡು ಅದು ಉರುಳದಂತೆ ಮಾಡುವ ಸಂಬಂಧ ಮಾಡಿರುವ ನಾಟಕವಿದು ಎಂದು ಟ್ವಿಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

3 ಕಾನ್ಪುರ ಪೊಲೀಸರ ಹತ್ಯೆ ಪ್ರಕರಣ :

ಗ್ಯಾಂಗ್ಸ್ಟರ್ ವಿಕಾಸ್ ದುಬೆ ಎನ್ಕೌಂಟರ್ ಏನು ಅಂದುಕೊಂಡಿದ್ದೆವೋ ಹಾಗೆಯೇ ಆಯಿತು, ಹೀಗೇ ಆಗುತ್ತದೆ ಎಂದು ಮೊದಲೇ ಗೊತ್ತಿತ್ತು ಎಂದು ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಹೇಳಿದ್ದಾರೆ.

ದುಬೆಗೆ ಅನೇಕ ಪೊಲೀಸರು ಹಾಗೂ ಸರ್ಕಾರಿ ಅಧಿಕಾರಿಗಳ ಸಂಪರ್ಕವಿತ್ತು. ಅವೆಲ್ಲಾ ರಹಸ್ಯ ಎಲ್ಲಿ ಹೊರಬರುವುದೋ ಎನ್ನುವ ಕಾರಣಕ್ಕೆ ಎನ್‍ಕೌಂಟರ್ ನಾಟ ಮಾಡಲಾಗಿದೆ.

ದುಬೆಯ ಇತರ ಇಬ್ಬರು ಸಹವರ್ತಿಗಳನ್ನೂ ಎನ್ಕೌಂಟರ್ ಮಾಡಲಾಗಿದ್ದು, ಎಲ್ಲವೂ ಏಕರೀತಿಯಲ್ಲಿಯೇ ನಡೆದಿರುವುದು ನೋಡಿದರೆ ಇದೊಂದು ದೊಡ್ಡ ಷಡ್ಯಂತ್ರ ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಮುಖಂಡ ಓಮನ್ ಅಬ್ದುಲ್ಲಾ ಕೂಡ ಟ್ವೀಟ್ ಮಾಡಿದ್ದು, ಸತ್ತ ವ್ಯಕ್ತಿ ಏನನ್ನೂ ಹೇಳಲು ಸಾಧ್ಯವಿಲ್ಲ. ಪೊಲೀಸರು ಹಾಗೂ ರಾಜಕಾರಣಿಗಳ ಗುಟ್ಟು ಅವನ ಜತೆಯೇ ಸತ್ತುಹೋಯಿತು. ಅದನ್ನೀಗ ಹೇಳಲು ಆತ ಬದುಕಿಲ್ಲ ಎಂದಿದ್ದಾರೆ.

Facebook Comments