ಹುಳು ಹಿಡಿದ ಆಹಾರ ಪದಾರ್ಥ ನೀಡಿದ ಶಿಕ್ಷಕರು : ವಿದ್ಯಾರ್ಥಿನಿ ವಿಡಿಯೋ ವೈರಲ್

ಈ ಸುದ್ದಿಯನ್ನು ಶೇರ್ ಮಾಡಿ

ತಿಪಟೂರು, ಅ.16- ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹದ ಅಡಿಯಲ್ಲಿ ಬಿಸಿಯೂಟ ನೀಡುವ ಬದಲಿಗೆ ಆಹಾರ ಪದಾರ್ಥಗಳನ್ನು ನೀಡಲು ಸರ್ಕಾರ ಮುಂದಾಗಿದ್ದು, ಶಿಕ್ಷಣ ಸಚಿವರ ತವರಿನಲ್ಲಿಯೇ ವಿದ್ಯಾರ್ಥಿಗಳಿಗೆ ಹುಳ ಹಿಡಿದಿರುವ ಆಹಾರ ಪದಾರ್ಥವನ್ನು ನೀಡಿರುವ ವಿಡಿಯೋ ವೈರಲ್ ಆಗಿ ಸದ್ದು ಮಾಡುತ್ತಿದೆ.

ತಾಲ್ಲೂಕಿನ ಹೊನ್ನವಳ್ಳಿಯ ಕೆ.ಪಿ.ಎಸ್. ಶಾಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿದ್ದರು. ಆ ಆಹಾರ ಪದಾರ್ಥಗಳು ಹುಳು ಹಿಡಿದಿದ್ದು ಜಾನುವಾರುಗಳು ತಿನ್ನದಿರುವಷ್ಟು ಕಳಪೆ ಗುಣಮಟ್ಟದಿಂದ ಕೂಡಿರುವ ವಿಡಿಯೋ ವೈರಲ್ ಆಗಿದೆ.

ಶಿಕ್ಷಣ ಇಲಾಖೆ ತಿಳಿಸುವಂತೆ ಕಳೆದ 3 ತಿಂಗಳಿನಿಂದಲೂ ಶಾಲೆಗಳಿಗೆ ಯಾವುದೇ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಿಲ್ಲ ಎಂದು ತಿಳಿಸುತ್ತಾರೆ. ಆದರೆ ಎಲ್ಲಾ ಶಾಲೆಗಳಲ್ಲಿ ವಿತರಿಸುವ ಹಾಗೆಯೇ ನಾವು ಆಹಾರ ಪದಾರ್ಥಗಳನ್ನು ವಿತರಣೆ ಮಾಡುತ್ತಿದ್ದೇವೆಂದು ತಿಳಿಸುತ್ತಾರೆ ಶಾಲೆಯ ಮುಖ್ಯಶಿಕ್ಷಕರು.

ಕಳೆದ 3 ತಿಂಗಳ ಹಿಂದೆ ವಿತರಣೆ ಮಾಡಿದ್ದ ಅಕ್ಕಿ ಹಾಗೂ 3 ಕ್ವಿಂಟಾಲ್ ಹೆಚ್ಚಿನ ಬೇಳೆ ಉಳಿದಿದ್ದು, ಇದೀಗ ಮಕ್ಕಳಿಗೆ ವಿತರಣೆ ಮಾಡಲಾಗುತ್ತಿದೆ. ಆದರೆ ಹುಳ ಹಿಡಿದಿರುವ ಬೇಳೆಯ ವಿಡಿಯೋ ವೈರಲ್ ಆಗಿದ್ದಕ್ಕೆ ಬಿಸಿಯೂಟ ಅಡುಗೆ ಸಿಬ್ಬಂದಿಗಳನ್ನು ಬಳಸಿಕೊಂಡು ಸ್ವಚ್ಛತೆ ಮಾಡಿ ವಿದ್ಯಾರ್ಥಿಗಳಿಗೆ ನೀಡಲು ಶಾಲೆಯ ಶಿಕ್ಷಕರು ತೊಡಗಿದ್ದಾರೆ.

ಕಳಪೆ ಆಹಾರ:ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೌಷ್ಟಿಕ ಅಭಿಯಾನ ಅಡಿಯಲ್ಲಿ ನೂರಾರು ಕಾರ್ಯಕ್ರಮಗಳನ್ನು ಒಂದೆಡೆ ರೂಪಿಸುತ್ತಿದ್ದು, ಇನ್ನೊಂಡೆದೆ ವಿದ್ಯಾರ್ಥಿಗಳಿಗೆ ಸಿಗಬೇಕಾದ ಪೌಷ್ಟಿಕ ಆಹಾರವೇ ಕಳಪೆಯಿಂದ ಕೂಡಿದಾಗ ಯೋಜನೆಗೆ ಫಲವೆಲ್ಲಿದೆ. ಈಗಲಾದರೂ ಸಂಬಂಧಪಟ್ಟ ಅಕಾರಿಗಳು ಕ್ರಮ ವಹಿಸಬೇಕಿದೆ.

ಅಕ್ಷರ ದಾಸೋಹ ಕಾರ್ಯಕ್ರಮದಡಿ ಕಳೆದ ಮೂರು ತಿಂಗಳಿನಿಂದ ಯಾವುದೇ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿಲ್ಲ. ಸೂಕ್ತವಾದ ಮಾಹೆವಾರಿ ಮಾಹಿತಿ ಕೊಡದಿರುವುದರಿಂದ ಆಹಾರ ಪದಾರ್ಥಗಳು ಉಳಿದಿರಬಹುದು. ಇದರ ಬಗ್ಗೆ ಶಾಲಾ ಮುಖ್ಯಸ್ಥರಿಂದ ವಿವರಣೆ ಕೇಳಲಾಗುವುದು ಎಂದು ತಿಪಟೂರು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರ ಪ್ರಕಾಶ್ ತಿಳಿಸಿದ್ದಾರೆ.

Facebook Comments

Sri Raghav

Admin