ಅಕ್ಷರ ದಾಸೋಹ ನೀಡುತ್ತಿದ್ದವರು, ಕೈಯಲ್ಲಿ ಸೌಟು ಇಡಿದು ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.21-ನಗರದಲ್ಲಿಂದು ಪ್ರತಿಭಟನೆ ನಡೆಸಿದ ಬಿಸಿಯೂಟ ತಯಾರಕರು ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಆಗ್ರಹಿಸಿದರು. ದಾವಣಗೆರೆ, ಹಾವೇರಿ, ಗದಗ, ಬಳ್ಳಾರಿ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ರಾಮನಗರ, ತುಮಕೂರು, ಯಾದಗಿರಿ ಸೇರಿದಂತೆ ರಾಜ್ಯದೆಲ್ಲೆಡೆಯಿಂದ ಬೆಂಗಳೂರಿಗೆ ಆಗಮಿಸಿದ ಬಿಸಿಯೂಟ ಕಾರ್ಯಕರ್ತೆಯರು ಸಂಗೊಳ್ಳಿರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್‍ವರೆಗೆ ಬೃಹತ್ ಪ್ರತಿಭಟನೆ ನಡೆಸಿ ಬೇಕೇಬೇಕು ನ್ಯಾಯ ಬೇಕು ಎಂದು ಘೋಷಣೆಗಳನ್ನು ಮೊಳಗಿಸಿದರು.

ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಹಾಗೂ ಸಿಐಟಿಯುಸಿ ಸಂಘಟನೆಯಿಂದ ಆಯೋಜಿಸಿದ್ದ ಈ ಪ್ರತಿಭಟನಾ ರ್ಯಾಲಿ ಫ್ರೀಡಂ ಪಾರ್ಕ್‍ನಲ್ಲಿ ಸಮಾವೇಶಗೊಂಡು ಕನಿಷ್ಠ ವೇತನ ಜಾರಿಯಾಗಬೇಕೆಂದು ಒತ್ತಾಯಿಸಲಾಯಿತು.

ಬಿಸಿಯೂಟ ಪೂರೈಕೆ ಖಾಸಗಿ ಸಂಸ್ಥೆಗಳಿಗೆ ಕೊಡುವ ಹುನ್ನಾರವನ್ನು ಸರ್ಕಾರ ಕೈಬಿಡಬೇಕು. ನಮಗೆ ಸೇವಾ ಭದ್ರತೆ ನೀಡಬೇಕು. ಪ್ರತಿ ತಿಂಗಳು 5ನೇ ತಾರೀಖು ವೇತನ ಕೊಡಬೇಕು. ನಮ್ಮನ್ನು ಕಾರ್ಮಿಕರೆಂದು ಪರಿಗಣಿಸಿ ಕಾರ್ಮಿಕ ಕಾಯ್ದೆಯಡಿಯಲ್ಲಿ ತರಬೇಕು ಎಂದು ಆಗ್ರಹಿಸಿದರು.

ಬೆಳಗ್ಗೆ 9 ಗಂಟೆಯಿಂದ ಸಂಜೆ 4ರವರೆಗೆ ಶಾಲೆಗಳಲ್ಲಿ ಅಡುಗೆ ಕೆಲಸ ಮಾಡುತ್ತೇವೆ. ಆದರೆ ನಮಗೆ ಕೇವಲ ಮುಖ್ಯ ಅಡುಗೆಯವರೆಗೆ 2700ರೂ., ಸಹಾಯಕ ಅಡುಗೆಯವರಿಗೆ 2,600 ರೂ. ನೀಡಲಾಗುತ್ತಿದೆ. ಕಳೆದ 17 ವರ್ಷಗಳಿಂದ ಬಿಸಿಯೂಟ ತಯಾರು ಮಾಡುತ್ತಿದ್ದೇವೆ. ಶಾಲೆಗಳಲ್ಲಿ ಹೆಚ್ಚುವರಿ ಮೆನು ಜಾರಿಗೆ ತಂದಿದ್ದಾರೆ. ಇದರಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ನಮಗೆ ಕನಿಷ್ಠ ವೇತನ ಸಿಗುತ್ತಿಲ್ಲ.

ಹಾಗಾಗಿ ಸರ್ಕಾರದ ಗಮನಸೆಳೆಯಲು ಎರಡು ದಿನಗಳ ಕಾಲ ಪ್ರತಿಭಟನೆ ನಡೆಸಲು ಬಟ್ಟೆ-ಬರೆ ಸಮೇತ ಬಂದಿದ್ದೇವೆ ಮತ್ತು ಶಾಲೆಗಳಲ್ಲಿ ಎರಡು ದಿನ ಅಡುಗೆ ಮಾಡದಿರಲು ಕರೆ ಕೊಟ್ಟಿದ್ದೇವೆ ಎಂದು ಹೇಳಿದರು. ರ್ಯಾಲಿ ಸಂದರ್ಭದಲ್ಲಿ ಆನಂದ್‍ರಾವ್‍ವೃತ್ತ, ಕೆ.ಆರ್.ಸರ್ಕಲ್, ಹಡ್ಸಲ್ ಸರ್ಕಲ್ ಮುಂತಾದ ಕಡೆ ಕೆಲ ಕಾಲ ಟ್ರಾಫಿಕ್‍ಜಾಮ್ ಉಂಟಾಯಿತು.

Facebook Comments