ಮದ್ಯದ ಮೇಲೆ ತೆರಿಗೆಯನ್ನು ಶೇ.70ರಷ್ಟು ಇಳಿಸಿದ ದೆಹಲಿ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.7- ಕೊರೊನಾ ಸಂಕಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ಮದ್ಯದ ಮೇಲೆ ಹೇರಲಾಗಿದ್ದ ಶೇ.70ರಷ್ಟು ತೆರಿಗೆಯನ್ನು ಹಿಂಪಡೆಯಲು ದೆಹಲಿ ಸರ್ಕಾರ ಮುಂದಾಗಿದೆ. ಸದ್ಯದಲ್ಲೇ ಈ ಆದೇಶ ಹೊರಬೀಳಲಿದ್ದು, ಮದ್ಯಪ್ರಿಯರಿಗೆ ಸಿಹಿಸುದ್ದಿ ನೀಡಲಾಗಿದೆ.

ಕಳೆದ ಒಂದು ತಿಂಗಳ ಹಿಂದೆ ಮದ್ಯದ ಮೇಲೆ ಶೇ.70ರಷ್ಟು ತೆರಿಗೆ ವಿಧಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆರ್ಥಿಕತೆ ಸರಿದೂಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದರು.

ಆದರೆ, ಜೂನ್ 8ರಿಂದ ಲಾಕ್‍ಡೌನ್ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಕೆಲವು ಸಡಿಲಿಕೆಗಳನ್ನು ಘೋಷಿಸಿರುವ ಅವರು, ಮದ್ಯದ ಮೇಲೆ ಹೇರಿರುವ ಶೇ.70ರಷ್ಟು ತೆರಿಗೆಯನ್ನು ಹಿಂಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

ಇದರ ನಡುವೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳು ಹಾಗೂ ಖಾಸಗಿ ಆಸ್ಪತ್ರೆಗಳನ್ನು ಕೇವಲ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಮಾತ್ರ ಬಳಸಬೇಕು ಎಂದು ಹೇಳಲಾಗಿದೆ.

ಹೊಟೇಲ್, ರೆಸಾರ್ಟ್‍ಗಳನ್ನು ತೆರೆಯಲು ಇನ್ನೂ ಅನುಮತಿ ನೀಡಿಲ್ಲ. ಒಂದೊಮ್ಮೆ ಸೋಂಕಿತರ ಸಂಖ್ಯೆ ಹೆಚ್ಚಾದರೆ ಇವುಗಳನ್ನು ಆಸ್ಪತ್ರೆ ವಾರ್ಡ್‍ಗಳನ್ನಾಗಿ ಮಾರ್ಪಡಿಸಲು ಕೂಡ ಚಿಂತನೆ ನಡೆದಿದೆ.

Facebook Comments