ಸ್ಥಳದಲ್ಲೇ ಸಿಕ್ಕಿತು ನ್ಯಾಯ : ದಿಶಾ ಮೇಲೆರಗಿದ್ದ ಕಾಮಕ್ರಿಮಿಗಳನ್ನು ಹೊಸಕಿಹಾಕಿದ ಪೊಲೀಸರು..!

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್, ಡಿ.6-ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ (ದಿಶಾ) ಮೇಲೆ ನಡೆದ ಪೈಶಾಚಿಕ ಸಾಮೂಹಿಕ ಅತ್ಯಾಚಾರ ಮತ್ತು ಭೀಕರ ಕಗ್ಗೊಲೆ ಪ್ರಕರಣದ ಎಲ್ಲ ನಾಲ್ವರು ನರರಾಕ್ಷಸರು ಇಂದು ನಸುಕಿನಲ್ಲಿ ಪೊಲೀಸ್ ಎನ್‍ಕೌಂಟರ್‍ನಲ್ಲಿ ಹತರಾಗಿದ್ದಾರೆ.  ಗ್ಯಾಂಗ್‍ರೇಪ್ ಮತ್ತು ಮರ್ಡರ್ ಪ್ರಕರಣದ ಎಲ್ಲ ಆರೋಪಿಗಳಾದ ಶಿವ, ಆರೀಫ್, ಚನ್ನಕೇಶುವುಲು ಮತ್ತು ನವೀನ್‍ನನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ನಾಲ್ವರು ನಿರ್ದಯಿ ಕಾಮುಕರನ್ನು ಪೊಲೀಸರು ಹೊಸಕಿ ಹಾಕಿರುವ ಮೂಲಕ ಪಶುವೈದ್ಯೆ ಆತ್ಮಕ್ಕೆ ಶಾಂತಿ ಲಭಿಸಿದಂತಾಗಿದೆ. ತೆಲಂಗಾಣ ಪೊಲೀಸರ ಈ ಕ್ರಮಕ್ಕೆ ದೇಶಾದ್ಯಂತ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು, ಅತ್ಯಾಚಾರಿಗಳಿಗೆ ತಕ್ಕ ಶಿಕ್ಷೆಯಾಗಿದೆ ಎಂದು ಶ್ಲಾಘಿಸಿದ್ದಾರೆ.  ಹುಬ್ಬಳ್ಳಿ ಮೂಲದ ದಕ್ಷ ಉನ್ನತ ಪೊಲೀಸ್ ಅಧಿಕಾರಿ ವಿಶ್ವನಾಥ್ ಸಿ. ಸಜ್ಜನರ್ ನೇತೃತ್ವದ ತಂಡ ಎನ್‍ಕೌಂಟರ್ ಮೂಲಕ ದಿಶಾ ಕುಟುಂಬಕ್ಕೆ ನ್ಯಾಯ ಒದಗಿಸಿದೆ.

ಹೈದರಾಬಾದ್ ಹೊರವಲಯದ ಶಂಷಾಬಾದ್‍ನ ಚಟೌನ್‍ಪಲ್ಲಿ ಸೇತುವೆ ಬಳಿ ಇಂದು 3.30ರ ನಸುಕಿನಲ್ಲಿ ಈ ಘಟನೆ ನಡೆದಿದೆ.  ಈ ಪ್ರಕರಣದ ಹೆಚ್ಚುವರಿ ತನಿಖೆಗಾಗಿ ಕೃತ್ಯ ನಡೆದ ಸ್ಥಳಕ್ಕೆ ನಾಲ್ವರು ಆರೋಪಿಗಳನ್ನು ಪೊಲೀಸ್ ತಂಡ ಕರೆದೊಯ್ದು ವಿಚಾರಣೆ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ಶಿವ, ಆರೀಫ್, ಚನ್ನಕೇಶವುಲು ಮತ್ತು ನವೀನ್ ಸಮಯ ಸಾಧಿಸಿ ಪೊಲೀಸರ ಪಿಸ್ತೂಲ್ ಕಿತ್ತುಕೊಂಡು ಗುಂಡು ಹಾರಿಸಿದರು ಮತ್ತು ಕಲ್ಲುಗಳನ್ನು ತೂರಿ ಪರಾರಿಯಾಗಲು ಯತ್ನಿಸಿದರು. ಆರೋಪಿಗಳ ದಾಳಿಯಲ್ಲಿ ಕೆಲವು ಪೊಲೀಸರಿಗೆ ಗಾಯಗಳಾದವು.

ರಕ್ಷಣೆಗಾಗಿ ಮತ್ತು ಆರೋಪಿಗಳು ಪರಾರಿಯಾಗುವುದನ್ನು ತಪ್ಪಿಸಲು ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್ ನೇತೃತ್ವದ ತಂಡ ಗುಂಡು ಹಾರಿಸಿ ನಾಲ್ವರನ್ನು ಹೊಡೆದುರುಳಿಸಿತು.  ಎನ್‍ಕೌಂಟರ್ ನಡೆದ ಸ್ಥಳವು ದಿಶಾನನ್ನು ದುಷ್ಕರ್ಮಿಗಳು ಸುಟ್ಟು ಹಾಕಿದ್ದ ಸ್ಥಳದಿಂದ ಕೇವಲ 300 ದೂರದಲ್ಲಿದೆ.  ಪಶುವೈದ್ಯೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಭೀಕರ ಕೊಲೆ ಪ್ರಕರಣದಲ್ಲಿ ಎಲ್ಲ ಆರೋಪಿಗಳು ಎನ್‍ಕೌಂಟರ್‍ನಲ್ಲಿ ಹತರಾಗಿದ್ದಾರೆ ಎಂದು ಸಜ್ಜನರ್ ತಿಳಿಸಿದ್ದಾರೆ.

ನ.27ರಂದು ಸಂಜೆ ಚಟಾನ್‍ಪಲ್ಲಿ ಸೇತುವೆ ಬಳಿ ತಮ್ಮ ಪರಿಚಿತರೊಬ್ಬರನ್ನು ಭೇಟಿ ಮಾಡಲು ದಿಶಾ ತಮ್ಮ ಕೆಂಪು ಬಣ್ಣದ ಮಾಯಿಸ್ಟ್ರೋ ಸ್ಕೂಟರ್‍ನಲ್ಲಿ ಆಗಮಿಸಿದ್ದರು. ಸ್ಕೂಟಿಯನ್ನು ಅಲ್ಲೇ ನಿಲ್ಲಿಸಿ ಅವರೊಂದಿಗೆ ತೆರಳಿದ್ದರು.
ಟ್ರಕ್ ಚಾಲಕ ಮತ್ತು ಕ್ಲೀನರ್ ಆದ 20 ರಿಂದ 24 ವರ್ಷ ವಯಸ್ಸಿನ ಈ ನಾಲ್ವರು ಇದನ್ನು ಗಮನಿಸಿ ಸಂಚು ರೂಪಿಸಿದ್ದರು. ಅವರ ಸ್ಕೂಟರ್‍ನನ್ನು ಪಂಕ್ಚರ್ ಮಾಡಿ ಹತ್ತಿರದ ಸ್ಥಳದಲ್ಲಿ ಅವಿತಿಟ್ಟುಕೊಂಡಿದ್ದರು.

ರಾತ್ರಿ ಸುಮಾರು 9.10ರ ವೇಳೆ ಅಲ್ಲಿಗೆ ವಾಪಸ್ ಬಂದ ಪಶುವೈದ್ಯೆ ಸ್ಕೂಟರ್ ಪಂಕ್ಚರ್ ಆಗಿರುವುದನ್ನು ಗಮನಿಸಿ ಸಹಾಯಕ್ಕಾಗಿ ಎದುರು ನೋಡುತ್ತಿದ್ದಾಗ, ಈ ನಾಲ್ವರು ಸಹಾಯ ಮಾಡುವ ನೆಪದಲ್ಲಿ ದಿಶಾ ಅವರನ್ನು ಬಲವಂತವಾಗಿ ಎಳೆದೊಯ್ದು ನಿರ್ಜನ ಪ್ರದೇಶದಲ್ಲಿ ಆಕೆಗೆ ಬಲವಂತವಾಗಿ ಮದ್ಯ ಕುಡಿಸಿ ಚಿತ್ರಹಿಂಸೆ ನೀಡಿ ನಂತರ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅರೆ ಜೀವಸ್ಥಿತಿಯಲ್ಲಿದ್ದ ಆಕೆಯನ್ನು ಟ್ರಕ್‍ನ ಕ್ಯಾಬಿನ್‍ನಲ್ಲಿಟ್ಟು ಚಟಾನ್‍ಪಲ್ಲಿ ಸೇತುವೆ ಬಳಿ ಡಿಸೇಲ್ ಸುರಿದು ಸಜೀವ ದಹನ ಮಾಡಿದ್ದರು.

ಪ್ರಿಯಾಂಕಾ ನಾಪತ್ತೆಯಾಗಿರುವ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ಶೋಧ ನಡೆಸಿದಾಗ ಸೇತುವೆ ಕೆಳಗೆ ಕಿರುದಾರಿಯಲ್ಲಿ ಶವ ಪತ್ತೆಯಾಗಿತ್ತು.  ನ.29ರಂದು ಪೊಲೀಸರು ಈ ನಾಲ್ವರನ್ನು ಬಂಧಿಸಿದ್ದರು. ಆರೋಪಿಗಳನ್ನು ಏಳು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.  ಕೃತ್ಯ ನಡೆದ ಸ್ಥಳದ ಹೆಚ್ಚುವರಿ ತನಿಖೆಗಾಗಿ ಈ ಆರೋಪಿಗಳನ್ನು ಕರೆದೊಯ್ದ ಸಂದರ್ಭದಲ್ಲಿ ಪೊಲೀಸರ ಪಿಸ್ತೂಲ್ ಕಸಿದು ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದರು. ಪ್ರಾಣ ರಕ್ಷಣೆಗಾಗಿ ಅವರನ್ನು ಎನ್‍ಕೌಂಟರ್‍ನಲ್ಲಿ ಹೊಡೆದುರುಳಿಸಲಾಗಿದೆ ಎಂದು ವಿ.ಸಿ.ಸಜ್ಜನರ್ ತಿಳಿಸಿದ್ದಾರೆ.

ದೆಹಲಿಯಲ್ಲಿ ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕಗ್ಗೊಲೆ ಪ್ರಕರಣದಂತೆ ದಿಶಾ ಅತ್ಯಾಚಾರ ಪ್ರಕರಣ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಸಂಸತ್ತಿನಲ್ಲೂ ಇದು ಪ್ರತಿಧ್ವನಿಸಿ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಲಾಗಿತ್ತು.  ದಿಶಾ ಹತ್ಯೆ ನಡೆದ ಸ್ಥಳದ ಬಳಿಯೇ ನಾಲ್ವರು ಅತ್ಯಾಚಾರಿಗಳನ್ನು ಪೊಲೀಸರು ಹೊಡೆದುರುಳಿಸಿರುವುದಕ್ಕೆ ಪ್ರಶಂಸೆಗಳು ವ್ಯಕ್ತವಾಗಿದೆ. ಸಜ್ಜನರ್ ಮತ್ತು ಪೊಲೀಸ್ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Facebook Comments

Sri Raghav

Admin