“ದೇಶದ ಪ್ರತಿಯೊಬ್ಬರಿಗೂ ಉಚಿತ ಕೊರೊನಾ ಲಸಿಕೆ”

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಅ.26- ಸಾರ್ವಜನಿಕರು ಹಾಗೂ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾದ ನಂತರ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ದೇಶದ ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸಚಿವ ಪ್ರತಾಪ್ ಸಾರಂಗಿ ಹೇಳುವ ಮೂಲಕ ಎಲ್ಲಾ ಟೀಕೆ-ಟಿಪ್ಪಣಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆ ಹಿನ್ನಲೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಬಿಹಾರಕ್ಕೆ ಉಚಿತ ಕೊರೋನಾ ಲಸಿಕೆ ನೀಡುವುದಾಗಿ ಘೋಷಿಸಿತ್ತು. ವಿಶ್ವವನ್ನೇ ಕಾಡುತ್ತಿರುವ ಕೊರೊನಾಗೆ ಬಿಹಾರದ ಜನರಿಗೆ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿದ್ದ ಬಿಜೆಪಿಯ ನಡೆಗೆ ಸಾಕಷ್ಟು ವಿರೋಧ, ಟೀಕೆಗಳು ವ್ಯಕ್ತವಾಗಿದ್ದವು.

ಇದಾದ ಬಳಿಕ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಭಾರತದ ಎಲ್ಲ ಜನರಿಗೂ ಉಚಿತವಾಗಿ ಕೊರೊನಾ ಲಸಿಕೆ ನೀಡುವುದಾಗಿ ಘೋಷಿಸಿದೆ. ಹಲವು ರಾಜಕೀಯ ಪಕ್ಷಗಳು ಈ ಹೇಳಿಕೆಯ ವಿರುದ್ಧ ತಿರುಗಿ ಬಿದ್ದಿದ್ದವು.

ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಉಚಿತವಾಗಿ ಕೊರೊನಾ ಲಸಿಕೆ ನೀಡಲಾಗುವುದು.ಪ್ರತಿ ವ್ಯಕ್ತಿಗೆ ಕೋವಿಡ್ ಲಸಿಕೆ ಹಾಕಲು ಅಂದಾಜು 500 ರೂ.ಗಳನ್ನು ಖರ್ಚು ಮಾಡಲಾಗುವುದು ಎಂದು ಬಾಲಂಗೋನರ್‍ಲ್ಲಿ ನಡೆದ ವಿಧಾನಸಭಾ ಉಪ ಚುನಾವಣೆಯ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಸಾರಂಗಿ ಸುದ್ದಿಗಾರರಿಗೆ ತಿಳಿಸಿದರು.

ಕೊರೋನಾ ಔಷಯನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳಬಾರದು, ದೇಶದ ಎಲ್ಲ ಜನರಿಗೂ ಉಚಿತವಾಗಿ ಕೊರೋನಾ ಲಸಿಕೆ ನೀಡಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ಉಚಿತವಾಗಿ ಕೊರೋನಾ ಲಸಿಕೆ ನೀಡುವುದಾಗಿ ಘೋಷಿಸಿದ್ದಾರೆ.

ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಕೋವಿಡ್ ಲಸಿಕೆ ವಿಚಾರವನ್ನು ರಾಜಕೀಯ ಲಾಭಕ್ಕೆ ಬಳಸುತ್ತಿದೆ ಎಂದು ವಿರೋಧ ಪಕ್ಷಗಳು ಟೀಕಿಸಿರುವುದರಿಂದ ತಮಿಳುನಾಡು, ಮಧ್ಯಪ್ರದೇಶ, ಅಸ್ಸಾಂ ಮತ್ತು ಪುದುಚೇರಿ ಸರ್ಕಾರಗಳು ಈಗಾಗಲೇ ತಮ್ಮ ರಾಜ್ಯಗಳ ಜನರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡುವುದಾಗಿ ಘೋಷಿಸಿದರೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೇಶದಾದ್ಯಂತ ಎಲ್ಲಾ ನಾಗರಿಕರಿಗೆ ಉಚಿತ ಲಸಿಕೆ ನೀಡುವಂತೆ ಒತ್ತಾಯಿಸಿದ್ದರು.

ದೇಶದ ಎಲ್ಲಾ ಜನರಿಗೆ ಉಚಿತ ಲಸಿಕೆಗಳನ್ನು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಸಹ ಘೋಷಿಸಿದ್ದಾರೆ. ಪ್ರತಿ ವ್ಯಕ್ತಿಗೆ ಲಸಿಕೆ ಹಾಕಲು ಅಂದಾಜು 500 ರೂ.ಗಳನ್ನು ಖರ್ಚು ಮಾಡಲಾಗುವುದು ಎಂದು ಬಾಲಂಗೋರ್ ನಲ್ಲಿ ನವೆಂಬರ್ 3ರ ವಿಧಾನಸಭಾ ಉಪ ಚುನಾವಣೆಯ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಸಾರಂಗಿ ಸುದ್ದಿಗಾರರಿಗೆ ತಿಳಿಸಿದರು.

ಅಕ್ಟೋಬರ್ 28ರಿಂದ ಆರಂಭವಾಗಲಿರುವ ಬಿಹಾರ ರಾಜ್ಯ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೂ ಮುನ್ನ ಬಿಜೆಪಿ ಕಳೆದ ಗುರುವಾರ ಪ್ರಣಾಳಿಕೆಯಲ್ಲಿ ರಾಜ್ಯದ ಎಲ್ಲರಿಗೂ ಉಚಿತ ಕೊರೋನಾ ವೈರಸ್ ಲಸಿಕೆ ನೀಡುವ ಭರವಸೆ ನೀಡಿತ್ತು.

ಇದರ ಜೊತೆಗೆ ಬಿಹಾರದ ಕಾರ್ಮಿಕರಿಗೆ ಬಿಹಾರ ರಾಜ್ಯದಲ್ಲಿಯೇ ಉದ್ಯೋಗ ಸೃಷ್ಟಿಸುವುದಕ್ಕೆ ಮೊದಲ ಆದ್ಯತೆ ನೀಡುವುದಾಗಿ ತಿಳಿಸಿತ್ತು.
ಕೊರೋನಾ ಲಸಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅನುಮೋದಿಸಿದ ಕೂಡಲೇ ಬಿಹಾರದ ಪ್ರತಿಯೊಬ್ಬ ವ್ಯಕ್ತಿಗೂ ಲಸಿಕೆ ನೀಡುವುದು ನಮ್ಮ ಸಂಕಲ್ಪವಾಗಿದೆ.

ಲಸಿಕೆಗೆ ಅನುಮತಿ ದೊರಕಿದ ಕೂಡಲೇ ಪ್ರತಿಯೊಬ್ಬರಿಗೂ ಉಚಿತವಾಗಿ ಲಸಿಕೆ ನೀಡಲಾಗುತ್ತದೆ. ಪ್ರಣಾಳಿಕೆಯಲ್ಲಿ ಇದು ನಾವು ನೀಡುತ್ತಿರುವ ಮೊದಲ ಭರವಸೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.

Facebook Comments

Sri Raghav

Admin