ಗಡಿ ಬಿಕ್ಕಟ್ಟು : ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಮಹತ್ವದ ಸರ್ವ ಪಕ್ಷ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.19- ಪೂರ್ವ ಲಡಾಕ್‍ನ ವಾಸ್ತವ ಗಡಿ ರೇಖೆ ಬಳಿ ಉಭಯ ದೇಶಗಳ ನಡುವಣ ರಕ್ತಪಾತ ಸಂಘರ್ಷದಿಂದ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿಯನ್ನು ಪರಾಮರ್ಶಿಸಿ ಮುಂದಿನ ಕ್ರಮ ಕೈಗೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ಸಂಜೆ 5 ಗಂಟೆಗೆ ದೆಹಲಿಯಲ್ಲಿ ಮಹತ್ವದ ಸರ್ವ ಪಕ್ಷಗಳ ಸಭೆ ನಡೆಯಲಿದೆ.

ರಕ್ಷಣಾ ಸಚಿವ ರಾಜನಾಥ ಸಿಂಗ್ ಈಗಾಗಲೇ ವಿರೋಧ ಪಕ್ಷಗಳ ಮುಖಂಡರು, ವಿವಿಧ ರಾಜಕೀಯ ಪಕ್ಷಗಳ ನಾಯಕರುಗಳಿಗೆ ಸರ್ವ ಪಕ್ಷ ಸಭೆಯಲ್ಲಿ ಭಾಗವಹಿಸಲು ಆಹ್ವಾನ ನೀಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ , ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಶಿವಸೇನೆ ನಾಯಕ ಉದ್ಧವ್ ಠಾಕ್ರೆ, ಜೆಡಿಯು ಮುಖ್ಯಸ್ಥ ನಿತೀಶ್‍ಕುಮಾರ್, ಬಿಜು ಜನತಾದಳದ ನಾಯಕ ನವೀನ್ ಪಟ್ನಾಯಕ್,

ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕೆ.ಚಂದ್ರಶೇಖರ ರಾವ್, ವೈ.ಆರ್.ಎಸ್.ಕಾಂಗ್ರೆಸ್ ಮುಖಂಡ ಜಗನ್ ಮೋಹನ್ ರೆಡ್ಡಿ, ಡಿಎಂಕೆ ಕಾರ್ಯಾಧ್ಯಕ್ಷ ಜೋಸೆಫ್ ಸ್ಟಾಲಿನ್, ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ , ಶಿರೋಮಣಿ ಅಕಾಲದಳ್ ಮುಖಂಡ ಸುಕಬೀರ್ ಸಿಂಗ್ ಬಾದಲ್ ಸೇರಿದಂತೆ ವಿವಿಧ ಪಕ್ಷಗಳ ಅಧ್ಯಕ್ಷರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳನ್ನು ಸರ್ವ ಪಕ್ಷ ಸಭೆಗೆ ಆಮಂತ್ರಿಸಲಾಗಿದೆ.

ಪೂರ್ವ ಲಡಾಕ್‍ನ ಗಾಲ್ವಾನ್ ಕಣಿವೆಯಲ್ಲಿ ಚೀನಿ ಸೇನಾ ಪಡೆಯ ಕ್ರೌರ್ಯದಿಂದ 20 ಭಾರತೀಯ ಯೋಧರು ಹತರಾಗಿ, 70ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದು , ಪ್ರಸ್ತುತ ಗಡಿಯಲ್ಲಿ ಉದ್ಭವಿಸಿರುವ ಪರಿಸ್ಥಿತಿ ಮತ್ತು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಈ ಸಭೆಯಲ್ಲಿ ಸಮಾಲೋಚನೆ ನಡೆಸಲಿದ್ದಾರೆ.

ಇದೇ ಸಭೆಯಲ್ಲಿ ದೇಶಾದ್ಯಂತ ಉಗ್ರ ಸ್ವರೂಪ ತಾಳಿರುವ ಕೊರೊನಾ ವೈರಸ್ ದಾಳಿ, ಆರ್ಥಿಕ ಪುನಃಶ್ಚೇತನ , ವಲಸೆ ಕಾರ್ಮಿಕರ ಪುನರ್ವಸತಿ ಸೇರಿದಂತೆ ಕೆಲವು ಮಹತ್ವದ ವಿಷಯಗಳು ಚರ್ಚೆಗೆ ಬರಲಿವೆ.

ಇಂದು ಸಂಜೆ ನಡೆಯುವ ಸರ್ವ ಪಕ್ಷಗಳ ಸಭೆಯಲ್ಲಿ ಗಡಿ ಬಿಕ್ಕಟ್ಟು ಕುರಿತು ಕೈಗೊಳ್ಳಬಹುದಾದ ನಿರ್ಣಯದ ಬಗ್ಗೆ ಅಪಾರ ಕುತೂಹಲ ಕೆರಳಿಸಿದೆ.

Facebook Comments