“ಕೊರೊನಾಗೆ ಬಲಿಯಾದವರ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಿ”

ಈ ಸುದ್ದಿಯನ್ನು ಶೇರ್ ಮಾಡಿ

ಅಲಹಬಾದ್,ಮೇ.12-ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡು ಕೊರೊನಾ ಸೋಂಕಿಗೆ ಬಲಿಯಾದ ಮತಗಟ್ಟೆ ಅಧಿಕಾರಿಗಳ ಕುಟುಂಬಕ್ಕ ಕನಿಷ್ಟ ಒಂದು ಕೋಟಿ ರೂ.ಗಳ ಪರಿಹಾರ ನೀಡುವ ಬಗ್ಗೆ ಚಿಂತಿಸಿ ಎಂದು ಅಲಹಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

ಉತ್ತರಪ್ರದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದು ಹಾಗೂ ಕ್ವಾರಂಟೈನ್ ಸೆಂಟರ್‍ಗಳ ಸ್ಥಿತಿಗತಿ ಕುರಿತಂತೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಸಿದ್ದಾರ್ಥ ವರ್ಮಾ ಹಾಗೂ ಅಜಿತ್‍ಕುಮಾರ್ ಅವರನ್ನೊಳಗೊಂಡ ವಿಭಾಗಿಯ ಪೀಠ ಈ ಮಹತ್ವದ ಆದೇಶ ನೀಡಿದೆ.

ಸೋಂಕು ಉಲ್ಬಣಗೊಂಡ ಸಂದರ್ಭದಲ್ಲೇ ನಡೆದ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಸೋಂಕು ತಗುಲಿ ಮೃತಪಟ್ಟ ಚುನಾವಣಾ ಅಧಿಕಾರಿಗಳಿಗೆ ಒಂದು ಕೋಟಿಗೆ ಕಡಿಮೆ ಇಲ್ಲದ ಪರಿಹಾರ ನೀಡಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಸೋಂಕಿನ ಸಂದರ್ಭದಲ್ಲೂ ಕರ್ತವ್ಯ ನಿರ್ವಹಿಸಿ ಪ್ರಾಣ ತೆತ್ತಿರುವ ಅಧಿಕಾರಿಗಳ ಕುಟುಂಬಕ್ಕೆ ಒಂದು ಕೋಟಿ ರೂ.ಪರಿಹಾರ ನೀಡುವ ಬಗ್ಗೆ ಮುಂದಿನ ವಿಚಾರಣೆ ಒಳಗೆ ಸರ್ಕಾರ ಹಾಗೂ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.

ಮೀರತ್ ಆಸ್ಪತ್ರೆಯಲ್ಲಿ 20 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿರುವುದನ್ನು ನ್ಯಾಯಾಲಯ ಗಮನಿಸಿದೆ. ಆದರೆ, ಆಸ್ಪತ್ರೆ ಸಿಬ್ಬಂದಿಗಳು ಕೊರೊನಾ ಸೋಂಕಿನ ಪ್ರಮಾಣದ ದೃಷ್ಟಿಯಿಂದ ಅವರ ಸಾವಿಗೆ ಕೊರೊನಾ ಕಾರಣ ಅಲ್ಲ ಎಂಬ ಹೇಳಿಕೆ ನೀಡುತ್ತಿದೆ.

ಇದಕ್ಕೆ ಆಸ್ಪದ ನೀಡದೆ ಎಲ್ಲರೂ ಸೋಂಕಿಗೆ ಬಲಿಯಾಗಿದ್ದಾರೆ ಎಂದೆ ಪರಿಗಣಿಸುವಂತೆಯೂ ನ್ಯಾಯಾಲಯ ಎಚ್ಚರಿಕೆ ನೀಡಿದೆ.
ಅದೇ ರೀತಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ 20 ಮಂದಿಯ ಕೋವಿಡ್ ಪರೀಕ್ಷೆ ವರದಿ ಹಾಗೂ ಮತ್ತಿತರ ದಾಖಲೆಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿದೆ.

Facebook Comments

Sri Raghav

Admin