ಮತ್ತೊಂದು ಸ್ಥಿತ್ಯಂತರಕ್ಕೆ ಸಾಕ್ಷಿಯಾಗಲಿದೆಯೇ ರಾಜ್ಯ ರಾಜಕೀಯ ಬಿಕ್ಕಟ್ಟು..!

ಈ ಸುದ್ದಿಯನ್ನು ಶೇರ್ ಮಾಡಿ

ರಾಜ್ಯ ರಾಜಕಾರಣ ಮತ್ತೆ ಹಲವು ಸ್ಥಿತ್ಯಂತರಗಳಿಗೆ ಸಾಕ್ಷಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಭವಿಷ್ಯ ಡೋಲಾಯಮಾನವಾಗಿರುವ ಈ ಹೊತ್ತಿನಲ್ಲಿ ಹಲವು ಪಲ್ಲಟಗಳು ಘಟಿಸುವ ಸಾಧ್ಯತೆಗಳು ದಟ್ಟೈಸಿವೆ.

ದಿನಕ್ಕೊಂದು, ಕ್ಷಣಕ್ಕೊಂದು ರಾಜಕೀಯ ತಿರುವುಗಳು ಘಟಿಸುತ್ತಿರುವುದನ್ನು ಗಮನಿಸಿದರೆ 2008ರಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿ; ಮಾತೃ ಪಕ್ಷ ಬಿಜೆಪಿಗೆ ಮರ್ಮಾಘಾತ ನೀಡಿದ ಘಟನೆ ಮರುಕಳಿಸಲಿದೆಯೇ ಎಂಬ ಅನುಮಾನ ಹುಟ್ಟು ಹಾಕಿದೆ. ಪ್ರಸ್ತುತ ರಾಜಕೀಯ ಸನ್ನಿವೇಶಗಳನ್ನು ಗಮನಿಸಿದರೆ ಇಂತಹ ಲಕ್ಷಣಗಳು ಗೋಚರಿಸತೊಡಗಿವೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವ ಮತ್ತು ಉರುಳಿಸುವ ರಾಜಕೀಯ ಮೇಲಾಟದ ಜೊತೆ ಜೊತೆಯಲ್ಲೇ ಅಧಿಕಾರ ಪಡೆಯುವ ಹಪಾಹಪಿಯೂ ಹೆಚ್ಚಾಗಿದೆ. ನಾಯಕತ್ವ ಬದಲಾವಣೆ ಮಾಡಿಯಾದರೂ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಬೇಕೆಂಬ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೊಸದೊಂದು ದಾಳ ಉರುಳಿಸಿದ್ದು; ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ರೇವಣ್ಣನವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿ ಸರ್ಕಾರ ನಡೆಸಬೇಕೆಂಬ ತಂತ್ರಗಾರಿಕೆ ಹೆಣೆದಿದ್ದಾರೆ.

ಆದರೆ ಕುಮಾರಸ್ವಾಮಿಯವರಿಗೆ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿಯನ್ನಾಗಿಸುವುದು ಸುತಾರಾಂ ಇಷ್ಟವಿಲ್ಲ. ಈ 13 ತಿಂಗಳಲ್ಲಿ ಅವರಿಂದ ಅನುಭವಿಸಿದ ಯಾತನೆ ಅವರನ್ನು ತೀವ್ರವಾಗಿ ಕಂಗೆಡಿಸಿದೆ. ಅವರ ನಾಯಕತ್ವವನ್ನು ಒಪ್ಪಿ ನಡೆಯಲು ಇಷ್ಟವಿಲ್ಲದ ಅವರು, ಬಿಜೆಪಿಗೆ ಭೇಷರತ್ ಬೆಂಬಲ ನೀಡುವ ತಮ್ಮದೇ ಆದ ದಾಳ ಉರುಳಿಸಿದ ಪರಿಣಾಮವೇ ಸಾ.ರಾ.ಮಹೇಶ್ ಮತ್ತು ಈಶ್ವರಪ್ಪ ಹಾಗೂ ಮುರುಳೀಧರರಾವ್ ಅವರ ಭೇಟಿಯೆಂದೇ ರಾಜಕೀಯ ಪಡಸಾಲೆಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ಇತ್ತ ಬಿಜೆಪಿ ಕಾಂಗ್ರೆಸ್ ಅತೃಪ್ತ ಶಾಸಕರ ಸಹಾಯದಿಂದ ರಾಜ್ಯದಲ್ಲಿ ಅಧಿಕಾರ ಹಿಡಿಯುವ ಕನಸು ಕಾಣುತ್ತಿದೆ. ಆದರೆ ಬಿಜೆಪಿಯಲ್ಲಿನ ಒಂದು ಬಣ ಇದನ್ನು ಸಾರಾಸಗಟಾಗಿ ವಿರೋಧಿಸುತ್ತಲೇ ಬರುತ್ತಿದೆ. ಪರಿಸ್ಥಿತಿಯ ಲಾಭ ಗಿಟ್ಟಿಸಿಕೊಂಡು ಜೆಡಿಎಸ್‍ನ ಬಾಹ್ಯ ಬೆಂಬಲದಿಂದ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಮತ್ತೊಂದು ಬಣ ಅಖಾಡಕ್ಕಿಳಿದಿದೆ.

ಆದರೆ ಯಡಿಯೂರಪ್ಪ ಅಂಡ್ ಟೀಂಗೆ ಇದು ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈ ಬೆಳವಣಿಗೆಯಿಂದ ಮುಖ್ಯಮಂತ್ರಿ ಸ್ಥಾನ ಎಲ್ಲಿ ಕೈ ತಪ್ಪಲಿದೆಯೋ ಎಂಬ ಆತಂಕ ಎದುರಾಗಿದ್ದು ಬಿಎಸ್‍ವೈ ಸಿಡಿದೇಳುವ ಸಾಧ್ಯತೆ ಇದೆ.

ಒಂದೆಡೆ ಮೈತ್ರಿ ಸರ್ಕಾರವನ್ನು ಅಡಕತ್ತರಿಯಲ್ಲಿ ಸಿಲುಕಿಸುತ್ತಲೇ ಮತ್ತೊಂದೆಡೆ ಸ್ವತಃ ಬಿಜೆಪಿಯೇ ಅಧಿಕಾರ ಹಿಡಿಯುವ ಮಾರ್ಗದಲ್ಲಿ ದ್ವಂದ್ವಕ್ಕೊಳಗಾಗಿ ಆಂತರಿಕ ಬಂಡಾಯವನ್ನು ಎದುರಿಸುವಂತಾಗಿದೆ. ಒಂದು ವೇಳೆ ಯಡಿಯೂರಪ್ಪನವರ ವಿರೋಧಿ ಬಣದ ಕೈ ಮೇಲಾದರೆ ರಾಜ್ಯ ರಾಜಕಾರಣ ಮತ್ತೊಂದು ಹೊಸ ಬೃಹನ್ನಾಟಕಕ್ಕೆ ವೇದಿಕೆಯಾಗುವುದರಲ್ಲಿ ಸಂಶಯವೇ ಇಲ್ಲ.

ಕೆಜೆಪಿ ಪಕ್ಷ ಸ್ಥಾಪಿಸಿ ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪರೋಕ್ಷವಾಗಿ ಕಾರಣರಾಗಿದ್ದ ಬಿ.ಎಸ್.ಯಡಿಯೂರಪ್ಪನವರು ನಂತರದ ದಿನಗಳಲ್ಲಿ ಮತ್ತೆ ಬಿಜೆಪಿ ಸೇರ್ಪಡೆಯಾಗಿದ್ದರು. ನಂತರ ಸಂಸದರಾಗಿ, ಪಕ್ಷದ ರಾಜಧ್ಯಕ್ಷರಾಗಿ ಆಯ್ಕೆಯಾದ ಪಕ್ಷವನ್ನು ಮತ್ತೆ ತಳಮಟ್ಟದಿಂದ ಸಂಘಟಿಸಿದ್ದರು.

ಅವರು ಬಿಜೆಪಿ ಪಕ್ಷದ ಅಧ್ಯಕ್ಷರಾದಾಗಲೇ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದೇ ಘೋಷಿಸಲಾಗಿತ್ತು. ಅಂದಿನಿಂದಲೂ ಮುಖ್ಯಮಂತ್ರಿ ಗಾದಿಯ ಕನಸು ಕಾಣುತ್ತಿರುವ ಯಡಿಯೂರಪ್ಪನವರು 2018ರ ಚುನಾವಣೆಯಲ್ಲಿ 104 ಸ್ಥಾನಗಳನ್ನು ಬಿಜೆಪಿಗೆ ಗಳಿಸಿಕೊಡುವಲ್ಲಿ ಯಶಸ್ವಿಯಾದರೂ, ಅಧಿಕಾರ ಗಾದಿಯಿಂದ ಒಂದೆರಡೇ ಹೆಜ್ಜೆಯಲ್ಲಿ ವಂಚಿತರಾದರು. ನಂತರ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 25 ಸ್ಥಾನಗಳನ್ನು ಗಳಿಸಿಕೊಡುವಲ್ಲಿ ಯಶಸ್ವಿಯಾದರು.

ಪ್ರಸ್ತುತ ಸಮ್ಮಿಶ್ರ ಸರ್ಕಾರದ ಪರಿಸ್ಥಿತಿ ಹೇಗಿದೆಯೆಂದರೆ ಸೀನಿದರೆ ಮೂಗೇ ಬೀಳುವ ಹಂತದಲ್ಲಿದೆ. ಇದೀಗ ತಮ್ಮವರೇ ಮತ್ತೊಂದು ರಣತಂತ್ರಕ್ಕೆ ಕೈ ಹಾಕಿರುವುದು ಬಿಎಸ್‍ವೈ ಅವರ ಸಹನೆಯನ್ನೇ ಕಂಗೆಡಿಸಿದೆ. ಮೊದಲೇ ಮುಂಗೋಪಿ ಯಡಿಯೂರಪ್ಪ ಈ ಒತ್ತಡದ ಸ್ಥಿತಿಯಲ್ಲಿ ಮತ್ತೆ ಸಿಡಿದೇಳುವ ಸಾಧ್ಯತೆಯಿದ್ದು; ದುಡುಕಿನ ನಿರ್ಧಾರ ಕೈಗೊಂಡು ಪರ್ಯಾಯ ಚಿಂತನೆ ನಡೆಸಿದರೆ ರಾಜ್ಯದಲ್ಲಿ ಮತ್ತೊಂದು ರಾಜಕೀಯ ಪಲ್ಲಟವಾದರೂ ಆಶ್ಚರ್ಯವಿಲ್ಲ. ಹಾಗೇನಾದರೂ ಆದರೆ ಬಿಜೆಪಿ ತನ್ನ ಬುಡಕ್ಕೆ ತಾನೇ ಕೊಡಲಿ ಪೆಟ್ಟು ಹಾಕಿಕೊಂಡಂತೆ.

ಯಡಿಯೂರಪ್ಪನವರಿಗೆ ಈ ಹಿಂದೆ ಜೆಡಿಎಸ್‍ನೊಂದಿಗಿನ 20:20 ಆಡಳಿತದ ಕಹಿ ಅನುಭವವಿದೆ. ಹೀಗಾಗಿ ಜೆಡಿಎಸ್ ಯಾವುದೇ ಮಾತುಗಳನ್ನು ನಂಬುವಂತಹ ಪರಿಸ್ಥಿತಿಯಲ್ಲಿ ಯಡಿಯೂರಪ್ಪನವರು ಇಲ್ಲ. ದೇಶದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆಯಿದೆ. ಸ್ವಸಾಮಥ್ರ್ಯದಿಂದಲೇ ಬಿಜೆಪಿ ಅಧಿಕಾರ ಹಿಡಿಯಲು ಸಮರ್ಥವಿರುವಾಗ ಜೆಡಿಎಸ್ ಬೆಂಬಲವೇಕೆ ಎಂಬುದು ಯಡಿಯೂರಪ್ಪನವರ ವಾದವಾಗಿದೆ.

ಇತ್ತ ದೇಶದೆಲ್ಲೆಡೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು ಹವಣಿಸುತ್ತಿದೆ. ರಾಜೀನಾಮೆ ನೀಡಿರುವ ಅತೃಪ್ತರನ್ನು ಕಾನೂನಿನಡಿ ಕಟ್ಟಿ ಹಾಕುವ ಪ್ರಯತ್ನವನ್ನು ಮಾಡುತ್ತಿದೆ. ಸುಪ್ರೀಂಕೋರ್ಟ್‍ನಲ್ಲಿ ಕಾನೂನು ಸಮರ ಮುಂದುವರೆಸಿದೆ. ಶಾಸಕರು ಕಾನೂನಿನ ಕುಣಿಕೆಯಿಂದ ಪಾರಾಗುತ್ತಾರೋ, ಇಲ್ಲವೋ, ಸರ್ಕಾರ ಬಚಾವಾಗುತ್ತದೋ ಇಲ್ಲವೋ ಎಂಬ ಜಿಜಸೆಯ ನಡುವೆಯೇ ದಿನಕ್ಕೊಂದು ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹೊಸದೊಂದು ಸಾಧ್ಯತೆ ಹುಟ್ಟುಹಾಕಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸದನದಲ್ಲಿ ವಿಶ್ವಾಸಮತ ಕೋರಿದ್ದಾರೆ. 16 ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದಾರೆ. ಸರ್ಕಾರದ ಬಲ ಕ್ಷೀಣಿಸಿದೆ. ವಿಪಕ್ಷದ ಸಂಖ್ಯಾಬಲ ಹೆಚ್ಚಾಗಿದೆ. ಸದನದಲ್ಲಿ ಸಿಎಂ ವಿಶ್ವಾಸ ಮತದಲ್ಲಿ ಯಶಸ್ಸು ಗಳಿಸಲಿದ್ದಾರೆಯೇ, ಕಾನೂನು ಹೋರಾಟದಲ್ಲಿ ಅತೃಪ್ತರಿಗೆ ಜಯ ಸಿಗಲಿದೆಯೇ ಅಥವಾ ರಾಜಕೀಯ ಬಿಕ್ಕಟ್ಟು ಉಂಟಾಗಿ ರಾಷ್ಟ್ರಪತಿ ಆಡಳಿತ ಜÁರಿಯಾಗಿ ಮಧ್ಯಂತರ ಚುನಾವಣೆ ಘೋಷಣೆಯಾಗಲಿದೆಯೇ ಎಂಬ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕಿದೆ.

Facebook Comments