ಸರ್ಕಾರದ ವರ್ಗಾವಣೆ ಆದೇಶ ಪ್ರಶ್ನಿಸಿ ಸಿಎಟಿಗೆ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಅಲೋಕ್‍ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ. 16- ತಮ್ಮನ್ನು ಆಯುಕ್ತ ಹುದ್ದೆಯಿಂದ ವರ್ಗಾವಣೆ ಮಾಡಿದ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಕೇಂದ್ರ ಆಡಳಿತ ನ್ಯಾಯಾಧೀಕರಣ(ಸಿಎಟಿ)ಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಹಾಲಿ ಕೆಎಸ್‍ಆರ್‍ಪಿ ಎಡಿಜಿಪಿ ಅಲೋಕ್‍ಕುಮಾರ್ ಹಿಂಪಡೆದಿದ್ದಾರೆ.

ಟೆಲಿಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಕೆಎಸ್‍ಆರ್‍ಪಿಯ ಎಡಿಜಿಪಿಯಾಗಿರುವ ಅಲೋಕ್ ಕುಮಾರ್ ಹೆಸರು ತಳುಕು ಹಾಕಿಕೊಂಡಿರುವ ಬೆನ್ನಲ್ಲೇ ಅರ್ಜಿಯನ್ನು ಧಿಡೀರನೆ ವಾಪಸ್ ಪಡೆದಿರುವುದು ಹೊಸ ಬೆಳವಣಿಗೆಯಾಗಿದೆ.

ತಮ್ಮನ್ನು ವರ್ಗಾವಣೆ ಮಾಡಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಅಲೋಕ್‍ಕುಮಾರ್ ಸಿಎಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಯಬೇಕಿತ್ತು. ಸರ್ಕಾರದ ಪರವಾಗಿ ವಾದ ಮಂಡಿಸಲು ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಹಾಜರಾಗಿದ್ದರು.

ಆದರೆ ಇದ್ದಕ್ಕಿದ್ದಂತೆ ಅಲೋಕ್‍ಕುಮಾರ್ ತಮ್ಮ ವಕೀಲರ ಮೂಲಕ ಮೂಲ ಅರ್ಜಿಯನ್ನು ಹಿಂಪಡೆದಿರುವುದಾಗಿ ನ್ಯಾಯಾಧೀಶರ ಗಮನಕ್ಕೆ ತಂದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಒಂದು ವಾರದ ನಂತರ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿತ್ತು.

ತೆರವಾಗಿದ್ದ ಈ ಸ್ಥಾನಕ್ಕೆ ಭಾಸ್ಕರ್ ರಾವ್ ಅವರನ್ನು ನಗರದ ನೂತನ ಆಯುಕ್ತರನ್ನಾಗಿ ನೇಮಿಸಿ ಅಲೋಕ್‍ಕುಮಾರ್ ಅವರನ್ನು ಕೆಎಸ್‍ಆರ್‍ಪಿ ಎಡಿಜಿಪಿಯಾಗಿ ವರ್ಗಾಯಿಸಲಾಗಿತ್ತು.  ಭಾಸ್ಕರ್ ರಾವ್ ಆಯುಕ್ತರಾಗಿ ಒಂದು ವಾರ ಕಳೆಯುವಷ್ಟರಲ್ಲಿ ಫರಾಜ್ ಎಂಬ ವ್ಯಕ್ತಿಯ ಜೊತೆ ದೂರವಾಣಿ ಮೂಲಕ ನಡೆಸಿರುವ ಮಾತುಕತೆ ವಿವರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಕಳೆದ ಜೂನ್ ತಿಂಗಳ ಅವಧಿಯಲ್ಲಿ ತಮ್ಮನ್ನು ಬೆಂಗಳೂರು ನಗರ ಆಯುಕ್ತರ ಹುದ್ದೆಗೆ ಪರಿಗಣಿಸುವಂತೆ ಕಾಂಗ್ರೆಸ್ ಮುಖಂಡ ಅಹಮ್ಮದ್ ಪಟೇಲ್ ಅವರ ಜೊತೆ ಮಾತುಕತೆ ನಡೆಸುವಂತೆ ಲಾಬಿ ನಡೆಸಿದ್ದಾರೆಂಬ ಆರೋಪ ಕೇಳಿಬಂದಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಭಾಸ್ಕರ್‍ರಾವ್ ಮತ್ತು ಫರಾಜ್ ನಡೆಸಿರುವ ಮಾತುಕತೆ ವಿವರ ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎಂ.ರಾಜು ಅವರು ಸಿಸಿಬಿಯ ಜಂಟಿ ಆಯುಕ್ತ ಸಂದೀಪ್ ಪಾಟಿಲ್‍ಗೆ ಸೂಚಿಸಿದ್ದರು.

ತನಿಖೆ ನಡೆಸಿ ವರದಿ ನೀಡಿದ ನಂತರ ಬೆಚ್ಚಿ ಬೀಳುವ ಕೆಲವು ಆಘಾತಕಾರಿ ವಿಷಯಗಳು ಹೊರಬಿದ್ದಿದ್ದವು. ರಾಜಕಾರಣಿಗಳು, ಪತ್ರಕರ್ತರು, ಉದ್ಯಮಿಗಳು, ಕೈಗಾರಿಕೋದ್ಯಮಿಗಳು ಸೇರಿದಂತೆ ಸುಮಾರು 300 ಜನರ ದೂರವಾಣಿ ಕರೆಗಳನ್ನುಕದ್ದಾಲಿಕೆ ಮಾಡಲಾಗಿತ್ತು ಎಂಬ ದೂರು ಕೇಳಿಬಂದಿತ್ತು.

ಇದರಲ್ಲಿ ಅಲೋಕ್ ಕುಮಾರ್ ಅವರ ಹೆಸರು ತಳುಕು ಹಾಕಿಕೊಂಡಿದ್ದು ಶಿಸ್ತು ಕ್ರಮದ ಭೀತಿ ಎದುರಾಗಿದೆ. ಇದರಿಂದಲ ಪಾರಾಗುವ ಸಲುವಾಗಿಯೇ ಅರ್ಜಿಯನ್ನು ಹಿಂಪಡೆದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Facebook Comments

Sri Raghav

Admin