ಕ್ರಿಕೆಟ್‍ಗೆ ಗುಡ್ ಬೈ ಹೇಳಿದ ಅಂಬಟಿ ರಾಯುಡು..!

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್, ಜು.3- ಕಲಾತ್ಮಕ ಆಟಗಾರ ಅಂಬಟಿ ರಾಯ್ಡು ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ವಿಶ್ವಕಪ್‍ನಲ್ಲಿ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ನಿರಾಸೆಗೊಂಡಿದ್ದ ಅವರು ತಮ್ಮ ಆಪ್ತರ ಬಳಿ ನೋವು ತೋಡಿಕೊಂಡಿದ್ದರು.

ಇಂದು ಅಚ್ಚರಿಯ ಬೆಳವಣಿಗೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳುತ್ತಿರುವುದಾಗಿ ಘೋಷಿಸಿದ್ದಾರೆ. ಭಾರತ ತಂಡದ ಏಕದಿನ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಅಂಬಟಿ ರಾಯ್ಡು ಅವರು ಮಹೇಂದ್ರ ಸಿಂಗ್ ಧೋನಿ ಬಳಗದಲ್ಲಿ ನೆಚ್ಚಿನ ಆಟಗಾರರೆಂದೇ ಗುರುತಿಸಿಕೊಂಡಿದ್ದರು.

ಐಪಿಎಲ್‍ನಲ್ಲಿ ತಮ್ಮ ನೈಜ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ತರುವಾಯ ಅವರು ಭಾರತದ ಏಕದಿನ ಪಂದ್ಯದ ತಂಡದಲ್ಲಿ ಸ್ಥಾನ ಪಡೆದಿದ್ದರು. ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಅಡಿಪಾಯ ಹಾಕಿ ತಂಡದ ಗೆಲುವಿಗೆ ಪ್ರಮುಖ ಪಂದ್ಯಾವಳಿಗಳಲ್ಲಿ ಗಮನ ಸೆಳೆದಿದ್ದರು.

33 ವರ್ಷದ ರಾಯ್ಡು ಈವರೆಗೆ ಸುಮಾರು 55 ಏಕದಿನ ಪಂದ್ಯಗಳನ್ನು ಆಡಿದ್ದು, 1694 ರನ್ (47.5 ಸರಾಸರಿ) ಕಲೆ ಹಾಕಿದ್ದಾರೆ. ವಿಶ್ವಕಪ್ ಪಂದ್ಯಾವಳಿಗೆ ಭಾರತ ತಂಡವನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ರಾಯ್ಡು ಅವರಿಗೆ ಅದೃಷ್ಟ ಒಲಿಯುತ್ತದೆ ಎಂದು ನಿರೀಕ್ಷಿಸಲಾಗಿತ್ತು.

ಆದರೆ, ಅವರ ಬದಲಿಗೆ ಕೊನೆ ಗಳಿಗೆಯಲ್ಲಿ ಶಂಕರ್‍ಗೆ ಮಣೆ ಹಾಕಲಾಗಿತ್ತು. ಇದು ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದರ ನಡುವೆ ಆಯ್ಕೆ ಸಮಿತಿಯ ಎಂಎಸ್‍ಕೆ ಪ್ರಸಾದ್ ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin