ಒಂದೆಡೆ ಆಂಬುಲೆನ್ಸ್ ಗಳಿಗಾಗಿ ಪರದಾಟ, ಮತ್ತೊಂದೆಡೆ ತುಕ್ಕು ಹಿಡಿಯುತ್ತಿವೆ ನೋಡಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.8- ಸಿಲಿಕಾನ್ ಸಿಟಿಯಲ್ಲಿ ಆ್ಯಂಬುಲೆನ್ಸ್‍ಗಳ ಕೊರತೆ ಕಾಡುತ್ತಿದೆ. ಕೊರೊನಾ ಸೋಂಕಿತರನ್ನು ಸಾಗಿಸಲು ಆ್ಯಂಬುಲೆನ್ಸ್‍ಗಳಿಲ್ಲದೆ ಜನ ಪರದಾಡುತ್ತಿದ್ದಾರೆ. ಆ್ಯಂಬುಲೆನ್ಸ್‍ಗಳಿಗಾಗಿ ಫೋನ್ ಮಾಡಿ ಗಂಟೆಗಟ್ಟಲೆ, ದಿನಗಟ್ಟಲೆ ಕಾದು ಕಾದು ಹೈರಾಣಾಗುತ್ತಿರುವ ಪರಿಸ್ಥಿತಿ ಒಂದೆಡೆಯಾದರೆ ಸಣ್ಣಪುಟ್ಟ ದುರಸ್ತಿಯಾಗಿ ನೂರಾರು ಆ್ಯಂಬುಲೆನ್ಸ್‍ಗಳು ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿರುವ ಪರಿಸ್ಥಿತಿ ಮತ್ತೊಂದೆಡೆಯಾಗಿದೆ.

ಕೊರೊನಾ ಸೋಂಕಿತರನ್ನು ಆಸ್ಪತ್ರೆಗಳಿಗೆ ರವಾನಿಸಲು ಆ್ಯಂಬುಲೆನ್ಸ್‍ಗಳು ಇಲ್ಲದೆ ಬಿಬಿಎಂಪಿ ಆ್ಯಂಬುಲೆನ್ಸ್ ಬದಲಾಗಿ ಟಿಟಿಗಳನ್ನು ಕಳುಹಿಸುವ ವ್ಯವಸ್ಥೆ ಮಾಡಿದೆ. ಆದರೆ, ಹಲವು ತಿಂಗಳುಗಳಿಂದ ಸಣ್ಣಪುಟ್ಟ ರಿಪೇರಿ ಆಗದೆ ನೂರಾರು ಆ್ಯಂಬುಲೆನ್ಸ್‍ಗಳು ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿವೆ.

ಈ ಆ್ಯಂಬುಲೆನ್ಸ್‍ಗಳನ್ನು ಹೊರತೆಗೆದು ಸಣ್ಣಪುಟ್ಟ ದುರಸ್ತಿ ಮಾಡಿಸಿದರೆ ಆ್ಯಂಬುಲೆನ್ಸ್‍ಗಳ ಸಮಸ್ಯೆ ಎಷ್ಟೋ ಬಗೆಹರಿಯುತ್ತದೆ. ಆದರೆ, ಅಧಿಕಾರಿಗಳು ಇದಾವುದಕ್ಕೂ ತಲೆಕೆಡಿಸಿಕೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.

ಅವು ಕೆಟ್ಟು ನಿಂತರೆ ಏನಂತೆ? ಯಾರು ಸತ್ತು ಹೋದರೆ ಏನಂತೆ? ಸಮಸ್ಯೆಗಳು ಉಲ್ಬಣವಾದರೆ ಆದಾಯ ಹೆಚ್ಚು ಬರುತ್ತದೆ ಎಂಬ ಯೋಚನೆ ಇವರದ್ದು. ಮಾಗಡಿ ರಸ್ತೆಯ ಹೌಸಿಂಗ್‍ಬೋರ್ಡ್‍ನಲ್ಲಿ ಸಣ್ಣಸಣ್ಣ ಸಮಸ್ಯೆಯಿಂದ ನೂರಾರು ಆ್ಯಂಬುಲೆನ್ಸ್‍ಗಳನ್ನು ನಿಲ್ಲಿಸಲಾಗಿದೆ.

ಆರೋಗ್ಯ ಸಚಿವರು, ಉಸ್ತುವಾರಿ ಸಚಿವರು ಇತ್ತ ಗಮನಹರಿಸಿ ಇವುಗಳನ್ನು ಹೊರತೆಗೆಸಿ, ರಿಪೇರಿ ಮಾಡಿಸಿ ಈ ಸಂಕಷ್ಟದ ಸಂದರ್ಭದಲ್ಲಿ ಬಳಸಿಕೊಂಡರೆ ಅನುಕೂಲವಾಗುತ್ತದೆ.

ಸಿಲಿಕಾನ್ ಸಿಟಿಯಲ್ಲಿ ಆ್ಯಂಬುಲೆನ್ಸ್ ಸಮಸ್ಯೆ ಬಹುತೇಕ ಬಗೆಹರಿಯುತ್ತದೆ.  ಯಾವುದೋ ಟಿಟಿಗಳನ್ನು ಕಳುಹಿಸುವ ಬದಲಾಗಿ ಇಲ್ಲಿರುವ ಆ್ಯಂಬುಲೆನ್ಸ್‍ಗಳನ್ನು ರಿಪೇರಿ ಮಾಡಿ ಅನುಕೂಲ ಕಲ್ಪಿಸುವುದು ಸಮಂಜಸವಲ್ಲವೆ? ಈ ನಿಟ್ಟಿನಲ್ಲಿ ಯೋಚಿಸುವುದು ಸೂಕ್ತವಲ್ಲವೆ?

ಬಿಬಿಎಂಪಿ ಆರೋಗ್ಯ ವಿಭಾಗದ ಯಾರಿಗೂ ಇದು ಹೊಳೆದಿಲ್ಲವೆ? ಹೊಳೆದರೂ ಕೂಡ ನಮಗ್ಯಾಕೆ ಇದರ ಉಸಾಬರಿ ಎಂಬ ಉಡಾಫೆ ಧೋರಣೆಯೆ? ಅಥವಾ ಇದರಿಂದ ಯಾವುದೇ ಲಾಭ ನಮಗೆ ಬರುವುದಿಲ್ಲ ಎಂಬ ನಿರ್ಲಕ್ಷ್ಯದ ಮನೋಭಾವವೇ?

ಆ್ಯಂಬುಲೆನ್ಸ್ ಕೊರತೆಯಿಂದ ಸಾವು-ನೋವಾಗುತ್ತಿರುವುದು ನಮ್ಮ ಕಣ್ಮುಂದೆ ಇದೆ. ಸರ್ಕಾರಕ್ಕೆ, ಬಿಬಿಎಂಪಿಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ. ಕೊರೊನಾ ಪಾಸಿಟಿವ್ ಕಂಡುಬಂದು 24 ಗಂಟೆಯಾದರೂ ಆ್ಯಂಬುಲೆನ್ಸ್ ಮನೆಯ ಬಳಿ ಬರುತ್ತಿಲ್ಲ. ಆ್ಯಂಬುಲೆನ್ಸ್ ಇಲ್ಲದೆ ಆಸ್ಪತ್ರೆಗೆ ಹೋಗಲಾಗುತ್ತಿಲ್ಲ. ಇಂತಹ ಪರಿಸ್ಥಿತಿ ನಗರದಲ್ಲಿದೆ.

ಹೀಗಿದ್ದರೂ ಕನಿಷ್ಟ ಕೆಟ್ಟು ನಿಂತಿರುವ ಆ್ಯಂಬುಲೆನ್ಸ್‍ಗಳನ್ನು ಸರಿಪಡಿಸಿ ಅಧಿಕಾರಿಗಳು ರಸ್ತೆಗೆ ಬಿಡುತ್ತಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.  ರಿಪೇರಿಗೆ ಆಗ್ರಹ: ಈ ಕೂಡಲೇ ಆ್ಯಂಬುಲೆನ್ಸ್ ರಿಪೇರಿ ಮಾಡಿಸಿ ಕೊರೊನಾ ಪೀಡಿತರ ಸೇವೆಗೆ ಬಳಸಿಕೊಳ್ಳುವಂತೆ ಬಿಬಿಎಂಪಿ ವಿರೋಧ ಪಕ್ಷದ ಅಬ್ದುಲ್ ವಾಜಿದ್ ಆಗ್ರಹಿಸಿದ್ದಾರೆ.

ಆ್ಯಂಬುಲೆನ್ಸ್‍ಗಳ ಕೊರತೆಯಿಂದ ಸಾವು-ನೋವು ನಗರದಲ್ಲಿ ಸಂಭವಿಸುತ್ತಿವೆ. ಆ್ಯಂಬುಲೆನ್ಸ್‍ಗಳಿಲ್ಲದೆ ಬಿಬಿಎಂಪಿ ರೋಗಿಗಳ ಸೇವೆಗೆ ಟಿಟಿಗಳನ್ನು ಕಳುಹಿಸುತ್ತಿದೆ. ಅದರ ಬದಲು ಕೆಟ್ಟುನಿಂತಿರುವ ಆ್ಯಂಬುಲೆನ್ಸ್‍ಗಳನ್ನು ರಿಪೇರಿ ಮಾಡಿಸಿ ಕೊರೊನಾ ಪೀಡಿತರ ಸೇವೆಗೆ ಬಳಸಿಕೊಳ್ಳುವುದು ತಕ್ಷಣದ ಅಗತ್ಯವಾಗಿದೆ ಎಂದು ವಾಜಿದ್ ಒತ್ತಾಯಿಸಿದ್ದಾರೆ.

Facebook Comments