ಒಕ್ಕಲಿಗ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಿ
ಮಂಡ್ಯ, ಜ.22- ರಾಜ್ಯದ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಒಕ್ಕಲಿಗ ಸಮುದಾಯ ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದಿದ್ದು ಒಕ್ಕಲಿಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕೆಂದು ನಗರಸಭೆ ಮಾಜಿ ಅಧ್ಯಕ್ಷೆ ಅಂಬುಜಮ್ಮ ಒತ್ತಾಯಿಸಿದ್ದಾರೆ. ಸುಮಾರು 5 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಹರಪ್ಪ ಮೊಹೆಂಜೊದಾರೊ ನಾಗರಿಕ ಸೊಗಡನ್ನು ಒಕ್ಕಲಿಗ ಜನಾಂಗ ಉಳಿಸಿ-ಬೆಳೆಸಿಕೊಂಡು ಬರುತ್ತಿದೆ. ಜೊತೆಗೆ ಒಕ್ಕಲಿಗ ಸಮುದಾಯದಲ್ಲಿ ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದವರು ಅಪಾರ ಸಂಖ್ಯೆಯಲ್ಲಿದ್ದಾರೆ.
ಆದ ಕಾರಣ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ಸಮುದಾಯಕ್ಕೆ ಶಕ್ತಿ ತುಂಬಬೇಕೆಂದು ಒತ್ತಾಯಿಸಿದ್ದಾರೆ. ನಮ್ಮ ಸಮಾಜದ ಸಂಸದರು, ಶಾಸಕರು, ಸಚಿವರು, ಎಂಎಲ್ಸಿ, ಸಭೆಯಲ್ಲಿ ಚರ್ಚೆ ಮಾಡುತ್ತಿಲ್ಲ. ಈಗಲಾದರೂ ಎಚ್ಚೆತ್ತುಕೊಂಡು ಮುಖ್ಯಮಂತ್ರಿಗಳ ಜೊತೆ ಚರ್ಚೆಸಿ ನಿಗಮ ಸ್ಥಾಪಿಸಿ ಬಡವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅಗತ್ಯ ಇಲ್ಲದಿದ್ದರೂ ಭಾಷೆ, ಜಾತಿಗೊಂದು ಪ್ರಾಧಿಕಾರ ರಚಿಸುವ ಮೂಲಕ ಸಮುದಾಯಗಳನ್ನು ಓಲೈಸಲಾಗುತ್ತಿದೆ. ಆದರೆ ನಮ್ಮ ಸಮುದಾಯ ಬಡವರು ಮತ್ತು ಮಹಿಳೆಯರಿಗೂ ನಿಗಮ ಸ್ಥಾಪಿಸಿ ಮೇಲೆತ್ತುವ ಕೆಲಸ ಮಾಡಬೇಕು. ಒಕ್ಕಲಿಗ ಸಂಸದರು, ಶಾಸಕರು ಸಚಿವರು ಧ್ವನಿಗೂಡಿಸಿ ನಮ್ಮ ಸಮಾಜವನ್ನು ಅಭಿವೃದ್ಧಿ ಕಡೆಗೆ ಕೊಂಡೊಯ್ಯಲು ಶ್ರಮಿಸುವ ಜೊತೆಗೆ ನಿಗಮ ಸ್ಥಾಪನೆಗೆ ಮುಂದಾಗುವಂತೆ ಒತ್ತಾಯಿಸಿದ್ದಾರೆ.