ಪುಟ್ ಪಾತ್ ನಲ್ಲಿ ಶವ ಇಟ್ಟು ಪರಾರಿಯಾಗಿದ್ದ ಆ್ಯಂಬುಲೆನ್ಸ್ ಚಾಲಕನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 28- ಹೆಚ್ಚು ಹಣ ಕೊಡದಿದ್ದಕ್ಕೆ ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಪುಟ್ ಪಾತ್ ನಲ್ಲಿ ಇಟ್ಟು ಪರಾರಿಯಾಗಿದ್ದ ಆ್ಯಂಬುಲೆನ್ಸ್ ಚಾಲಕನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಜಿಲ್ಲೆಯ ನಿವಾಸಿ ಶರತ್ ಬಂಧಿತ ಆ್ಯಂಬುಲೆನ್ಸ್ ಚಾಲಕ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟ ವ್ಯಕ್ತಿಯ ಶವವನ್ನು ಅಂತ್ಯ ಸಂಸ್ಕಾರಕ್ಕಾಗಿ ಹೆಬ್ಬಾಳದ ಚಿತಾಗಾರಕ್ಕೆ ಆ್ಯಂಬುಲೆನ್ಸ್ ನಲ್ಲಿ ಕೊಂಡೊಯ್ಯಲಾಗುತ್ತಿತ್ತು. ಆಗ ಚಾಲಕ 18 ಸಾವಿರ ರೂ. ಹಣ ಕೊಡುವಂತೆ ಮೃತರ ಸಂಬಂಧಿಕರ ಬಳಿ ಬೇಡಿಕೆ ಇಟ್ಟಿದ್ದ. ಸಂಬಂಧಿಕರು ಇದಕ್ಕೆ ಒಪ್ಪದೆ ಇದ್ದಾಗ ಅಮಾನವೀಯತೆ ಪ್ರದರ್ಶಿಸಿದ ಚಾಲಕ, ಶವವನ್ನು ಪುಟ್ ಪಾತ್ ನಲ್ಲಿ ಇಳಿಸಿ ಪರಾರಿಯಾಗಿದ್ದ.

ಮೃತರ ಸಂಬಂಧಿಕರು ಈ ಬಗ್ಗೆ ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ.

Facebook Comments