ಪ್ರತಿನಿತ್ಯ ‘ಪ್ಲಾಸ್ಟಿಕ್’ ತಿನ್ನುತ್ತಿದ್ದಾರೆ ಅಮೆರಿಕನ್ನರು..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಜೂ.11- ಆಧುನಿಕ ಜಗತ್ತಿನ ಹಾನಿಕಾರಕ ಪಿಡುಗುಗಳಲ್ಲಿ ಒಂದಾದ ಪ್ಲಾಸ್ಟಿಕ್ ದುಷ್ಪರಿಣಾಮಗಳ ಬಗ್ಗೆ ಬಗೆದಷ್ಟು ಹೊಸ ಹೊಸ ಆತಂಕಕಾರಿ ಸಂಗತಿಗಳು ಬೆಳಕಿಗೆ ಬರುತ್ತಿವೆ.  ಈಗ ಬಯಲಾಗಿರುವ ಪ್ಲಾಸ್ಟಿಕ್ ಹೆಮ್ಮಾರಿಯ ದುಷ್ಪರಿಣಾಮ ಮತ್ತಷ್ಟು ಆಘಾತಕಾರಿಯಾಗಿದೆ.

ಪ್ರತಿ ವರ್ಷ ಅಮೆರಿಕನ್ನರು 74000ದಿಂದ 1,21,000ದಷ್ಟು ಅತ್ಯಂತ ಸೂಕ್ಷ್ಮ ಪ್ಲಾಸ್ಟಿಕ್‍ಗಳನ್ನು ತಮಗೆ ಅರಿವಿಲ್ಲದೆಯೇ ಸೇವಿಸುತ್ತಿದ್ದಾರೆ ಎಂದು ಹೊಸ ವಿಶ್ಲೇಷಣೆಯೊಂದು ವರದಿ ಮಾಡಿದೆ. ಇನ್ನೊಂದು ಅಂದಾಜಿನ ಪ್ರಕಾರ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ.

ಎನ್ವಿರಾನ್‍ಮೆಂಟಲ್ ಸೈನ್ಸಸ್ ಅಂಡ್ ಟೆಕ್ನಾಲಜಿ ನಿಯತ ಕಾಲಿಕದಲ್ಲಿ ಈ ಕುರಿತು ವಿಶ್ಲೇಷಣಾ ವರದಿಯೊಂದು ಪ್ರಕಟವಾಗಿದೆ. ಅಮೆರಿಕದಲ್ಲಿ ಪ್ಲಾಸ್ಟಿಕ್ ವಸ್ತುವಿಲ್ಲದ ದೈನಂದಿನ ಚಟುವಟಿಕೆಗಳನ್ನು ಊಹೆ ಮಾಡಿಕೊಳ್ಳುವುದಕ್ಕೂ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ತತ್ಪರಿಣಾಮ ಅಮೆರಿಕನ್ನರು ಪ್ಲಾಸ್ಟಿಕ್ ಪೊಟ್ಟಣಗಳಲ್ಲಿನ ಆಹಾರವನ್ನುಸೇವಿಸುತ್ತಾರೆ.

ಅತ್ಯಂತ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ಆಹಾರದೊಂದಿಗೆ ಅಮೆರಿಕನ್ನರ ಉದರ ಸೇರುತ್ತಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ. ಮತ್ತೊಂದು ಆತಂಕಕಾರಿ ಸಂಗತಿ ಎಂದರೆ ಮೈಕ್ರೋ ಪ್ಲಾಸ್ಟಿಕ್ ಕಣಗಳು ಗಾಳಿಯಲ್ಲಿ ಸ್ವಚ್ಛಂದವಾಗಿ ತೇಲಾಡುತ್ತಿರುತ್ತವೆ.

ಉಸಿರಾಡಿದಾಗ ಈ ಸೂಕ್ಷ್ಮ ಕಣಗಳು ದೇಹವನ್ನು ಪ್ರವೇಶಿಸುತ್ತವೆ. ಇದರಿಂದಾಗಿ ಕೆಲವು ಅನಾರೋಗ್ಯಗಳಿಗೆ ಅಮೆರಿಕನ್ನರು ಒಳಗಾಗುತ್ತಿರುವ ಪ್ರಕರಣಗಳೂ ಹೆಚ್ಚಾಗುತ್ತಿವೆ.

ಅಚ್ಚರಿಯ ಸಂಗತಿ ಎಂದರೆ ಗಾಳಿಯಲ್ಲಿ ಇರುವ ಇಂಥ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ಮನುಷ್ಯನ ಹೊಟ್ಟೆ ಸೇರುವ ತನಕ ಶೂನ್ಯದಲ್ಲೇ ಇರುತ್ತವೆ. ಮಾನವನ ಉದರ ಸೇರಿದ ನಂತರ ಇವು ಮತ್ತಷ್ಟು ಸಕ್ರಿಯಗೊಂಡು ರೋಗಕಾರಕಗಳಾಗುತ್ತವೆ ಎಂದು ಜೀವವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ಲಾಸ್ಟಿಕ್ ದುಷ್ಪರಿಣಾಮಗಳ ಬಗ್ಗೆ ಜನಜಾಗೃತಿಯಿಂದ ಇವುಗಳ ಬಳಕೆಯಲ್ಲಿ ಗಮನಾರ್ಹ ಇಳಿಕೆಯಾಗಿದ್ದರೂ ಅಗೋಚರ ಕಣಗಳು ಪರೋಕ್ಷವಾಗಿ ಆಹಾರ ಮತ್ತು ಗಾಳಿಯ ಮೂಲಕ ಮನುಷ್ಯನ ದೇಹದ ಮೇಲೆ ದಾಳಿ ಮಾಡಿ ಆರೋಗ್ಯಕ್ಕೆ ಕೆಡಕುಂಟು ಮಾಡುತ್ತಿವೆ.

ಪ್ಲಾಸ್ಟಿಕ್‍ನ ಈ ಅಗೋಚರ ಆಕ್ರಮಣದ ವಿರುದ್ಧ ಪರಿಣಾಮಕಾರಿ ಹೋರಾಟ ಮತ್ತು ಮತ್ತಷ್ಟು ಅರಿವು ಮೂಡಿಸುವುದೇ ಇದಕ್ಕೆ ಏಕೈಕ ಮಾರ್ಗ ಎಂಬುದು ಪರಿಸರ ವಾದಿಗಳ ಅಭಿಪ್ರಾಯವಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ