ಪೌರತ್ವ ತಿದ್ದುಪಡಿ ಕಾಯ್ದೆ ಅಭಿಯಾನ : 18ರಂದು ಹುಬ್ಬಳ್ಳಿಗೆ ಅಮಿತ್‍ ಷಾ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.8- ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಎರಡನೇ ಹಂತದ ಅಭಿಯಾನ ನಾಳೆಯಿಂದ ಆರಂಭವಾಗಲಿದ್ದು, ಇದೇ 18ರಂದು ಹುಬ್ಬಳ್ಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ. ನಾಳೆಯಿಂದ 15ರವರೆಗೆ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ಬೂತ್‍ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಕೇಂದ್ರ ಸಚಿವರಿಂದ ಹಿಡಿದು ಪಕ್ಷದ ಪ್ರಮುಖರು ಮನೆ ಮನೆಗೆ ತೆರಳಿ ಅಭಿಯಾನದ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡುವರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ನಾಳೆಯಿಂದ 15ರವರೆಗೆ ರಾಜ್ಯದನಾನಾ ಭಾಗಗಳಿಂದ ಅಭಿಯಾನ ನಡೆಯಲಿದೆ. ನಾಳೆ ರಾಯಚೂರು ಜಿಲ್ಲೆಯ ಸಿಂದನೂರು ಮತ್ತು ಮಸ್ಕಿಯಲ್ಲಿ ಬೃಹತ್ ಕಾರ್ಯಕ್ರಮವನ್ನು ನಡೆಸಲಾಗುವುದು . ಪೌರತ್ವ ಕುರಿತಂತೆ ಪ್ರತಿಪಕ್ಷಗಳು ಸಾರ್ವಜನಿಕರಲ್ಲಿ ಉಂಟು ಮಾಡುತ್ತಿರುವ ಗೊಂದಲವನ್ನು ಮನವರಿಕೆ ಮಾಡಿಕೊಡುವುದಾಗಿ ತಿಳಿಸಿದರು.

ಜ.11ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕಲಬುರ್ಗಿ, ಯಾದಗಿರಿಯಲ್ಲಿ ಬೃಹತ್ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡುವರು. ಅದೇ ದಿನದಂದು ಕೇಂದ್ರದ ಮತ್ತೊಬ್ಬ ಸಚಿವರಾದ ರಾಜ್ಯ ಹಣಕಾಸು ಸಚಿವ ಅನುರಾಗ್‍ಠಾಕೂರು ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ ನಡೆಯಲಿರುವ ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಂಡು ಪೌರತ್ವ ಕಾಯ್ದೆ ಬಗ್ಗೆ ಜನರಲ್ಲಿ ಉಂಟಾಗಿರುವ ನಿವಾರಣೆ ಮಾಡಲಿದ್ದಾರೆ ಎಂದರು.

ಜ.12ರಂದು ರಾಯಚೂರಿನಲ್ಲಿ ಪ್ರಹ್ಲಾದ್‍ಜೋಶಿ ಅವರು, 13ರಂದು ಉಪ ಮುಖ್ಯಮಂತ್ರಿ ಲಕ್ಷ್ಮಣಸವದಿ ಅವರು ದಾವಣಗೆರೆ ಮತ್ತು ಹಾವೇರಿಯಲ್ಲಿ ಅಭಿಯಾನ ನಡೆಸು ವರು. ಜ.18ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ಸುಮಾರು ಒಂದು ಲಕ್ಷ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇದಕ್ಕಾಗಿ ಭರದ ಸಿದ್ದತೆಗಳು ನಡೆದಿವೆ ಎಂದರು.

ಎರಡನೇ ಹಂತದ ಅಭಿಯಾನದಲ್ಲಿ ಕೇಂದ್ರ ಸಚಿವರು, ಸಂಸದರು, ರಾಜ್ಯಸಭೆ ಸದಸ್ಯರು, ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಪಂ, ತಾಪಂ, ಗ್ರಾಪಂ ಸದಸ್ಯರು, ಜಿಲ್ಲಾ ಮತ್ತು ತಾಲ್ಲೂಕು ಅಧ್ಯಕ್ಷರು ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್‍ನ ಕುತಂತ್ರ, ಕಮ್ಯುನಿಸ್ಟರ ಷಡ್ಯಂತ್ರ ಮತ್ತು ಪಿತೂರಿಯನ್ನು ಜನತೆ ಮುಂದೆ ಬಯಲು ಮಾಡುತ್ತೇವೆ. ಕಾಯ್ದೆ ಕುರಿತಂತೆ ಎಷ್ಟೇ ಷಡ್ಯಂತ್ರ ನಡೆಯುತ್ತಿದ್ದರೂ ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ. ಜನರು ಸಂಪೂರ್ಣವಾಗಿ ತಿರಸ್ಕಾರ ಮಾಡಲಿದ್ದಾರೆ ಎಂದು ಹೇಳಿದರು.

ಪಕ್ಷದ ಪ್ರಧಾನಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಮಾತನಾಡಿ, ಪೌರತ್ವ ಕಾಯ್ದೆ ಕುರಿತ ಅಭಿಯಾನಕ್ಕೆ ಜನತೆಯಿಂದ ಉತ್ತಮ ಪ್ರತಿಕ್ರಿಯೆ ಕಂಡು ಬರುತ್ತಿದೆ. 253 ಮಂಡಲಗಳು, 21ಸಾವಿರ ಬೂತ್‍ಗಳ ಮೂಲಕ ಈವರೆಗೆ 4.65ಲಕ್ಷ ಮನೆಗಳನ್ನು ತಲುಪಲಾಗಿದೆ. ಕೆಲವು ಕಡೆ ಒಂದಿಷ್ಟು ವಿರೋಧ ವ್ಯಕ್ತವಾದರೂ ಅಂತಹವರನ್ನು ಮನವರಿಕೆ ಮಾಡುವ ಪ್ರಯತ್ನ ನಡೆಸಿದ್ದೇವೆ.

ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ಇದನ್ನು ಯಶಸ್ವಿಯಾಗಿ ನಿಭಾಯಿಸುತ್ತೇವೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮಾಧ್ಯಮ ಸಂಚಾಲಕರಾದ ಎ.ಎಚ್.ಆನಂದ್ ಉಪಸ್ಥಿತರಿದ್ದರು.

Facebook Comments