ನಾಳೆ ರಾಜ್ಯಕ್ಕೆ ಅಮಿತ್ ಷಾ ಭೇಟಿ, ಸಂಪುಟ ವಿಸ್ತರಣೆ ಸಿಗುತ್ತಾ ಗ್ರೀನ್ ಸಿಗ್ನಲ್..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.16- ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆ, ಪೌರತ್ವ ತಿದ್ದುಪಡಿ ಕಾಯ್ದೆ ವಿವಾದ, ಪಕ್ಷದ ಸಂಘಟನೆ ಸೇರಿದಂತೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ರಾಜ್ಯ ನಾಯಕರಿಗೆ ಸೂಕ್ತ ಸಲಹೆ ನೀಡಲು ನಾಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಉಪಚುನಾವಣೆಯಲ್ಲಿ ಗೆದ್ದಿರುವ ಶಾಸಕರಿಗೆ ಸಚಿವ ಸ್ಥಾನ ನೀಡುವ ಕುರಿತಂತೆ ಸಚಿವ ಸಂಪುಟ ವಿಸ್ತರಣೆ ಮಾಡಬೇಕೆಂಬ ಕೂಗು ಕೇಳಿಬಂದಿರುವ ಬೆನ್ನಲ್ಲೇ ಅಮಿತ್ ಷಾ ಅವರ ಈ ಭೇಟಿ ಭಾರೀ ಮಹತ್ವ ಪಡೆದುಕೊಂಡಿದೆ.

ನಾಳೆ ಯಾವ ಸಮಯದಲ್ಲಿ ಬೆಂಗಳೂರಿಗೆ ಆಗಮಿಸುವರು ಎಂಬುದು ಈವರೆಗೂ ಖಚಿತಪಟ್ಟಿಲ್ಲ. ಅರಮನೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಸಂಜೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಕೆಲವು ನಾಯಕರನ್ನು ಭೇಟಿಯಾಗುವ ಸಂಭವವಿದೆ. ಪೌರತ್ವ ಕಾಯ್ದೆ ಕುರಿತು ಶನಿವಾರ ಹುಬ್ಬಳ್ಳಿಯಲ್ಲಿ ನಡೆಯಲಿರುವ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಬಳಿಕ ಅವರು ನವದೆಹಲಿಗೆ ತೆರಳಲಿದ್ದಾರೆ.

ನಾಳೆ ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ತಂಗಲಿರುವ ಅಮಿತ್ ಷಾ ರಾಜ್ಯದ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಕೆಲವು ಆಯ್ದ ನಾಯಕರನ್ನು ಭೇಟಿಯಾಗಲಿದ್ದಾರೆ.
ಮುಖ್ಯವಾಗಿ ದಾವೋಸ್‍ಗೆ ತೆರಳುವ ಮುನ್ನ ಸಿಎಂ ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಡುವರು.

ಈ ಹಿಂದೆ ನವದೆಹಲಿಗೆ ತೆರಳುವುದಾಗಿ ಬಿಎಸ್‍ವೈ ಹೇಳಿದ್ದರಾದರೂ ದೆಹಲಿ ವರಿಷ್ಠರು ಅನುಮತಿ ನೀಡಿರಲಿಲ್ಲ. ಹೀಗಾಗಿ ಅಮಿತ್ ಷಾ ಮತ್ತು ಯಡಿಯೂರಪ್ಪನವರ ನಾಳಿನ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಭೇಟಿಯ ಸಂದರ್ಭದಲ್ಲಿ ಸಂಪುಟ ವಿಸ್ತರಣೆಯ ಅಗತ್ಯತೆಯನ್ನು ಬಿಎಸ್‍ವೈ, ಅಮಿತ್ ಷಾ ಅವರಿಗೆ ಮನವರಿಕೆ ಮಾಡಿಕೊಡಲಿದ್ದಾರೆ. ಉಪಚುನಾವಣೆಯಲ್ಲಿ ಗೆದ್ದ 12 ಶಾಸಕರ ಪೈಕಿ 11 ಮಂದಿಯನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಆಶ್ವಾಸನೆ ಕೊಡಲಾಗಿತ್ತು.

ಈಗ ಅವರೆಲ್ಲರೂ ಸಂಪುಟಕ್ಕೆ ತೆಗೆದುಕೊಳ್ಳುವಂತೆ ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಅವಕಾಶ ನೀಡುವಂತೆ ಯಡಿಯೂರಪ್ಪ ಷಾ ಅವರಲ್ಲಿ ಮನವರಿಕೆ ಮಾಡಲಿದ್ದಾರೆ.
ಉಳಿದಂತೆ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಸಹ ಅವರನ್ನು ಭೇಟಿಯಾಗಿ ಪಕ್ಷದ ಸಂಘಟನೆ ಕುರಿತಂತೆ ಮಾತುಕತೆ ನಡೆಸಲಿದ್ದಾರೆ.

ಈ ವೇಳೆ ಕೇಂದ್ರ ಸರ್ಕಾರದ ಉದ್ದೇಶಿತ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ಪ್ರತಿಭಟನೆ ನಡೆಸುತ್ತಿರುವವರಿಗೆ ಪರ್ಯಾಯವಾಗಿ ಪಕ್ಷ ಹಮ್ಮಿಕೊಂಡಿರುವ ಮನೆ ಮನೆ ಅಭಿಯಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಲು ಅಮಿತ್ ಷಾ ಸೂಚನೆ ಕೊಡುವರು. ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಮನೆಮನೆಗೆ ತಲುಪಿಸುವುದು ಹಾಗೂ ಸಿಎಎ ಕಾಯ್ದೆ ಕುರಿತಂತೆ ಪ್ರತಿಪಕ್ಷಗಳು ನಡೆಸುತ್ತಿರುವ ಅಪಪ್ರಚಾರಕ್ಕೆ ಪರ್ಯಾಯವಾಗಿ ಕಾಯ್ದೆಯಿಂದ ದೇಶವಾಸಿಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂಬುದನ್ನು ಮನವರಿಕೆ ಮಾಡಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆಯೂ ಸೂಚನೆ ನೀಡಲಿದ್ದಾರೆ.

ಇನ್ನು ಪಕ್ಷದ ಸಂಘಟನೆ ಬಗ್ಗೆಯೂ ನಳೀನ್‍ಕುಮಾರ್ ಕಟೀಲ್ ಅವರಿಂದ ಮಾಹಿತಿ ಪಡೆಯಲಿರುವ ಅವರು ಮುಖ್ಯವಾಗಿ ಹಳೇಮೈಸೂರು ಭಾಗದಲ್ಲಿ ಪಕ್ಷವನ್ನು ಇನ್ನಷ್ಟು ಭದ್ರಪಡಿಸಲು ಕೆಲವು ಅಗತ್ಯ ಸಲಹೆಸೂಚನೆಗಳನ್ನು ಕೊಡಲಿದ್ದಾರೆ.  ಒಟ್ಟಿನಲ್ಲಿ ಅಮಿತ್ ಷಾ ಅವರ ಎರಡು ದಿನಗಳ ರಾಜ್ಯ ಭೇಟಿ ಬಿಜೆಪಿ ವಲಯದಲ್ಲಿ ಸಾಕಷ್ಟು ಕುತೂಹಲವನ್ನುಂಟು ಮಾಡಿದೆ.

Facebook Comments