ಬೆಂಗಳೂರಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಷಾ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.18- ಇಂದು ಬೆಂಗಳೂರಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಂಪುಟ ಸಹೋದ್ಯೋಗಿಗಳು ಆತ್ಮೀಯವಾಗಿ ಬರಮಾಡಿಕೊಂಡರು.  ದೆಹಲಿಯಿಂದ ವಿಶೇಷ ವಿಮಾನದಲ್ಲಿ ಎಚ್‍ಎಎಲ್‍ಗೆ ಆಗಮಿಸಿದ ಅಮಿತ್ ಷಾ ಅವರನ್ನು ಸಿಎಂ ಯಡಿಯೂರಪ್ಪ, ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ, ಸಚಿವರಾದ ಬಸವರಾಜ್ ಬೊಮ್ಮಾಯಿ, ವಿ.ಸೋಮಣ್ಣ, ಸಿ.ಟಿ.ರವಿ, ಅರವಿಂದ ಲಿಂಬಾವಳಿ, ಸಂಸದ ತೇಜಸ್ವಿ ಸೂರ್ಯ, ಸೇರಿದಂತೆ ಮತ್ತಿತರರು ಸ್ವಾಗತಿಸಿದರು.

ಅಮಿತ್ ಷಾ ಅವರಿಗೆ ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ನಂತರ ಅವರನ್ನು ಬಿಗಿಭದ್ರತೆ ನಡುವೆ ಅರಮನೆ ಮೈದಾನಕ್ಕೆ ಕರೆತರಲಾಯಿತು.  ನಂತರ ಅರಮನೆ ಮೈದಾನದ ಕೃಷ್ಣವಿಹಾರದಲ್ಲಿ ನಡೆದ ವಿವೇಕ ದೀಪಿನಿ ಮಹಾಸಮರ್ಪಣಾ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡರು.  ಭಾರತಿ ವಿದ್ಯಾಶಂಕರ್ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎರಡು ಲಕ್ಷ ವಿದ್ಯಾರ್ಥಿಗಳು ಏಕಕಾಲದಲ್ಲಿ ಶ್ಲೋಕ ಮತ್ತು ಮಂತ್ರಗಳ ಪಠಣ ಮಾಡಿದರು.

ಅಮಿತ್ ಷಾ ಆಗಮದ ಹಿನ್ನೆಲೆಯಲ್ಲಿ ಅರಮನೆ ಸುತ್ತಮುತ್ತ ಭಾರೀ ಬಿಗಿಭದ್ರತೆಯನ್ನು ಕೈಗೊಳ್ಳಲಾಗಿತ್ತು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕೆಲವರು ಪ್ರತಿಭಟನೆ ನಡೆಸಬಹುದೆಂಬ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿತ್ತು.

ಕೇಂದ್ರ ವಿಭಾಗದ ಡಿಸಿಪಿ ಚೇತನ್‍ಸಿಂಗ್ ರಾಥೋಡ್ ನೇತೃತ್ವದಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕಾಗಿ 800 ಮಂದಿ ಸಂಚಾರಿ ಪೊಲೀಸರನ್ನು ಸಹ ನಿಯೋಜಿಸಲಾಗಿತ್ತು.

ಅರಮನೆ ಕಾರ್ಯಕ್ರಮ ಮುಗಿದ ನಂತರ ಅಮಿತ್ ಷಾ, ಜಯನಗರ ಶೈಕ್ಷಣಿಕ ಸಮಿತಿ, 11ನೇ ಮುಖ್ಯರಸ್ತೆ, 5ನೇ ಬ್ಲಾಕ್‍ನ ಶಾಲಿನಿ ಗ್ರೌಂಡ್ ಎದುರು ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಆರಂಭಿಸಿರುವ ನೂತನ ಕಚೇರಿಯನ್ನು ಸಾರ್ವಜನಿಕರ ಸೇವೆಗೆ ಸಮರ್ಪಿಸಿದರು.

Facebook Comments