ದೆಹಲಿ ಹಿರಿಯ ಅಧಿಕಾರಿಗಳೊಂದಿಗೆ ಗೃಹ ಸಚಿವ ಅಮಿತ್ ಶಾ ಮಹತ್ವದ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.15- ದೇಶಾದ್ಯಂತ ಕೊರೊನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆ ನಡೆಸುತ್ತಿದ್ದಾರೆ.

ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ಸೋಂಕಿತರ ಸಂಖ್ಯೆ ಉಲ್ಬಣಗೊಳ್ಳುತ್ತಿದ್ದು , ಮಹಾಮಾರಿಯನ್ನು ತಡೆಗಟ್ಟುವ ಕ್ರಮಗಳನ್ನು ಕುರಿತು ಶಾ ಮಾತುಕತೆ ನಡೆಸುತ್ತಿದ್ದಾರೆ.

ನಾಲ್ಕು ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಅಧಿಕಾರಿಗಳಿಂದ ಶಾ ಅವರು ಸೋಂಕು ತಡೆಗಟ್ಟುವ ಕುರಿತಂತೆ ಸಲಹೆ, ಸೂಚನೆಗಳನ್ನು ಪಡೆಯುತ್ತಿದ್ದಾರೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ. ಬಿಜೆಪಿ , ಕಾಂಗ್ರೆಸ್ , ಎಎಪಿ ಹಾಗೂ ಬಿಎಸ್ಪಿ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಮಹಾರಾಷ್ಟ್ರ ಮತ್ತು ತಮಿಳುನಾಡಿನ ನಂತರ ದೆಹಲಿಯಲ್ಲಿ 41,000 ಮಂದಿಗೆ ಕೊರೊನಾ ಸೋಂಕು ತಗುಲಿದ್ದು ಇದುವರೆಗೂ 1,300ಕ್ಕೂ ಹೆಚ್ಚು ಮಂದಿ ಸೋಂಕಿಗೆ ಬಲಿಯಾಗಿರುವ ಹಿನ್ನೆಲೆಯಲ್ಲಿ ಶಾ ಈ ಸಭೆ ನಡೆಸುತ್ತಿದ್ದಾರೆ.

ನಿನ್ನೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಲೆಫ್ಟಿನೆಂಟ್ ಗೌರ್ನರ್ ಅನಿಲ್ ಬೈಜಾಲ್, ದೆಹಲಿಯ ಮೇಯರ್ ಮತ್ತು ಕಮಿಷನರ್ ಅವರುಗಳೊಂದಿಗೆ ಶಾ ಸಭೆ ನಡೆಸಿದ್ದರು.

ಕೊರೊನಾ ರೋಗ ತಪಾಸಣೆ, ಚಿಕಿತ್ಸೆಯನ್ನು ರಾಜಧಾನಿಯಲ್ಲಿ ದ್ವಿಗುಣಗೊಳಿಸಲಾಗುವುದು. ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಯನ್ನು ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಅಮಿತ್ ಶಾ ಮಾತುಕತೆ ನಡೆಸಿ ಆಸ್ಪತ್ರೆಗಳಲ್ಲಿ ಶೇ.60ರಷ್ಟು ಹಾಸಿಗೆಗಳನ್ನು ಹೆಚ್ಚಳ ಮಾಡುವಂತೆ ಸೂಚಿಸುವುದರ ಜತೆಗೆ ಸೋಂಕು ಉಲ್ಬಣಗೊಳ್ಳದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Facebook Comments