’45 ವರ್ಷಗಳ ಹಿಂದೆ ಈ ದಿನ ದೇಶಕ್ಕೆ ಕರಾಳ ದಿನವಾಗಿತ್ತು’ : ಅಮಿತಾ ಷಾ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜೂ.25- ನಲವತ್ತೈದು ವರ್ಷಗಳ ಹಿಂದೆ ಇದೇ ದಿನ(1975 ಜೂ.25) ಒಂದು ಕುಟುಂಬದ ಅಧಿಕಾರದ ದುರಾಸೆಯಿಂದ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಭಾರತದ ಪಾಲಿಗೆ ಅದು ಕರಾಳದ ದಿನವಾಗಿತ್ತು ಎಂದು ಗೃಹ ಸಚಿವ ಅಮಿತಾ ಷಾ ಹೇಳಿದರು.

ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಿಕೆಯಾದ 45ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ್ದಾರೆ.

1975ರ ಜೂನ್ 25-26ರ ಮಧ್ಯರಾತ್ರಿಯಂದು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು. ಅಂದು ಕಾಂಗ್ರೆಸ್ ದೇಶದ ತಳಸಮುದಾಯ ಮತ್ತು ಬಡವರ ಮೂಲಭೂತ ಹಕ್ಕುಗಳನ್ನು ದಮನಗೊಳಿಸಿತ್ತು. ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿದ್ದ ಟೀಕಾಕಾರರನ್ನು ಜೈಲಿಗಟ್ಟಲಾಗಿತ್ತು.

ಇಲ್ಲಿನ ನ್ಯಾಯಾಂಗ, ಕಾರ್ಯಾಂಗ, ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಬೆಲೆಯೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಕುಟುಕಿದ್ಧಾರೆ.ದೇಶದ ಲಕ್ಷಾಂತರ ಜನರ ಹೋರಾಟದ ಫಲದಿಂದ ಈ ತುರ್ತು ಪರಿಸ್ಥಿತಿ ಕೊನೆಯಾಗಿದೆ.

ಭಾರತದಲ್ಲಿ ಪ್ರಜಾಪ್ರಭುತ್ವ ಪುನರ್‍ಸ್ಥಾಪನೆಯಾಯ್ತು. ಆದರೆ, ಕಾಂಗ್ರೆಸ್ ದರ್ಪ ಮಾತ್ರ ಕಡಿಮೆಯಾಗಲಿಲ್ಲ. ಒಂದು ಕುಟುಂಬದ ಹಿತಾಸಕ್ತಿಯೇ ರಾಷ್ಟ್ರ ಮತ್ತು ಪಕ್ಷದ ಹಿತಾಸಕ್ತಿಯಾಗಿತ್ತು. ಅಂದಿನಿಂದಲೂ ಇಂದಿನವರೆಗೂ ಕಾಂಗ್ರೆಸ್‍ನಲ್ಲಿ ಕುಟುಂಬ ರಾಜಕಾರಣ ಹಾಗೆಯೇ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

1975ರ ಜೂ.25ರಂದು ಅಂದಿನ ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದರು. ರಾತ್ರಿ ಕಳೆದು ಹಗಲಾಗುವುದರೊಳಗೆ ಇಡೀ ದೇಶದಲ್ಲಿ ಜೈಲಿನ ವಾತಾವರಣ ಕಂಡುಬಂತು. ಪತ್ರಿಕೆ, ನ್ಯಾಯಾಲಯಗಳು, ಮುಕ್ತವಾಗಿ ಮಾತನಾಡುವ, ಅಭಿಪ್ರಾಯ ಹೇಳುವ ಎಲ್ಲಾ ಸ್ವಾತಂತ್ರ್ಯಗಳನ್ನು ಹತ್ತಿಕ್ಕಲಾಯಿತು. ಸಮಾಜದ ಬಡವರು ಮತ್ತು ತುಳಿತಕ್ಕೊಳಗಾದವರ ಮೇಲೆ ದೌರ್ಜನ್ಯ ನಡೆಸಲಾಯಿತು ಎಂದು ಆರೋಪಿಸಿದ್ದಾರೆ.

ಮತ್ತೊಂದು ಟ್ವೀಟ್‍ನಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಬಗ್ಗೆ ಉಲ್ಲೇಖಿಸಿರುವ ಅಮಿತ್ ಷಾ, ಈ ಸಭೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರು ದೇಶದ ಗಂಭೀರ ಸಮಸ್ಯೆಗಳನ್ನು ಉಲ್ಲೇಖಿಸಿದ್ದರು. ಆದರೆ, ವರಿಷ್ಠರು ಮಾತ್ರ ಪಕ್ಷದ ನಾಯಕರ ವಿರುದ್ಧ ಕೂಗಾಡುತ್ತಿದ್ದರು.

ಇದರಿಂದ ಪಕ್ಷದ ಮುಖ್ಯ ವಕ್ತಾರರೊಬ್ಬರನ್ನು ಕಿತ್ತೊಗಿದಿದ್ಧಾರೆ. ಕಾಂಗ್ರೆಸ್ ಪಕ್ಷದಲ್ಲಿ ಈಗ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗಿದೆ ಎಂದು ಗಂಭೀರ ಆರೋಪ ಮಾಡಿದ್ಧಾರೆ.

ದೇಶದ ಪ್ರಮುಖ ವಿರೋಧ ಪಕ್ಷವಾಗಿ ಕಾಂಗ್ರೆಸ್ ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುವ ಸಮಯವಿದು. ಕಾಂಗ್ರೆಸ್ ವರಿಷ್ಠರಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭದಲ್ಲಿದ್ದ ಮನಸ್ಥಿತಿಯೇ ಇನ್ನೂ ಏಕೆ ಉಳಿದಿದೆ? ಗಾಂಧಿ ಕುಟುಂಬಕ್ಕೆ ಸೇರದ ಕಾಂಗ್ರೆಸ್ ನಾಯಕರು ಯಾಕೇ ಈಗಲೂ ದನಿಯೆತ್ತಲು ಹೆದರುತ್ತಾರೆ? ಕಾಂಗ್ರೆಸ್ ಯಾಕೆ ಹತಾಶೆಗೆ ಒಳಗಾಗಿದೆ? ದೇಶದ ಜನತೆಯ ಸಂಪರ್ಕದಲ್ಲಿಲ್ಲದ ಕಾಂಗ್ರೆಸ್ ರಾಜಕಾರಣ ಅಂತ್ಯವಾಯ್ತೇ? ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ ಎಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಸಲಹೆ ಮಾಡಿದ್ದಾರೆ.

Facebook Comments