ಕುಂದಾನಗರಿ ಕೇಸರಿಮಯ: ಅಮಿತ್ ಷಾ ಆಗಮನ, ಕಮಲ ನಾಯಕರ ಶಕ್ತಿ ಪ್ರದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.17- ಪಕ್ಷವನ್ನು ಮುಂದಿನ ಚುನಾವಣೆಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಇಂದು ಕುಂದಾನಗರಿ ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಜನಸೇವಕ್ ಸಮಾರೋಪ ಸಮಾರಂಭಕ್ಕೆ ಅದ್ಧೂರಿ ತೆರೆ ಬಿದಿತ್ತು.  ಬೆಳಗಾವಿಯ ಜಿಲ್ಲಾ ಕ್ರೀಡಾಂಣದಲ್ಲಿ ಹಮ್ಮಿಕೊಂಡಿದ್ದ ಜನಸೇವಕ್ ಸಮಾರೋಪ ಸಮಾರಂಭಕ್ಕೆ ಬಿಜೆಪಿಯ ಚಾಣುಕ್ಯ ಎಂದೇ ಗುರುತಿಸಿಕೊಂಡಿರುವ ಕೇಂದ್ರ ಗೃಹ ಸಚಿವರೂ ಆಗಿರುವ ಅಮಿತ್ ಷಾ, ಮುಖ್ಯಮಂತ್ರಿ ಯಡಿಯೂರಪ್ಪ, ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ್ ಸವದಿ, ಡಾ.ಅಶ್ವಥ್ ನಾರಾಯಣ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಸದಾನಂದಗೌಡ, ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಸಚಿವರಾದ ಜಗದೀಶ್ ಶೆಟ್ಟರ್, ರಮೇಶ್ ಜಾರಕಿಹೊಳಿ, ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ, ಶ್ರೀಮಂತಪಾಟೀಲ್ ಮುಂತಾದವರು ಇದ್ದರು.

ಬಿಜೆಪಿಯ ಶಕ್ತಿ ಪ್ರದರ್ಶನವೆಂದೇ ಹೇಳಲಾಗಿದ್ದ ಈ ಸಮಾರೋಪ ಸಮಾರಂಭಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಕಾರ್ಯಕರ್ತರು ಆಗಮಿಸಿದ್ದರು.  ಕೋವಿಡ್ ಹಿನ್ನೆಲೆಯಲ್ಲಿ ಮಾರ್ಗಸೂಚಿ ಪಾಲನೆ ಮಾಡಲೇಬೇಕಾಗಿದ್ದರಿಂದ ಜಿಲ್ಲಾ ಕ್ರೀಡಾಂಗಣದಲ್ಲಿ 50 ಸಾವಿರ ಹಾಸನ ವ್ಯವಸ್ಥೆಯನ್ನು ಮಾಡಲಾಗಿತ್ತು. ಪ್ರಮುಖ ವೇದಿಕೆಯಲ್ಲಿ ಕೆಲವೇ ಕೆಲವು ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

ನೆರೆದಿದ್ದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಷಾ ಅವರು ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ವಿರುದ್ಧ ಕೆಂಡ ಕಾರಿದರು.  ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನರ ವಿಶ್ವಾಸಕ್ಕೆ ಎಳ್ಳಷ್ಟು ಚ್ಯುತಿಯಾದಂತೆ ಜನಪರವಾಗಿ ಕೆಲಸ ಮಾಡುತ್ತಿದೆ. ಭ್ರಷ್ಟಾಚಾರದಿಂದಲೇ ಅಧಿಕಾರ ಕಳೆದುಕೊಂಡು ಎರಡು ಬಾರಿ ಲೋಕಸಭೆ ಚುನಾವಣೆಯಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನವೂ ಸಿಗದೆ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಜನರಲ್ಲಿ ಸುಳ್ಳುಗಳ ಸರಮಾಲೆಯನ್ನೇ ಬಿತ್ತುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಮುಂಬರುವ ದಿನದಲ್ಲಿ ಕರ್ನಾಟಕದಲ್ಲಿ ನಡೆಯಲಿರುವ ಪ್ರತಿಯೊಂದು ಚುನಾವಣೆಯೂ ಬಿಜೆಪಿಗೆ ಗೆಲುವಾಗಬೇಕು. ಉಪಚುನಾವಣೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆ ಮತ್ತು 2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲೂ ಎಲ್ಲೆಡೆ ಕೇಸರಿ ಬಾವುಟವೇ ಅಧಿಕಾರದ ಗದ್ದುಗೆ ಹಿಡಿಯಬೇಕು. ಇದಕ್ಕಾಗಿ ಕಾರ್ಯಕರ್ತರು ಇಂದಿನಿಂದಲೇ ಚುನಾವಣೆಗೆ ಸಜ್ಜಾಗಬೇಕೆಂದು ಸೂಚನೆ ಕೊಟ್ಟರು.

ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಜನಪರವಾಗಿ ಆಡಳಿತ ನೀಡುತ್ತಿದೆ. ಜನರಿಂದ ತಿರಸ್ಕøತವಾಗಿರುವ ಕಾಂಗ್ರೆಸ್ ಸುಳ್ಳು ಆರೋಪಗಳ ಮೂಲಕ ಚುನಾವಣೆ ಗೆಲ್ಲಲು ಹೊರಟಿದೆ. ಇದಕ್ಕೆ ರಾಜ್ಯದ ಜನತೆ ಕಿವಿಗೊಡಬಾರದೆಂದು ಮನವಿ ಮಾಡಿದರು. ಇದಕ್ಕೂ ಮುನ್ನ ಅಮಿತ್ ಷಾ ಮತ್ತು ಮತ್ತಿತರ ಪ್ರಮುಖರು ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲ್ಲೂಕಿನ ಯರಕಲಮಟ್ಟಿ ಗ್ರಾಮದಲ್ಲಿ ಸಚಿವ ಮುರುಗೇಶ್ ನಿರಾಣಿ ಮಾಲೀಕತ್ವದ ಎಥಿನಾಲ್ ಕಾರ್ಖಾನೆಯನ್ನು ಉದ್ಘಾಟಿಸಿ ಬೆಳಗಾವಿಗೆ ಆಗಮಿಸಿದರು.

ವಿಮಾನ ನಿಲ್ದಾಣದಿಂದ ಸರ್ಕಿಟ್‍ಹೌಸ್‍ಗೆ ಆಗಮಿಸಿ ನಂತರ ಜಿಲ್ಲಾ ಕ್ರೀಡಾಂಗಣದತ್ತ ಹೊರಟರು. ಸಮಾರೋಪ ಸಮಾರಂಭ ಆರಂಭಕ್ಕೂ ಮುನ್ನ ಪಕ್ಷದ ವತಿಯಿಂದ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಜಯಕಾರದ ಮೂಲಕ ವೇದಿಕೆಗೆ ಕರೆತರಲಾಯಿತು. ಇದಕ್ಕೂ ಮುನ್ನ ಕೇಂದ್ರ ಗೃಹ ಸಚಿವರು,ಮಧ್ಯಾಹ್ನ 1.15ಕ್ಕೆ ರಸ್ತೆ ಮಾರ್ಗವಾಗಿ ನಗರದ ಪ್ರವಾಸಿ ಮಂದಿರಕ್ಕೆ ಆಗಮಿಸಿದರು. ಅಲ್ಲಿ ಉತ್ತರ ಕರ್ನಾಟಕ ಶೈಲಿಯ ಭೋಜನ ಸವಿದರು. ಕೆಲಹೊತ್ತು ವಿಶ್ರಾಂತಿ ಪಡೆದರು.

ಬಳಿಕ ಕೇಂದ್ರ ರೈಲ್ವೆ ಸಚಿವರಾಗಿದ್ದ ದಿ. ಸುರೇಶ್? ಅಂಗಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮಧ್ಯಾಹ್ನ 3.20ಕ್ಕೆ ಪ್ರವಾಸಿ ಮಂದಿರದಿಂದ ಹೊರಟ ಅಮಿತ್ ಶಾ, ಇಲ್ಲಿನ ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆಯಲ್ಲಿರುವ ಸುರೇಶ್ ಅಂಗಡಿಯವರ ಪತ್ನಿ, ಮಕ್ಕಳು ಹಾಗೂ ಕುಟಂಬದ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
ಕಾರ್ಯಕ್ರಮದ ಮುಗಿದ ಬಳಿಕ ಅಮಿತ್ ಷಾ ಅವರು ಕೆಎಲ್‍ಇ ಸಂಸ್ಥೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನಂತರ 6.15ರಿಂದ 7.15ರವರೆಗೆ ಪಕ್ಷದ ಶಾಸಕರು, ಪದಾಧಿಕಾರಿಗಳ ಜೊತೆಗೆ ಸಭೆ ನಡೆಸುವರು.

ಸಚಿವರ ದಂಡು: ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಳಗಾವಿಗೆ ಆಗಮಿಸಿದ ಹಿನ್ನೆಲೆ, ರಾಜ್ಯ ಸಚಿವ ರ ದಂಡೇ ಬೆಳಗಾವಿಗೆ ಆಗಮಿಸಿತ್ತು. ಡಿಸಿಎಂಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಜೊತೆಗೆ ಜಿಲ್ಲೆಯ ಐವರು ಸಚಿವರು, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಕೃಷಿ ಸಚಿವ ಬಿ.ಸಿ. ಪಾಟೀಲ್ ಸೇರಿದಂತೆ 20ಕ್ಕೂ ಅಧಿಕ ಸಚಿವರು, ನೆರೆ ಜಿಲ್ಲೆಯ ಶಾಸಕರು, ಸಂಸದರು ಸಮಾವೇಶಕ್ಕೆ ಸಾಕ್ಷಿಯಾದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಾರ್ಯಕರ್ತರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಇಲ್ಲಿನ ಫಿನಿಕ್ಸ್ ಪ್ಲಬಿಕ್ ಸ್ಕೂಲ್ ಆವರಣದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಭಾರೀ ಭದ್ರತೆ:
ಕೇಂದ್ರ ಗೃಹ ಸಚಿವ ಅಮಿತ್ ಷಾ ಆಗಮಿಸಿದ ಹಿನ್ನೆಲೆಯಲ್ಲಿ ಇಂದು ಬೆಳಗಾವಿಯಾದ್ಯಂತ ಭಾರೀ ಭದ್ರತೆ ಕೈಗೊಳ್ಳಲಾಗಿತ್ತು. ಅಮಿತ್ ಷಾ, ಸಿಎಂ, ಶಾಸಕರು, ಮಂತ್ರಿಗಳು, ಸಂಸದರು ಭಾಗಿಯಾದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಸಮಾವೇಶದಲ್ಲಿ ಒಟ್ಟು 15 ಎಸ್‍ಪಿ, 53 ಡಿಎಸ್‍ಪಿ, 118 ಸಿಪಿಐ, ಪಿಐ, 235 ಪಿಎಸ್‍ಐ, 350 ಎಎಸ್‍ಐ ಹಾಗೂ 2380 ಎಚ್‍ಸಿ, ಪಿಸಿ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ವಿಶೇಷ ಘಟಕಗಳಾದ ಕೆಎಸ್‍ಆರ್‍ಪಿ, ಕೆಎಸ್‍ಐಎಸ್‍ಎಫ್ -16, ಎಎಸ್‍ಸಿ-10, ಸಿಆರ್‍ಪಿಎಫ್, ಎಫ್‍ಪಿಐ, ಸಿಐಡಿ, ರಾಜ್ಯ ಗುಪ್ತವಾರ್ತೆ, ಇಂಟರನಲ್ ಸೆಕ್ಯುರಿಟಿ ಘಟಕದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಕೇಸರಿಮಯ: ಬಿಜೆಪಿಯ ಘಟಾನುಘಟಿ ನಾಯಕರು ಬೆಳಗಾವಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಕುಂದಾನಗರಿ ಇಂದು ಸಂಪೂರ್ಣವಾಗಿ ಕೇಸರಿಮಯವಾಗಿತ್ತು. ನಗರದ ಪ್ರಮುಖ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿ ಹಾಗೂ ನಗರದ ಎಲ್ಲಾ ಭಾಗಗಳಲ್ಲೂ ಎಲ್ಲೆಲ್ಲೂ ಕೇಸರಿ ಬಾವುಟಗಳು ರಾಜಾಜಿಸುತ್ತಿದ್ದವು.ಪ್ರಧಾನಿ ನರೇಂದ್ರಮೋದಿ, ಅಮಿತ್ ಷಾ, ಜೆ.ಪಿ.ನಡ್ಡ, ಸಿಎಂ ಯಡಿಯೂರಪ್ಪ, ಸಚಿವರು ಹಾಗೂ ಪ್ರಮುಖರ ಫ್ಲೆಕ್ಸ್‍ಗಳನ್ನು ಹಾಕಲಾಗಿತ್ತು.

Facebook Comments