ಸಚಿವ ಸಂಪುಟ ವಿಸ್ತರಣೆಗೆ ಷಾ ಅನುಮತಿ!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.18- ಒಂದಿಲ್ಲೊಂದು ಕಾರಣ ಗಳಿಂದ ಹಲವು ಬಾರಿ ಮುಂದೂಡಿಕೆಯಾಗಿದ್ದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕೊನೆಗೂ ಹಸಿರು ನಿಶಾನೆ ತೋರಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನ ಅರಮನೆಮೈದಾನಕ್ಕೆ ಆಗಮಿಸಿದ್ದ ಅವರು, ವೇದಿಕೆಯಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿರುವುದು ಇದಕ್ಕೆ ಪುಷ್ಠಿ ನೀಡಿದಂತಿದೆ.

ಬಿಎಸ್‍ವೈ ಅವರೊಂದಿಗೆ ಮಂದಸ್ಮಿತರಾಗಿಯೇ ಗುಪ್ತವಾಗಿ ಮಾತನಾಡಿದ ಅಮಿತ್ ಷಾ, ಸಂಪುಟ ವಿಸ್ತರಣೆಯನ್ನು ರಾಜ್ಯ ನಾಯಕರೊಂದಿಗೆ ಚರ್ಚಿಸಿ ನೀವೇ ಸಮಯವನ್ನು ನಿಗದಿಪಡಿಸಿಕೊಳ್ಳಿ ಎಂದು ಹೇಳಿರುವುದಾಗಿ ತಿಳಿದುಬಂದಿದೆ. ಸಾಮಾನ್ಯವಾಗಿ ಅಮಿತ್ ಷಾ ಇತ್ತೀಚಿನ ದಿನಗಳಲ್ಲಿ ಯಡಿಯೂರಪ್ಪನವರೊಂದಿಗೆ ಇಷ್ಟು ಮುಕ್ತವಾಗಿ ಮಾತುಕತೆ ನಡೆಸಿರುವ ನಿದರ್ಶನಗಳಿಲ್ಲ. ಅದೃಷ್ಟವೆಂಬಂತೆ ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತಿದ್ದ ಉಭಯ ನಾಯಕರು ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತಂತೆ ಮಾತುಕತೆ ನಡೆಸಿರುವುದು ಸಂಪುಟ ವಿಸ್ತರಣೆಗೆ ಬಹುತೇಕ ಅನುಮತಿ ಸಿಕ್ಕಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ನಾಳೆ ಬಿಎಸ್‍ವೈ ಸ್ವಿಟ್ಜ್‍ಲ್ಯಾಂಡ್‍ನ ಡಾವೋಸ್‍ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದು, ಶುಕ್ರವಾರ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
ಕಡೆ ಪಕ್ಷ ಮುಂದಿನವಾರವಾದರೂ ಸಂಪುಟ ವಿಸ್ತರಣೆಗೆ ಅವಕಾಶ ನೀಡುವಂತೆ ಅಮಿತ್ ಷಾಗೆ ಬಿಎಸ್‍ವೈ ಮನವಿ ಮಾಡಿಕೊಂಡರು. ಇದಕ್ಕೆ ಅವರ ಕೂಡ ಸಮ್ಮತಿ ನೀಡಿದ್ದು, ಸರ್ಕಾರ ಮತ್ತು ಪಕ್ಷದ ನಡುವೆ ಗೊಂದಲ ಇಲ್ಲದಂತೆ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.

ಇನ್ನು ಸಂಜೆ ಹುಬ್ಬಳ್ಳಿಯ ಖಾಸಗಿ ಹೋಟೆಲ್‍ನಲ್ಲಿ ಅಮಿತ್ ಷಾ ರಾಜ್ಯ ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಸಂಪುಟ ವಿಸ್ತರಣೆ, ಪುನಾರಚನೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈ ವೇಳೆ ಎಲ್ಲರ ಅಭಿಪ್ರಾಯವನ್ನು ಪರಿಗಣಿಸಿ ಸಂಪುಟ ವಿಸ್ತರಣೆಗೆ ಅನುಮತಿ ನೀಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ.

ಸಿಎಂ ಮೇಲೆ ಒತ್ತಡ: ಉಪಚುನಾವಣೆ ನಡೆದು ಒಂದು ತಿಂಗಳು ಮುಗಿದಿರುವ ಹಿನ್ನೆಲೆಯಲ್ಲಿ ನೂತನ ಶಾಸಕರನ್ನು ಸಂಪುಟಕ್ಕೆ ತೆಗೆದುಕೊಳ್ಳುವಂತೆ ಯಡಿಯೂರಪ್ಪನವರ ಮೇಲೆ ಒತ್ತಡ ಹಾಕಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆ, ಗ್ರಹಣ, ಧರ್ನುಮಾಸ ಮುಂತಾದ ಕಾರಣಗಳಿಂದಾಗಿ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗಿದ್ದು ನೂತನ ಶಾಸಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.

15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಜಯಗಳಿಸಿತ್ತು. ಉಪಚುನಾವಣೆಯಲ್ಲಿ ಗೆದ್ದ ಶಾಸಕರು ಸಂಪುಟ ಸೇರುವುದು ಯಾವಾಗ? ಎಂಬ ಬಗ್ಗೆ ಚರ್ಚೆಗಳು ನಡೆದಿದ್ದವು. ಬಿಜೆಪಿ ಹೈಕಮಾಂಡ್ ಜನವರಿಯಲ್ಲಿ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಸುಳಿವು ಕೊಟ್ಟಿತ್ತು.

ಚುನಾವಣೆಯಲ್ಲಿ ಸೋತ ಎಚ್. ವಿಶ್ವನಾಥ್, ಎಂಟಿಬಿ ನಾಗರಾಜ್‍ಗೆ ಸಹ ಸೂಕ್ತ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆ ಇದೆ. ಸಂಪುಟ ವಿಸ್ತರಣೆ ಹೇಳಿದಷ್ಟು ಸುಲಭವಾಗಿಲ್ಲ ಎಂಬುದು ಬಿಜೆಪಿ ನಾಯಕರಿಗೂ ತಿಳಿದಿದೆ. ಉಪ ಚುನಾವಣೆಯಲ್ಲಿ ಗೆದ್ದ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡುವುದು ಒಂದು ಕಡೆ. ಬಿಜೆಪಿಯ ಮೂಲ ಶಾಸಕರು ಸಹ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಎಂ. ಪಿ. ರೇಣುಕಾಚಾರ್ಯ, ಉಮೇಶ್ ಕತ್ತಿ ಸೇರಿದಂತೆ ಹಲವು ಶಾಸಕರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

Facebook Comments