ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತೆ ಆಸ್ಪತ್ರೆಗೆ ದಾಖಲು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.18- ಕೇಂದ್ರ ಗೃಹ ಸಚಿವ ಅಮಿತ್ ಶಾ ಅನಾರೋಗ್ಯದ ಕಾರಣ ನಿನ್ನೆ ತಡ ರಾತ್ರಿ ಮತ್ತೆ ದೆಹಲಿಯ ಅಖಿಲ ಭಾರತ ವೈದ್ಯಕೀಯ (ಏಮ್ಸ್) ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದ ಅವರು, ಮೊನ್ನೆಯಷ್ಟೇ ಚೇತರಿಸಿಕೊಂಡು ಏಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.

ಕೊರೊನಾ ಚಿಕಿತ್ಸೆ ಚೇತರಿಕೆಯ ನಂತರ ಕಂಡು ಬರುವ ಕೆಲವು ಸಾಮಾನ್ಯ ಅನಾರೋಗ್ಯ (ಮೈ ಕೈ ನೋವು)ದ ಕಾರಣ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ. ಆಸ್ಪತ್ರೆಯಿಂದಲೇ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಏಮ್ಸ್ ಪ್ರಕಟಣೆ ತಿಳಿಸಿದೆ.

ನಿನ್ನೆ ರಾತ್ರಿ ಅವರ ಆರೋಗ್ಯದಲ್ಲಿ ಏರುಪೇರಾಗಿ ಮತ್ತೆ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯ ಖ್ಯಾತ ವೈದ್ಯ ಡಾ.ರಣದೀಪ್ ಗುಲೇರಿಯಾ ನೇತೃತ್ವದ ತಜ್ಞ ವೈದ್ಯರ ತಂಡ ಅಮಿತ್ ಶಾ ಅವರ ಆರೋಗ್ಯದ ಉಸ್ತುವಾರಿ ವಹಿಸಿದೆ.

ಅವರನ್ನು ವಿವಿಧ ಪರೀಕ್ಷೆಗಳಿಗೆ ಒಳಪಡಿಸಲಾಗಿದ್ದು, ಸದ್ಯಕ್ಕೆ ಆಸ್ಪತ್ರೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಅವರ ಆರೋಗ್ಯದ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.

ಕೊರೊನಾ ಸೋಂಕಿನಿಂದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅಮಿತ್ ಶಾ ಅವರಿಗೆ ಕೆಲ ದಿನಗಳ ಕಾಲ ವಿಶ್ರಾಂತಿಯಲ್ಲಿರುವಂತೆ ವೈದ್ಯರು ಸಲಹೆ ಮಾಡಿದ್ದಾರೆ. ಅವರು ತಮ್ಮ ಮನೆಯ ಆವರಣದಲ್ಲೇ 74ನೆ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ್ದರು.

Facebook Comments

Sri Raghav

Admin