ಬಾಲಿವುಡ್‍ನಲ್ಲಿ 50 ವರ್ಷ ಪೂರೈಸಿದ ಬಚ್ಚನ್‍ಗೆ ಅಭಿನಂದನೆ ಮಹಾಪೂರ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ನ.8 (ಪಿಟಿಐ)- ಬಾಲಿವುಡ್‍ಗೆ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಪ್ರವೇಶಿಸಿ 50 ವರ್ಷ ಸಂದಿರುವ ಸಂದರ್ಭದಲ್ಲಿ ಬಿಟೌನ್‍ನ ಖ್ಯಾತನಾಮರಿಂದ ಬಿಗ್‍ಬಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.  ಏಳುಬೀಳುಗಳ ನಡುವೆಯೂ ಐದು ದಶಕಗಳ ಕಾಲ ಬಾಲಿವುಡ್‍ನಲ್ಲಿ ಮಿಂಚಿದ ಅಮಿತಾಬ್ ಬಚ್ಚನ್‍ರ ಸಾಧನೆ ಮತ್ತು ಸಾಮಥ್ರ್ಯವನ್ನು ನಟ-ನಟಿಯರು, ತಂತ್ರಜ್ಞರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಶ್ಲಾಘಿಸಿದ್ದಾರೆ.

ದಷ್ಟಪುಷ್ಟ ನಟರೇ ಪ್ರಾಬಲ್ಯ ಹೊಂದಿದ ಬಾಲಿವುಡ್‍ನಲ್ಲಿ ಉದ್ದ ಶರೀರದ ಕೋಲುಮುಖದ ನಟ ಪ್ರವೇಶಿಸಿದಾಗ ಹೊಸ ನಟನನ್ನು ಸ್ವೀಕರಿಸಲು ಪ್ರೇಕ್ಷಕರು ಹಿಂದೇಟು ಹಾಕಿದ್ದರು. ಜಂಜೀರ್ ಚಿತ್ರದಲ್ಲಿ ಆ್ಯಂಗ್ರಿ ಯಂಗ್ ಮ್ಯಾನ್ ಪಾತ್ರದ ಮೂಲಕ ಹಿಂದಿ ಚಿತ್ರರಂಗದ ಹಳೇ ಸೂತ್ರವನ್ನು ಕಿತ್ತೊಗೆಯ್ಯುವಲ್ಲಿ ಬಚ್ಚನ್ ಯಶಸ್ವಿಯಾದರು. ಆ್ಯಕ್ಷನ್, ಸೆಂಟಿಮೆಂಟ್, ಕಾಮಿಡಿ ಎಲ್ಲಾ ಪ್ರಕಾರಗಳಲ್ಲಿ ಅದ್ಭುತ ಅಭಿನಯ ನೀಡಿದ ಬಚ್ಚನ್ ಖಾತೆಯಲ್ಲಿ ಅನೇಕ ಸೂಪರ್ ಹಿಟ್ ಚಿತ್ರಗಳಿವೆ. ಇಂದಿಗೂ ಅವರು ಬಿಗ್‍ಬಿ ವಯೋಮಾನಕ್ಕೆ ಅನುಗುಣವಾದ ಪಾತ್ರ ಪೋಷಣೆ ಮೂಲಕ ಬಾಲಿವುಡ್‍ನಲ್ಲಿ ಅದೇ ಛಾಪು ಉಳಿಸಿಕೊಂಡಿದ್ದಾರೆ.

ಎಬಿಸಿ ಕಂಪನಿಯ ನಷ್ಟದ ನಂತರ ಅಕ್ಷರಶಃ ದಿವಾಳಿಯಾಗಿದ್ದ ಬಚ್ಚನ್ ಇನ್ನೇನು ತೆರೆಮರೆ ಸರಿಯಲ್ಲಿದ್ದಾರೆ ಎಂಬ ಆತಂಕ ಎದುರಾಗಿದ್ದಾಗಲೇ ಬೂದಿಯಿಂದ ಮರುಹುಟ್ಟು ಪಡೆಯುವ ಅಗ್ನಿಹಂಸ(ಫಿನಿಕ್ಸ್)ದಂತೆ ಮೇಲೆದ್ದರು.

ಕೌನ್ ಬನೇಗಾ ಕೋಟ್ಯಾಧಿಪತಿ ಮೂಲಕ ಕೋಟಿಗಟ್ಟಲೆ ಹಣವನ್ನು ಸಂಪಾದಿಸಲು ಶುರು ಮಾಡಿದರು. ಮತ್ತೆ ಚಿತ್ರಗಳು ಅವರನ್ನು ಹುಡುಕಿಕೊಂಡು ಬಂದವು. ಜಾಹಿರಾತು, ಸಾಮಾಜಿಕ ಕಳಕಳಿಯ ಪ್ರಚಾರ ರಾಯಭಾರಿ, ಕ್ವಿಜ್ ಮಾಸ್ಟರ್ ಹೀಗೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ ಬಹುಮುಖ ಪ್ರತಿಭೆ ಬಚ್ಚನ್ ಚಿತ್ರರಂಗದ ಸಾಧನೆಗಾಗಿ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದಿದ್ದಾರೆ.

Facebook Comments