ಅತಂತ್ರರಾಗಿ ಆತಂಕದಲ್ಲಿರುವ ಅನರ್ಹರಿಗೆ ಅಮಿತ್ ಷಾ ಅಭಯ ಹಸ್ತ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.22- ಸಮ್ಮಿಶ್ರ ಸರ್ಕಾರದಲ್ಲಿ ಅನರ್ಹಗೊಂಡ ಶಾಸಕರಿಗೆ ಸುಪ್ರೀಂಕೋರ್ಟ್‍ನಲ್ಲಿ ಕಾನೂನು ಹೋರಾಟ ಸೇರಿದಂತೆ ಎಲ್ಲ ರೀತಿಯ ನೆರವು ನೀಡಲಾಗುವುದು. ಈ ಬಗ್ಗೆ ಯಾರಿಗೂ ಆತಂಕ ಬೇಡ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅಭಯ ನೀಡಿದ್ದಾರೆ.

ನಾಳೆ ಸುಪ್ರೀಂಕೋರ್ಟ್‍ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಅನರ್ಹರ ಪರ ಈಗಾಗಲೇ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಮುಕುಲ್ ರೊಹಟಗಿ ಸೇರಿದಂತೆ ಕಾನೂನು ಪಂಡಿತರ ನೆರವು ಪಡೆದು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಅಮಿತ್ ಷಾ ಆಶ್ವಾಸನೆ ಕೊಟ್ಟಿದ್ದಾರೆ.

ನವದೆಹಲಿಯಲ್ಲಿಂದು ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ತಮ್ಮ ನಿವಾಸದಲ್ಲಿ ಸುಮಾರು 20 ನಿಮಿಷಗಳ ಮಾತುಕತೆ ನಡೆಸಿದ ಅಮಿತ್ ಷಾ, ಅವರ ತ್ಯಾಗದಿಂದಲೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಎಂಥ ಸಂದರ್ಭದಲ್ಲೂ ಅವರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಕುಲ್ ರೊಹಟಗಿ ಸೇರಿದಂತೆ ಸುಪ್ರೀಂಕೋರ್ಟ್‍ನಲ್ಲಿ ವಾದ ಮಂಡಿಸಲು ಇನ್ನೂ ಹೆಚ್ಚಿನ ಕಾನೂನು ತಜ್ಞರ ನೆರವು ಪಡೆಯಲಾಗುವುದು. ನಾಳೆ ಮೊದಲು ಚುನಾವಣಾ ಆಯೋಗ ಘೋಷಣೆ ಮಾಡಿರುವ ದಿನಾಂಕಕ್ಕೆ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಬೇಕು.

ನಂತರ ಸ್ಪೀಕರ್ ಆದೇಶದ ವಿರುದ್ಧ ಸಲ್ಲಿಸಿರುವ ಮೇಲ್ಮನವಿಯನ್ನು ತ್ವರಿತವಾಗಿ ಇತ್ಯರ್ಥಗೊಳಿಸುವುದು ಇಲ್ಲವೆ ತಡೆಯಾಜ್ಞೆ ನೀಡಲು ನ್ಯಾಯಾಧೀಶರಿಗೆ ಮನವಿ ಮಾಡುವಂತೆ ಅಮಿತ್ ಷಾ ಯಡಿಯೂರಪ್ಪನವರಿಗೆ ಸಲಹೆ ಮಾಡಿದ್ದಾರೆ.

ಈಗಾಗಲೇ ಚುನಾವಣಾ ಆಯೋಗ ದಿನಾಂಕವನ್ನು ಪ್ರಕಟಿಸಿದೆ. ನಮಗೆ ಹೆಚ್ಚಿನ ಆಯ್ಕೆಗಳಿಲ್ಲ. ನ್ಯಾಯಾಲಯದಲ್ಲಿ ಸ್ಪೀಕರ್ ಆದೇಶಕ್ಕೆ ತಡೆಯಾಜ್ಞೆ ಕೋರುವುದು ಇಲ್ಲವೆ ಅರ್ಜಿಯನ್ನು ಎಷ್ಟು ಸಾಧ್ಯವೋ ಅಷ್ಟು ತ್ವರಿತವಾಗಿ ಇತ್ಯರ್ಥಗೊಳಿಸಬೇಕು. ಇಲ್ಲದಿದ್ದರೆ ಚುನಾವಣಾ ದಿನಾಂಕಕ್ಕೆ ತಡೆಯಾಜ್ಞೆ ತಂದು ಅನರ್ಹರನ್ನು ರಕ್ಷಣೆ ಮಾಡಬೇಕೆಂದು ಗೃಹ ಸಚಿವರೂ ಆಗಿರುವ ಅಮಿತ್ ಷಾ ಬಿಎಸ್‍ವೈಗೆ ಕಿವಿಮಾತು ಹೇಳಿದ್ದಾರೆ.

ನಾನು ಕೂಡ ರೊಹಟಗಿ ಜತೆ ಮಾತುಕತೆ ನಡೆಸುತ್ತೇನೆ. ನೀವು ಕೂಡ ಅವರನ್ನು ಭೇಟಿಯಾಗಿ ವಸ್ತುಸ್ಥಿತಿ ವಿವರಿಸಿ. ಹೇಗಿದ್ದರೂ ನಾಳೆ ಅರ್ಜಿ ವಿಚಾರಣೆ ನಡೆಯಲಿದೆ. ಒಂದು ವೇಳೆ ಸ್ಪೀಕರ್ ಆದೇಶಕ್ಕೆ ತಡೆಯಾಜ್ಞೆ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದರೆ ಎದುರಾಗಿರುವ ಸಮಸ್ಯೆಗಳು ಮಂಜಿನಂತೆ ಕರಗುತ್ತವೆ. ತಕ್ಷಣವೇ ನೀವು ರೊಹಟಗಿ ಜತೆ ಮಾತುಕತೆ ನಡೆಸಬೇಕೆಂದು ಸೂಚಿಸಿದರು.

ನ್ಯಾಯಾಲಯದಲ್ಲಿ ಅನರ್ಹರಿಗೆ ನ್ಯಾಯ ಸಿಕ್ಕೇ ಸಿಗುವ ವಿಶ್ವಾಸವಿದೆ. ಶಾಸಕರ ರಾಜೀನಾಮೆಯನ್ನು ಪರಾಮರ್ಶಿಸಲು ನ್ಯಾಯಾಲಯ ಸೂಚನೆ ಕೊಟ್ಟಿತ್ತು. ಆದರೆ, ಸ್ಪೀಕರ್ ಇದಕ್ಕೆ ವ್ಯತಿರಿಕ್ತವಾಗಿ ಅವರನ್ನು ಅನರ್ಹಗೊಳಿಸಿದ್ದಾರೆ. ಸಾಮಾಜಿಕ ನ್ಯಾಯದ ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿರುವುದರಿಂದ ಖಂಡಿತ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ಭರವಸೆ ನೀಡಿದ್ದಾರೆ.

ಅನರ್ಹಗೊಂಡ ಶಾಸಕರು ಅವರಿವರ ಮಾತಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನ್ಯಾಯಾಲಯ ಅವರ ಪರವಾಗಿ ತೀರ್ಪು ನೀಡಿದರೆ ಕೂಡಲೇ ಸಂಪುಟಕ್ಕೆ ತೆಗೆದುಕೊಳ್ಳಿ. ಉಳಿದವರಿಗೆ ನಿಗಮ-ಮಂಡಳಿಯಲ್ಲಿ ಸ್ಥಾನಮಾನ ಕಲ್ಪಿಸಿ.

15 ಕ್ಷೇತ್ರಗಳ ಪೈಕಿ ಕನಿಷ್ಠ 10 ರಿಂದ 12 ಕ್ಷೇತ್ರಗಳನ್ನಾದರೂ ಗೆಲ್ಲಬೇಕು. ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸುವಂತೆಯೂ ಷಾ ಹೇಳಿದ್ದಾರೆಂದು ತಿಳಿದುಬಂದಿದೆ. ಅಮಿತ್ ಷಾ ಅವರ ಭರವಸೆಯಿಂದ ಯಡಿಯೂರಪ್ಪ ತುಸು ನಿರಾಳರಾದಂತೆ ಕಂಡುಬಂದರು.

Facebook Comments

Sri Raghav

Admin