ಅಂಫನ್ ಆರ್ಭಟಕ್ಕೆ ಪಶ್ಚಿಮ ಬಂಗಾಳ- ಒಡಿಶಾ ಅಯೋಮಯ,ಜನರ ಬದುಕು ಬೀದಿಪಾಲು..!

ಈ ಸುದ್ದಿಯನ್ನು ಶೇರ್ ಮಾಡಿ

ಕೊಲ್ಕತ್ತಾ/ಭುವನೇಶ್ವರ, ಮೇ 23-ಬಂಗಾಳಕೊಲ್ಲಿ ಮೇಲೆ ಅಪ್ಪಳಿಸಿದ ಅಂಫನ್ ಚಂಡಮಾರುತದಿಂದ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳ ಕರಾವಳಿ ಪ್ರದೇಶಗಳು ತತ್ತರಿಸಿದ್ದು, ಬಲಿಯಾದವರ ಸಂಖ್ಯೆ 95ಕ್ಕೇರಿದೆ.

ಸೂಪರ್ ಸೈಕ್ಲೋನ್ ರೌದ್ರಾವತಾರದಿಂದ ಲಕ್ಷಾಂತರ ಜನರ ಸಂತ್ರಸ್ತರಾಗಿದ್ದು, ವ್ಯಾಪಕ ಹಾನಿ ಸಂಭವಿಸಿದೆ. ಎರಡೂ ರಾಜ್ಯಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕಿಲ್ಲರ್ ಕೊರೊನಾ ದಾಳಿಯಿಂದ ಕಂಗೆಟ್ಟಿರುವ ಎರಡೂ ರಾಜ್ಯಗಳಲ್ಲಿ ಅಂಪನ್ ಚಂಡಮಾರುತ ಆರ್ಭಟ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಈ ಮಧ್ಯೆ ಕೊಲ್ಕತ್ತಾ ಸೇರಿದಂತೆ ಹಲವೆಡೆ ವಿದ್ಯುತ್ ಮತ್ತು ನೀರು ಪೂರೈಕೆಯಲ್ಲಿ ಅಡಚಣೆಯಾಗಿದ್ದು, ಉದ್ರಿಕ್ತ ಜನರು ಸರ್ಕಾರದ ವಿರುದ್ಧ ರಸ್ತೆ ತಡೆ ಮತ್ತು ಪ್ರತಿಭಟನೆ ನಡೆಸಿದರು. ಇದರಿಂದ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

ಪ್ರಧಾನಮಂತ್ರಿ ನರೇಂದ್ರ ಮೋದಿ ನಿನ್ನೆ ಎರಡೂ ರಾಜ್ಯಗಳಲ್ಲಿ ವೈಮಾನಿಕ ಸಮೀಕ್ಷೆಗಳನ್ನು ನಡೆಸಿ ಪಕೃತಿ ವಿಕೋಪದ ವಾಸ್ತವ ಸ್ಥಿತಿಯನ್ನು ಅವಲೋಕಿಸಿದರು. ಕೇಂದ್ರ ಸರ್ಕಾರದ ವತಿಯಿಂದ ಉಭಯ ರಾಜ್ಯಗಳಿಗೆ 1,500 ಕೋಟಿ ರೂ.ಗಳ ಪರಿಹಾರ ಘೋಷಿಸಲಾಗಿದೆ.

ಬಂಗಾಳಕೊಲ್ಲಿ ತೀರ ಪ್ರದೇಶಗಳ ಮೇಲೆ ಗಂಟೆಗೆ 190 ಕಿ.ಮೀ. ವೇಗದಲ್ಲಿ ಬೀಸಿದ ಪ್ರಬಲ ಬಿರುಗಾಳಿಯ ರೌದ್ರಾವತಾರಕ್ಕೆ ಪಶ್ಚಿಮ ಬಂಗಾಳದಲ್ಲಿ 85ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಒಡಿಶಾದಲ್ಲಿ 10ಕ್ಕೂ ಅದಿಕ ಸಾವು ಸಂಭವಿಸಿದೆ.

ಎರಡೂ ರಾಜ್ಯಗಳಲ್ಲಿ ಒಂದು ಕೋಟಿಗೂ ಅಕ ಮಂದಿ ಸಂತ್ರಸ್ತರಾಗಿದ್ದಾರೆ. ಒಂದೂವರೆ ಲಕ್ಷ ಕೋಟಿ ರೂ.ಗಳಿಗೆ ಅಕ ನಷ್ಟ ಸಂಭವಿಸಿದೆ. ಸೂಪರ್‍ಸೈಕ್ಲೋ ಆರ್ಭಟಕ್ಕೆ ಸಹಸ್ರಾರು ಮನೆಗಳಿಗೆ ಹಾನಿಯಾಗಿದ್ದು, ಅನೇಕ ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.

ಎರಡೂ ರಾಜ್ಯಗಳಲ್ಲೂ 95ಕ್ಕೂ ಹೆಚ್ಚು ಮಂದಿಯನ್ನು ಅಂಫನ್ ಬಲಿ ತೆಗೆದುಕೊಂಡಿದ್ದು, ಅನೇಕರು ಗಾಯಗೊಂಡಿದ್ದಾರೆ. ಕೆಲವರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.  ಪಶ್ಚಿಮ ಬಂಗಾಳದಲ್ಲಿ ಶತಮಾನದಲ್ಲೇ ಅತ್ಯಂತ ಭೀಕರ ಚಂಡಮಾರುತ ಇದಾಗಿದೆ.

ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಕಿಲ್ಲರ್ ಕೊರೊನಾ ಅಟ್ಟಹಾಸ ಏರುಗತಿಯಲ್ಲಿ ಮುಂದುವರಿದಿರುವಾಗಲೇ ಬಂದೆರಗಿರುವ ಪ್ರಕೃತಿ ವಿಕೋಪದಿಂದ ಜನ ಮತ್ತಷ್ಟು ಕಂಗಲಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 100 ವರ್ಷಗಳಲ್ಲಿ ಕಂಡು ಕೇಳರಿಯದ ಬೀಕರ ತೂಫಾನ್ ಇದಾಗಿದೆ.

Facebook Comments

Sri Raghav

Admin