ಆಮ್ರಪಾಲಿ ಗ್ರೂಪ್ ನೋಂದಣಿ, ಗುತ್ತಿಗೆ ರದ್ದುಗೊಳಿಸಿದ ಸುಪ್ರೀಂ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.23 (ಪಿಟಿಐ)- ಸಹಸ್ರಾರು ಗ್ರಾಹಕರ ಕೋಟ್ಯಂತರ ರೂ.ಗಳ ದುರುಪಯೋಗ ಮಾಡಿಕೊಂಡ ಆಪಾದನೆಗೆ ಗುರಿಯಾಗಿರುವ ಪ್ರತಿಷ್ಠಿತ ಆಮ್ರಪಾಲಿ ಸಮೂಹ ಸಂಸ್ಥೆಗಳ ನೋಂದಣೆ ಮತ್ತು ಗುತ್ತಿಗೆಗಳನ್ನು ಸುಪ್ರೀಂಕೋರ್ಟ್ ಇಂದು ರದ್ದುಗೊಳಿಸಿದೆ.

ಅಲ್ಲದೇ ಈ ಸಂಸ್ಥೆಯ ಬಾಕಿ ಇರುವ ಎಲ್ಲ ಯೋಜನೆಗಳನ್ನು ಪೂರೈಸಲು ರಾಜ್ಯ ಸರ್ಕಾರಿ ಒಡೆತನದ ರಾಷ್ಟ್ರೀಯ ಕಟ್ಟಡಗಳ ನಿರ್ಮಾಣ ನಿಗಮ(ಎನ್‍ಬಿಸಿಸಿ)ವನ್ನು ಸರ್ವೋಚ್ಚ ನ್ಯಾಯಾಲಯ ನೇಮಕ ಮಾಡಿದೆ.

ಆಮ್ರಪಾಲಿ ಗ್ರೂಪ್‍ನಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡಿದ್ದ ಸಹಸ್ರಾರು ಗ್ರಾಹಕರು ಮತ್ತು ಗೃಹ ಖರೀದಿ ಅಪೇಕ್ಷಿತರಿಗೆ ಪರಿಹಾರ ದೊರೆತಂತಾಗಿದೆ. ಇಂದು ಪ್ರಕರಣದ ವಿಚಾರಣೆ ಮುಂದುವರಿಸಿದ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಯು.ಯು.ಲಲಿತ್ ಅವರನ್ನು ಒಳಗೊಂಡ ಪೀಠವು ನೋಯ್ದಾ ಮತ್ತು ಗ್ರೇಟರ್ ನೋಯ್ಡಾದ ಅಧಿಕಾರಿಗಳಿಂದ ಮಂಜೂರು ಮಾಡಲಾಗಿದ್ದ ಆಮ್ರಪಾಲಿ ಸ್ವತ್ತುಗಳ ಗುತ್ತಿಗೆಗಳನ್ನು ಸಹ ರದ್ದುಗೊಳಿಸಿದರು.

ಈ ಸ್ವತ್ತುಗಳ ಬಗ್ಗೆ ವ್ಯವಹರಿಸಲು ಪೀಠವು ಹಿರಿಯ ವಕೀಲ ಆರ್. ವೆಂಕಟರಮಣಿ ಅವರನ್ನು ಕೋರ್ಟ್ ರಿಸೀವರ್ ಆಗಿ ನೇಮಕ ಮಾಡಿದೆ.  ಕೋಟ್ಯಂತರ ರೂ.ಗಳ ಹಣ ದುರ್ಬಳಕೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪಗಳ ಸಂಬಂದ ಸಮೂಹ ಸಂಸ್ಥೆಗಳ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನಿಲ್ ಶರ್ಮ, ಇತರ ನಿರ್ದೇಶಕರು, ಮತ್ತು ಸಂಸ್ಥೆಗಳ ಉನ್ನತಾಧಿಕಾರಿಗಳ ವಿರುದ್ದ ತನಿಖೆ ಕೈಗೊಳ್ಳುವಂತೆ ನ್ಯಾಯಾಲಯವು ಜಾರಿ ನಿರ್ದೇಶನಾಲಯಕ್ಕೆ(ಇಡಿ) ಸೂಚಿಸಿದೆ.

ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಇಡಿ ಅಧಿಕಾರಿಗಳು ಅನಿಲ್ ಶರ್ಮ, ನಿರ್ದೇಶಕರು ಮತ್ತು ಹಿರಿಯ ಅಧಿಕಾರಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

Facebook Comments