ಅಮೃತ್ ಗೋಲ್ಡ್ ಮಳಿಗೆ ದರೋಡೆ ಪ್ರಕರಣ : ರಾಜಸ್ಥಾನದಲ್ಲಿ ಇಬ್ಬರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಆ.27- ಜ್ಯುವೆಲರಿ ಅಂಗಡಿಯಲ್ಲಿ ಗುಂಡಿನ ದಾಳಿ ನಡೆಸಿ ದರೋಡೆ ಮಾಡಿ ಪರಾರಿಯಾಗಿದ್ದ ಆರೋಪಿಗಳ ಪೈಕಿ ರಾಜಸ್ಥಾನದಲ್ಲಿ ಇಬ್ಬರನ್ನು ಬಂಧಿಸಿ ನಗರಕ್ಕೆ ಕರೆತರುತ್ತಿದ್ದಾರೆ. ವಿದ್ಯಾರಣ್ಯಪುರಂ ಠಾಣೆ ಇನ್ಸ್‍ಪೆಕ್ಟರ್ ರಾಜು ಅವರ ನೇತೃತ್ವದ ತಂಡ ಇದೀಗ ಇಬ್ಬರನ್ನು ಬಂಧಿಸಿದೆ. ರಾಜಸ್ಥಾನ ಮೂಲದ ಆರೋಪಿಗಳು ಈ ಹಿಂದೆ ಚಿನ್ನಾಭರಣ ವ್ಯಾಪಾರ ಮಾಡುತ್ತಿದ್ದರು. ವ್ಯಾಪಾರ-ವಹಿವಾಟಿನಲ್ಲಿ ಆರ್ಥಿಕವಾಗಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ದರೋಡೆ ನಡೆಸಿದ್ದಾಗಿ ಆರೋಪಿಗಳು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸೋಮವಾರ ಸಂಜೆ ವಿದ್ಯಾರಣ್ಯಪುರಂ ವ್ಯಾಪ್ತಿಯಲ್ಲಿರುವ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೆಸ್ ಒಳನುಗ್ಗಿದ ನಾಲ್ವರು ದರೋಡೆಕೋರರು ರೋಲಿಂಗ್ ಶೆಟರ್ ಮುಚ್ಚಿ ಮಾಲೀಕ ಧರ್ಮೇಂದ್ರ ಅವರಿಗೆ ಗನ್ ತೋರಿಸಿ ಬೆದರಿಸಿ ಚಿನ್ನಾಭರಣಗಳನ್ನು ದರೋಡೆ ಮಾಡಿಕೊಂಡು ಹೋಗುತ್ತಿದ್ದಾಗ ಹೊರಗಿನಿಂದ ಯಾರೋ ಅಂಗಡಿ ಶೆಟರ್ ತೆಗೆಯುತ್ತಿದ್ದುದನ್ನು ಕಂಡು ಗಾಬರಿಯಾಗಿ ಗುಂಡು ಹಾರಿಸಿದಾಗ ಹೊರಗೆ ನಿಂತಿದ್ದ ಚಂದ್ರು ಎಂಬುವವರಿಗೆ ತಗುಲಿ ಸಾವನ್ನಪ್ಪಿದ್ದರು.

ಈ ಪ್ರಕರಣದ ತನಿಖೆ ಕೈಗೊಂಡಿರುವ ಇನ್‍ಸ್ಪೆಕ್ಟರ್ ರಾಜು ಅವರು ಅಂದಿನಿಂದ ಆರೋಪಿಗಳ ಬಂದನಕ್ಕೆ ಕಾರ್ಯಾಚರಣೆ ಕೈಗೊಂಡಿದ್ದು, ಇದೀಗ ರಾಜಸ್ಥಾನ ಮೂಲದ ಇಬ್ಬರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇನ್ನೂ ಇಬ್ಬರ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

Facebook Comments