ಎಎನ್-32 ವಿಮಾನ ದುರಂತದಲ್ಲಿ ಎಲ್ಲಾ 13 ಮಂದಿ ದುರ್ಮರಣ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜೂ.13- ನಾಪತ್ತೆಯಾಗಿದ್ದ ಭಾರತೀಯ ವಾಯುಪಡೆಯ( ಐಎಎಫ್) ಆಂಟೋನಿಯೋ ಎಎನ್-32 ವಿಮಾನದ ಅವಶೇಷಗಳು ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದ ಪ್ರಪಾತದಲ್ಲಿ ಪತ್ತೆಯಾದ ನಂತರ ದುರಂತ ಸುದ್ದಿಯೊಂದು ದೃಢಪಟ್ಟಿದೆ.

ಈ ನತದೃಷ್ಟ ವಿಮಾನದಲ್ಲಿದ್ದ ಎಲ್ಲಾ 13 ಮಂದಿ ದುರಂತ ಸಾವಿಗೀಡಾಗಿದ್ದಾರೆ ಎಂದು ಐಎಎಫ್ ಇಂದು ಅಧಿಕೃತ ಘೋಷಿಸಿದೆ. ಜೂ.11ರಂದು ಅರುಣಾಚಲಪ್ರದೇಶದ ನಿರ್ಜನ ಕಣಿವೆಯಲ್ಲಿ ವಿಮಾನದ ಅವಶೇಷಗಳು ಪತ್ತೆಯಾದ ನಂತರ 20 ಸಾವಿರ ಅಡಿಗಳಷ್ಟು ಆಳದ ದುರ್ಗಮ ಪ್ರಪಾತಕ್ಕೆ ಇಳಿದಿದ್ದ ರಕ್ಷಣಾ ಕಾರ್ಯಕರ್ತರಿಗೆ ಆಘಾತಕಾರಿ ಸಂಗತಿಯೊಂದು ಬಯಲಾಯಿತು.

ಈ ವಿಮಾನದಲ್ಲಿದ್ದ ಎಂಟು ಮಂದಿ ಐಎಎಫ್ ಅಧಿಕಾರಿಗಳು ಮತ್ತು ಐವರು ಯೋಧರು ಮೃತಪಟ್ಟಿರುವುದು ರಕ್ಷಣಾ ಮತ್ತು ಶೋಧ ತಂಡಕ್ಕೆ ಖಚಿತಪಟ್ಟಿದೆ. ಈ ಮಾಹಿತಿಯನ್ನು ಆಧರಿಸಿ ಐಎಎಫ್ ಇಂದು 13 ಮಂದಿ ಮೃತಪಟ್ಟಿರುವುದನ್ನು ದೃಢಪಡಿಸಿದೆ.

ಜೂ.3ರಂದು ಅರುಣಾಚಲಪ್ರದೇಶ ವಾಯುನೆಲೆಯಿಂದ ಈ 13 ಮಂದಿಯನ್ನು ಹೊತ್ತು ಮೇಲೇರಿದ ವಿಮಾನ ಸ್ವಲ್ಪ ಹೊತ್ತಿನಲ್ಲೇ ರಾಡಾರ್‍ನಿಂದ ಕಣ್ಮರೆಯಾಗಿತ್ತು. ಸತತ 9 ದಿನಗಳ ಕಾಲ ತೀವ್ರ ಶೋಧ ನಡೆಸಿದ ನಂತರ ಜೂ.11ರಂದು ಈಶಾನ್ಯರಾಜ್ಯದ ಆಳ ಕಣಿವೆಯಲ್ಲಿ ಎಎನ್-32 ವಿಮಾನದ ಭಗ್ನಾವಶೇಷಗಳು ಪತ್ತೆಯಾಗಿತ್ತು.

ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದ ವಿಮಾನವನ್ನು ಪತ್ತೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ, ಐಎಎಫ್, ನೌಕಾದಳದ ವಿಶೇಷ ವಿಮಾನಗಳು ಮತ್ತು ಹೆಲಿಕಾಪ್ಟರ್‍ಗಳು ನಿರಂತರ ಶೋಧ ನಡೆಸಿದವು.  ವಿಮಾನ ಅವಶೇಷ ಪತ್ತೆಯಾಗಿದ್ದು, ಎಎನ್-32ನಲ್ಲಿದ್ದ ಬ್ಲಾಕ್‍ಬಾಕ್ಸ್ ಪರಿಶೀಲನೆ ನಂತರವೇ ಇದರ ದುರಂತಕ್ಕೆ ಕಾರಣ ಏನೆಂಬುದು ಪತ್ತೆಯಾಗಲಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin