ಸಚಿವ ಆನಂದ್‍ ಸಿಂಗ್‌ಗೆ ನೀಡಿರುವ ಅರಣ್ಯ ಖಾತೆ ಬದಲಾವಣೆಗೆ ಕಾಂಗ್ರೆಸ್ ಪಟ್ಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.14- ಅರಣ್ಯ ಭೂಮಿಯನ್ನು ಕಬಳಿಸಿ ಗಣಿಗಾರಿಕೆ ನಡೆಸಿ ಜೈಲಿಗೆ ಹೋಗಿ ಬಂದಿರುವ ಹೊಸಪೇಟೆ ಶಾಸಕ ಆನಂದ್‍ಸಿಂಗ್ ಅವರಿಗೆ ಅರಣ್ಯ ಇಲಾಖೆ ಖಾತೆ ನೀಡಿರುವ ಉದ್ದೇಶವಾದರೂ ಏನು ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಆನಂದ್‍ಸಿಂಗ್ ಅವರಿಗೆ ಅರಣ್ಯ ಖಾತೆ ಕೊಟ್ಟಿರುವುದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಮಾಧ್ಯಮ ಘಟಕದ ಅಧ್ಯಕ್ಷ ವಿ.ಎಸ್.ಉಗ್ರಪ್ಪ ವಿರೋಧಿಸಿದ್ದಾರೆ.

ಬೀದರ್‍ನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಆನಂದ್‍ಸಿಂಗ್‍ಅಕ್ರಮ ಗಣಿಗಾರಿಕೆಯಲ್ಲಿ ಆರೋಪಿಯಾಗಿದ್ದಾರೆ. ಅರಣ್ಯ ಕಾಯ್ದೆಯಡಿ ಕೇಸು ದಾಖಲಾಗಿದೆ. ಅಂತಹವರಿಗೆ ಅರಣ್ಯ ಖಾತೆ ಕೊಟ್ಟರೆ ಕುರಿಕಾಯೋ ತೋಳ ಅಂದರೆ ಸಂಬಳ ಬೇಡ ಅಂಥಂತೆ ಎಂಬಂತಾಗುತ್ತದೆ.

ಅರಣ್ಯ ಕಾಯ್ದೆ ಉಲ್ಲಂಘಿಸಿ ಕೇಸು ಎದುರಿಸುತ್ತಿರುವವರಿಗೆ ಅರಣ್ಯ ಖಾತೆ ಕೊಡುತ್ತಾರೆ ಎಂದರೆ ಸರ್ಕಾರ ಭ್ರಷ್ಟಾಚಾರದ ಪೋಷಕ ಎಂಬಂತಾಗುತ್ತದೆ. ಕೂಡಲೇ ಆನಂದ್‍ಸಿಂಗ್ ತಾವೇ ನೈತಿಕ ಹೊಣೆ ಹೊತ್ತು ಇಲಾಖೆಗೆ ರಾಜೀನಾಮೆ ಕೊಡಬೇಕು.

ಇಲ್ಲವಾದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡಲೇ ಅವರನ್ನು ಪದಚ್ಯುತಿಗೊಳಿಸಬೇಕು, ಇಲ್ಲ ಖಾತೆ ಬದಲಾವಣೆ ಮಾಡಬೇಕೆಂದು ಒತ್ತಾಯಿಸಿದರು.
ಸಾರ್ವಜನಿಕ ವಲಯದಿಂದ ಈಗಾಗಲೇ ಸಾಕಷ್ಟು ವಿರೋಧಗಳು ಕೇಳಿ ಬರುತ್ತಿವೆ ಎಂದು ಸಿದ್ದರಾಮಯ್ಯ ಹೇಳಿದರು. ಬೆಂಗಳೂರಿನಲ್ಲಿಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ವಿ.ಎಸ್.ವಿಗ್ರಪ್ಪ, ಆನಂದ್‍ಸಿಂಗ್ ವಿರುದ್ಧ 15 ಪ್ರಕರಣಗಳು ದಾಖಲಾಗಿವೆ. ಎಲ್ಲವೂ ವಿಚಾರಣೆ ಹಂತದಲ್ಲಿವೆ.

ಅಂತಹವರಿಗೆ ಅರಣ್ಯ ಖಾತೆ ಕೊಡುತ್ತೀರಾ ಎಂದರೆ ನಿಮ್ಮ ಉದ್ದೇಶವೇನು ? ಕೂಡಲೇ ಅರಣ್ಯ ಖಾತೆಯನ್ನು ಹಿಂಪಡೆಯಬೇಕು. ಇಲ್ಲವಾದರೆ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.

Facebook Comments