ಆನೆ ದಾಳಿಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಏಳೂವರೆ ಲಕ್ಷ ರೂ. ಪರಿಹಾರ

ಈ ಸುದ್ದಿಯನ್ನು ಶೇರ್ ಮಾಡಿ

ಕೋಲಾರ, ಮಾ.3- ಜಿಲ್ಲೆಯ ಮಾಲೂರು ತಾಲ್ಲೂಕಿನ ನೋಟ್‍ವೇ ಗ್ರಾಮದ ಹೊರ ವಲಯದಲ್ಲಿ ಆನೆ ದಾಳಿಯಲ್ಲಿ ಮೃತಪಟ್ಟ ಅರಣ್ಯ ಇಲಾಖೆಯ ವಾಚರ್ ಹಾಗೂ ಸಾರ್ವಜನಿಕರೊಬ್ಬರು ಮೃತಪಟ್ಟಿದ್ದು, ಇವರ ಕುಟುಂಬಕ್ಕೆ ಏಳೂವರೆ ಲಕ್ಷ ರೂ. ಪರಿಹಾರ ಹಾಗೂ ವಾಚರ್ ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ನೀಡಲು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಆನಂದಸಿಂಗ್ ತಿಳಿಸಿದ್ದಾರೆ.

ನಗರದ ಎಸ್.ಎನ್.ಆರ್. ಆಸ್ಪತ್ರೆಗೆ ಭೇಟಿ ನೀಡಿ ಮೃತ ವಾಚರ್ ಮುನಿಯಪ್ಪ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಮಾತನಾಡಿದ ಅವರು, ಮುನಿಯಪ್ಪ 15 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ನಿನ್ನೆ ಆನೆಗಳನ್ನು ಓಡಿಸುವ ಕಾರ್ಯಾಚರಣೆಯಲ್ಲಿ ಮುನಿಯಪ್ಪ ಮೃತಪಟ್ಟಿದ್ದಾರೆ.

ಅಲ್ಲದೆ ಸಾರ್ವಜನಿಕ ಆನಂದಯ್ಯ ಎಂಬುವರು ಸಹ ಆನೆ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಆನೆಗಳ ದಾಳಿಯನ್ನು ಶಾಶ್ವತವಾಗಿ ತಡೆಗಟ್ಟಲು ರೈಲ್ವೆ ಹಳಿಗಳಿಂದ ಬ್ಯಾರಿಕೇಡ್‍ಗಳನ್ನು ನಿರ್ಮಿಸಲು ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ. ಅರಣ್ಯ ನಾಶದಿಂದ ಆಹಾರ ಸಿಗದೆ ಕಾಡು ಪ್ರಾಣಿಗಳು ನಾಡಿನತ್ತ ಬರುತ್ತಿವೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅಬಕಾರಿ ಸಚಿವ ಎಚ್.ನಾಗೇಶ್, ಶಾಸಕ ಕೆ.ವೈ.ನಂಜೇಗೌಡ, ಜಿಪಂ ಅಧ್ಯಕ್ಷ ವೆಂಕಟೇಶ್, ಎಚ್.ವಿ.ದರ್ಶನ್, ಉಪ ವಿಭಾಗಾಧಿಕಾರಿ ಸೋಮಶೇಖರ್, ಅರಣ್ಯ ಅಧಿಕಾರಿ ಚಕ್ರಪಾಣಿ, ತಹಸೀಲ್ದಾರ್ ಶೋಭಿತಾ ಇದ್ದರು.

Facebook Comments