ಜಿಂದಾಲ್‌ಗೆ‌ ಭೂಮಿ ನೀಡುವ ಕುರಿತು ಆನಂದ್ ಸಿಂಗ್, ಅನಿಲ್ ಲಾಡ್ ಆಕ್ಷೇಪ

ಈ ಸುದ್ದಿಯನ್ನು ಶೇರ್ ಮಾಡಿ

ಬಳ್ಳಾರಿ,ಜೂ.17- ಜಿಂದಾಲ್ ಕಂಪನಿಗೆ ಸರ್ಕಾರ ಭೂಮಿ ಪರಭಾರೆ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್, ಅನಿಲ್ ಲಾಡ್ ಕೂಡ ಭೂಮಿ ಪರಭಾರೆ ವಿಷಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿಯನ್ನು ರಿಪಬ್ಲಿಕ್ ಆಫ್ ಜಿಂದಾಲ್ ಆಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಇದಕ್ಕಾಗಿ ನಾವು ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಇಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

3686 ಎಕರೆಯಷ್ಟು ದೊಡ್ಡ ಪ್ರಮಾಣದ ಭೂಮಿಯನ್ನು ಜಿಂದಾಲ್ ಸಂಸ್ಥೆಗೆ ಏಕೆ ಕೊಡಬೇಕು. ಜಿಂದಾಲ್ ಸಂಸ್ಥೆ ಎಷ್ಟು ಉದ್ಯೋಗಗಳನ್ನು ನೀಡಿದೆ. ಎಷ್ಟು ಪ್ರಮಾಣದ ಗ್ರಾಮಗಳನ್ನು ಅಭಿವೃದ್ಧಿ ಮಾಡಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಅವರು ಹೇಳಿದರು.

ನಾವು ಬಳ್ಳಾರಿ ಸ್ಥಳೀಯ ಶಾಸಕರಾಗಿದ್ದು, ಇಲ್ಲಿನ ಜನರ ಒತ್ತಾಸೆಯ ಮೇರೆಗೆ ವಿರೋಧ ವ್ಯಕ್ತಪಡಿಸುತ್ತಿದ್ದೇವೆ. ಸರ್ಕಾರದ ನಿರ್ಧಾರಕ್ಕಾಗಲಿ, ಸಂಸ್ಥೆಯ ವಿರುದ್ಧವಾಗಲಿ ನಾವಿಲ್ಲ. ಜನರ ಪರವಾಗಿ ನಾವಿದ್ದೇವೆ. ಸರ್ಕಾರ ಜನರ ಆಶಯದಂತೆ ನಡೆದುಕೊಳ್ಳಬೇಕು. ಪೊಲೀಸರು, ಅಧಿಕಾರಿಗಳು ಜಿಂದಾಲ್ ರಕ್ಷಣೆಗೆ ನಿಂತಿದ್ದಾರೆ ಎಂದು ಆರೋಪಿಸಿದರು.

ಈ ಬಗ್ಗೆ ಸಚಿವರು ಮತ್ತು ಸಂಡೂರು ಶಾಸಕರಾದ ತುಕಾರಾಂ ಅವರು ದನಿಯೆತ್ತುತ್ತಿಲ್ಲ. ಅವರು ಏಕೆ ಮೌನವಾಗಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಹೇಳಿದರು. ಸರ್ಕಾರ ಭೂಮಿಯನ್ನು ಕಂಪನಿಗೆ ಗುತ್ತಿಗೆ ಆಧಾರದಲ್ಲಿ ನೀಡಿದರೆ ನಮ್ಮದೇನು ಅಭ್ಯಂತರವಿಲ್ಲ.

ಕ್ರಯಕ್ಕೆ ನೀಡುವುದಕ್ಕೆ ನಾವು ವಿರೋಧ ವ್ಯಕ್ತಪಡಿಸುತ್ತೇವೆ. ಇದಕ್ಕಾಗಿ ನಾವು ಯಾವ ತ್ಯಾಗಕ್ಕಾದರೂ ಸಿದ್ದರಿದ್ದೇವೆ ಎಂದು ಹೇಳಿದರು. ನಾವು ಹೋರಾಟ ಮಾಡಲು ಸಿದ್ದರಿದ್ದೇವೆ ಎಂದು ಆನಂದ್ ಸಿಂಗ್ ತಿಳಿಸಿದರು.

ಮಾಜಿ ಶಾಸಕ ಅನಿಲ್ ಲಾಡ್ ಮಾತನಾಡಿ, ಜಿಂದಾಲ್ ಕಂಪನಿಗೆ ನೀಡಿದ ಭೂಮಿಯನ್ನು ಇಂಡಸ್ಟ್ರಿಯಲ್‍ಗೆ ಕನ್‍ವರ್ಷನ್ ಲ್ಯಾಂಡಾಗಿ ಪರಿವರ್ತಿಸುತ್ತಾರೆ. ಆಗ ಎಕರೆಗೆ ಒಂದು ಕೋಟಿಯಷ್ಟು ಬೆಲೆ ಬರುತ್ತದೆ. ಇದನ್ನು ಬ್ಯಾಂಕ್‍ನಲ್ಲಿ ಇಡದಂತೆ ಷರತ್ತು ವಿಧಿಸಬೇಕು.

ಜಿಂದಾಲ್‍ಗೆ ಇದುವರೆಗೆ ನೀಡಿದ 11 ಸಾವಿರ ಎಕರೆಯಲ್ಲಿ ಕಂಪನಿ ಏನು ಮಾಡಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಬೇಕು. ಈ ಕಂಪನಿಯಲ್ಲಿ ಕೆಲಸ ಮಾಡುವ ಸ್ಥಳೀಯರು, ಹೊರ ರಾಜ್ಯದವರು ಎಷ್ಟು ಎಂಬುದರ ಬಗ್ಗೆ ಮಾಹಿತಿ ನೀಡಬೇಕೆಂದು ಆಗ್ರಹಿಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin