ದಿಢೀರನೇ ದೆಹಲಿಗೆ ಹಾರಿದ ಸಚಿವ ಆನಂದ್ ಸಿಂಗ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಆ.18- ಖಾತೆ ಕ್ಯಾತೆ ತೆಗೆದು ಮುನಿಸಿಕೊಂಡಿರುವ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಕಳೆದ ರಾತ್ರಿ ದಿಢೀರನೇ ದೆಹಲಿಗೆ ತೆರಳಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.  ಯಲ್ಲಾಪುರ ಪ್ರವಾಸದಲ್ಲಿದ್ದ ಆನಂದ್ ಸಿಂಗ್ ದಿಢೀರನೇ ಗೋವಾ ಮೂಲಕ ಕಳೆದ ರಾತ್ರಿ ದೆಹಲಿಗೆ ತೆರಳಿದ್ದಾರೆ. ಮೂಲಗಳ ಪ್ರಕಾರ ಅವರು ಇಂದು ದೆಹಲಿಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ನಿನ್ನೆ ವೈಯಕ್ತಿಕ ಕೆಲಸದ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರಕ್ಕೆ ಬಂದಿದ್ದ ಆನಂದ್ ಸಿಂಗ್ ಅವರಿಗೆ ನವದೆಹಲಿಗೆ ಬರುವಂತೆ ಅರುಣ್ ಸಿಂಗ್ ಅವರೇ ರಾಜ್ಯ ನಾಯಕರ ಮೂಲಕ ಸೂಚನೆ ಕೊಟ್ಟಿದ್ದರು ಎನ್ನಲಾಗಿದೆ. ಹೀಗಾಗಿ ತಕ್ಷಣವೇ ಅವರು ವರಿಷ್ಠರನ್ನು ಭೇಟಿಯಾಗಲು ದೆಹಲಿಗೆ ತೆರಳಿದ್ದು, ಇಂದು ಯಾವುದೇ ಕ್ಷಣದಲ್ಲೂ ಮಾತುಕತೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಆ.4ರಂದು ಸಂಪುಟ ರಚನೆ ಮಾಡಿದ್ದರು. ಆನಂದ್ ಸಿಂಗ್ ಅವರಿಗೆ ಪ್ರವಾಸೋದ್ಯಮ ಮತ್ತು ಪರಿಸರ ಖಾತೆಯನ್ನು ಹಂಚಿಕೆ ಮಾಡಲಾಗಿತ್ತು. ಇದರಿಂದ ಅವರು ಮುನಿಸಿಕೊಂಡು ತಮ್ಮ ಖಾತೆಯನ್ನು ಬದಲಾವಣೆ ಮಾಡಬೇಕೆಂದು ಪಟ್ಟು ಹಿಡಿದಿದ್ದರು. ಒಂದು ಹಂತದಲ್ಲಿ ಸಚಿವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನೂ ಸಹ ನೀಡಲು ಮುಂದಾಗಿದ್ದರು.

ಕೊನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಆರ್.ಅಶೋಕ್, ಶಾಸಕ ರಾಜುಗೌಡ ನಾಯಕ್ ಸೇರಿದಂತೆ ಮತ್ತಿತರರು ಮನವೊಲಿಸಿದ್ದರು. ಆದರೆ ಆನಂದ್‍ಸಿಂಗ್ ಅಧಿಕಾರ ಸ್ವೀಕರಿಸದೆ ತಮ್ಮ ರಾಜಕೀಯ ನಡೆ ಏನೆಂಬುದನ್ನು ನಿಗೂಢವಾಗಿಯೇ ಇಟ್ಟಿದ್ದರು.

ಇದೀಗ ಏಕಾಏಕಿ ದೆಹಲಿಗೆ ತೆರಳಿರುವುದು ಬಿಜೆಪಿ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಇಂದು ದೆಹಲಿ ನಾಯಕರನ್ನು ಭೇಟಿಯಾದ ಬಳಿಕ ಆನಂದ್ ಸಿಂಗ್ ಖಾತೆ ಬದಲಾವಣೆಯಾಗಲಿದೆಯೇ ಎಂಬ ಪ್ರಶ್ನೆ ಉದ್ಬವಿಸಿದೆ. ಹಾಗೊಂದು ವೇಳೆ ಆನಂದ್ ಸಿಂಗ್ ಅವರ ಒತ್ತಡಕ್ಕೆ ಮಣಿದು ಖಾತೆ ಬದಲಾವಣೆಯಾದರೆ ಇದೇ ಹಾದಿಯನ್ನು ಅನೇಕ ಸಚಿವರು ತುಳಿಯುವ ಸಾದ್ಯತೆಯೂ ಇದೆ.

Facebook Comments