ಬಿಎಸ್ವೈ ಇರದಿದ್ರೆ ನಾನು ರಾಜಕೀಯ ನಿವೃತ್ತಿ ಆಗ್ಬೇಕಿತ್ತು : ಆನಂದ್ ಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಕೂಡ್ಲಿಗಿ ನ.28: ಇಲ್ಲಿನ ಜನತೆಯ ಬೇಡಿಕೆಯಂತೆ ಬಳ್ಳಾರಿಯನ್ನು ವಿಭಜಿಸಿ ನೂತನ ವಿಜಯನಗರ ಜಿಲ್ಲೆ ರಚನೆ ಆಗದಿದ್ದರೆ ರಾಜಕೀಯ ನಿವೃತ್ತಿ ಪಡೆಯುವ ತೀರ್ಮಾನ ಮಾಡಿದ್ದೆ ಎಂದು ಪ್ರವಾಸೋದ್ಯಮ ಸಚಿವರೂ ಆದ ಪರಿಸರ ಖಾತೆ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಜಿಲ್ಲೆ ರಚನೆ ಮಾಡುವುದು ಸುಲಭದ ಕೆಲಸವಲ್ಲ. ಆದರೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನಸ್ಸು ಮಾಡಿದ ಪರಿಣಾಮ‌ ನೂತನ ಜಿಲ್ಲೆ ರಚನೆ ಆಯಿತು ಎಂದು ತಿಳಿಸಿದರು.

ಯಡಿಯೂರಪ್ಪ ಅವರಲ್ಲಿ ಒಂದು ಗಟ್ಟಿತನವಿದೆ. ಸಚಿವ ಸಂಪುಟ ಸಭೆಯಲ್ಲೂ ಯಾವುದೇ ಆಕ್ಷೇಪ‌‌ ವ್ಯಕ್ತವಾಗದಂತೆ ನೋಡಿಕೊಂಡರು. ಯಡಿಯೂರಪ್ಪ ಅವರ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ಜಿಲ್ಲೆ ನಿರ್ಮಾಣವಾಗದಿದ್ದರೆ ನನ್ನ ರಾಜಕೀಯ ಜೀವನ ಅಲ್ಲಿಗೆ ನಿಂತು ಹೋಗುತ್ತಿತ್ತು.

ಜನತೆ ಮತ ನೀಡುವಾಗ ಕೊಟ್ಟ ಭರವಸೆಯನ್ನು ನಾನು ಈಡೇರಿಸದಿದ್ದರೆ ಹೇಗೆ ಎಂಬುದು ನನ್ನನ್ನು ಕಾಡುತ್ತಿತ್ತು. ಇದಕ್ಕೆ ಯಡಿಯೂರಪ್ಪ ಅವರು ಅವಕಾಶ ನೀಡಲಿಲ್ಲ ಎಂದರು.ನಾನು ಹೊಸದಾಗಿ ರಾಜಕೀಯ ಪ್ರವೇಶ ಮಾಡಿದಾಗ ಹಿರಿಯ ನಾಯಕರೊಬ್ಬರು ನನ್ನನ್ನು ಮಂತ್ರಿ ಮಾಡುತ್ತೇನೆ‌ ಎಂದು ಭರವಸೆ ನೀಡಿದ್ದರು. ಚುನಾವಣೆ ಎಲ್ಲ ಮುಗಿದ ಬಳಿಕ ಆ ಹಿರಿಯ ನಾಯಕನನ್ನು ಭೇಟಿಯಾಗಿ ಮಂತ್ರಿ ಪದವಿ ಕೇಳಿದ್ದೆ.

ರಾಜಕೀಯದಲ್ಲಿ ನೋಡೋಣ, ಮಾಡೋಣ ಎಂದೇ‌ ಹೇಳುವುದು. ಹೇಳಿದ್ದನ್ನೆಲ್ಲಾ ಕಾರ್ಯ ರೂಪಕ್ಕೆ ತರಲು ಸಾಧ್ಯವಿಲ್ಲ ಎನ್ನುವ ಮೂಲಕ ನಿನ್ನನ್ನು ಮಂತ್ರಿ ಮಾಡಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಹೇಳಿ‌ ಕಳುಹಿಸಿದ್ದರು. ಆದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ್ಲರಿಗಿಂತ ಭಿನ್ನ. ಕೊಟ್ಟ ಮಾತನ್ನು ಉಳಿಸಿಕೊಳ್ಳದೇ ಬಿಡುವುದಿಲ್ಲ. ಅವರಂತಹ ನಾಯಕನನ್ನು ನೋಡಲು ಸಾಧ್ಯವಿಲ್ಲ ಎಂದು ಕೊಂಡಾಡಿದರು.

# ಸದೃಢ ರಾಷ್ಟ್ರ ನಿರ್ಮಾಣ ಬಿಜೆಪಿ ಗುರಿ:
ಹಳ್ಳಿಯಲ್ಲೂ ಬಿಜೆಪಿ ಬಾವುಟ ಹಾರಿಸಬೇಕು ಎಂಬುದು ರಾಷ್ಟ್ರೀಯ ನಾಯಕರ ಕನಸು. ಕೇವಲ ಅಧಿಕಾರಕ್ಕೆ ಬರಬೇಕು ಎಂಬುದು ಬಿಜೆಪಿಯ ಉದ್ದೇಶವಲ್ಲ. ರಕ್ಷಣೆ, ಆರ್ಥಿಕ, ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದುವ ಮೂಲಕ‌ ಸದೃಢ ರಾಷ್ಟ್ರ ನಿರ್ಮಾಣ ಮಾಡಬೇಕು ಎಂಬುದು ಬಿಜೆಪಿ ಗುರಿ.

ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ಬಳಿಕ‌ ಇಡೀ ವಿಶ್ವವೇ ಭಾರತವನ್ನು ತಿರುಗಿ ನೋಡುವಂತೆ ಮಾಡಿದ್ದಾರೆ. ಆ ನಿಟ್ಟಿನಲ್ಲಿ ದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಕಾಂಗ್ರೆಸ್ ಗೆ ದೇಶದಲ್ಲಿ ಭವಿಷ್ಯ ಇಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ದೇಶವನ್ನು ಆಳ್ವಿಕೆ ಮಾಡಿದ ಕಾಂಗ್ರೆಸ್ ನಾಯಕರು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. 70 ವರ್ಷ ಕಾಂಗ್ರೆಸ್ ಮಾಡದ ಅಭಿವೃದ್ಧಿ ಕಾರ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಏಳು ವರ್ಷದಲ್ಲಿ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Facebook Comments

Sri Raghav

Admin