BIG NEWS : ಸಕ್ರಿಯ ರಾಜಕಾರಣಕ್ಕೆ ಆನಂದ್ ಸಿಂಗ್ ಗುಡ್‍ಬೈ, ನಾಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.11- ತಮ್ಮ ನಿರೀಕ್ಷೆಯಂತೆ ಖಾತೆ ನೀಡದಿರುವುದಕ್ಕೆ ಅಸಮಾಧಾನಗೊಂಡಿರುವ ಸಚಿವ ಆನಂದ್ ಸಿಂಗ್ ನಾಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂಭವವಿದ್ದು, ಸಕ್ರಿಯ ರಾಜಕಾರಣಕ್ಕೆ ಗುಡ್‍ಬೈ ಹೇಳಲಿದ್ದಾರೆ. ಈಗಾಗಲೇ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸಮಯ ಅವಕಾಶವನ್ನು ಕೇಳಿರುವ ಆನಂದ್ ಸಿಂಗ್ ನಾಳೆ ಬೆಳಗ್ಗೆ ಭೇಟಿಯಾಗಿ ಶಾಸಕ ಸ್ಥಾನಕ್ಕೆ ತಮ್ಮ ರಾಜೀನಾಮೆ ಕೊಟ್ಟು ರಾಜಕಾರಣಕ್ಕೆ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

ಒಂದು ಕಡೆ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಶಾಸಕರು ದೆಹಲಿಯಲ್ಲಿ ಲಾಬಿ ನಡೆಸಿದ್ದರೆ ಮತ್ತೊಂದು ಕಡೆ ನಿರೀಕ್ಷಿತ ಖಾತೆ ಸಿಗದಿರುವುದಕ್ಕೆ ಕೆಲವು ಸಚಿವರು ಕ್ಯಾತೆ ತೆಗೆದಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ಆಡಳಿತಾರೂಢ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೆ ಜಗಜ್ಜಾಹೀರವಾಗಿದೆ. ಇನ್ನೊಂದು ಕಡೆ ಆನಂದ್ ಸಿಂಗ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾದ್ಯಕ್ಷ ನಳೀನ್‍ಕುಮಾರ್ ಕಟೀಲ್ ಸೇರಿದಂತೆ ಅನೇಕರು ಮನವೊಲಿಸುವ ಪ್ರಯತ್ನವನ್ನು ನಡೆಸಿದ್ದಾರೆ. ಆದರೆ ಅವರ ಯಾವುದೇ ಪ್ರಯತ್ನಗಳು ಫಲ ಕೊಟ್ಟಿಲ್ಲ.

ಇಂದು ವಿಜಯನಗರದಿಂದ ಬೆಂಗಳೂರಿಗೆ ಆಗಮಿಸಲಿರುವ ಆನಂದ್ ಸಿಂಗ್ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಒಂದು ವೇಳೆ ಅವರ ಸಂಧಾನ ಯಶಸ್ವಿಯಾದರೆ ಮಾತ್ರ ರಾಜೀನಾಮೆ ನೀಡುವ ನಿರ್ಧಾರದಿಂದ ಆನಂದ್ ಸಿಂಗ್ ಹಿಂದೆ ಸರಿಯಬಹುದು. ಹಾಗೊಂದು ವೇಳೆ ಬಿಎಸ್‍ವೈ ಅವರಿಂದಲೂ ಯಾವುದೇ ಭರವಸೆ ಸಿಗದಿದ್ದರೆ ನಾಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಖಚಿತ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿದೆ.

ಈಗಾಗಲೇ ತಮ್ಮ ಆಪ್ತರ ಬಳಿ ಆನಂದ್ ಸಿಂಗ್ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಮುಂದೆ ಎದುರಾಗಲಿರುವ ಉಪಚುನಾವಣೆಗೂ ಸ್ಪರ್ಧಿಸುವುದಿಲ್ಲ. ಬಿಜೆಪಿ ನಂಬಿ ಹೋಗಿದ್ದಕ್ಕೆ ನನಗೆ ತುಂಬ ಅನ್ಯಾಯವಾಗಿದೆ. ರಾಜಕಾರಣದ ಸಹವಾಸವೇ ಬೇಡ ಎಂದು ಹೇಳಿಕೊಂಡಿರುವುದಾಗಿ ಮೂಲಗಳು ಖಚಿತಪಡಿಸಿವೆ. ಒಂದು ಮೂಲದ ಪ್ರಕಾರ ಆನಂದ್ ಸಿಂಗ್ ಕಳೆದ ಭಾನುವಾರವೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ಸಿಎಂ ಮಾತ್ರ ನಿರಾಕರಿಸುತ್ತಿದ್ದಾರೆ.

ಆನಂದ್ ಸಿಂಗ್ ರಾಜೀನಾಮೆ ನೀಡುತ್ತಾರೆ ಎನ್ನುವುದಕ್ಕೆ ಪುಷ್ಟಿ ನೀಡುವಂತೆ ಹಲವು ವಿದ್ಯಾಮಾನಗಳು ನಡೆದಿವೆ. ನಿನ್ನೆ ಶಾಸಕರ ಭವನದಿಂದ ಅವರು ತಮ್ಮ ಕಾರ್ಯಾಲಯ ತೆರವುಗೊಳಿಸಿದ್ದಾರೆ, ಅಲ್ಲಿ ಅವರ ನಾಮಫಲಕವು ಮಾಯವಾಗಿದೆ. ಆನಂದ್ ಸಿಂಗ್ ಅವರು ಆರಂಭದಲ್ಲಿ ಇಂಧನ ಅಥವಾ ಲೋಕೋಪಯೋಗಿ ಇಲಾಖೆ ಕೇಳಿದ್ದರು, ಆದರೆ ಅವರಿಗೆ ಸಿಕ್ಕಿದ್ದು ಪ್ರವಾಸೋದ್ಯಮ, ಪರಿಸರ ಮತ್ತು ಅರಣ್ಯ ಖಾತೆ. ತಮಗೆ ಸಿಕ್ಕಿದ ಖಾತೆ ಬಗ್ಗೆ ಬಹಿರಂಗವಾಗಿಯೇ ವಾರದ ಹಿಂದೆ ಆನಂದ್ ಸಿಂಗ್ ಅಸಮಾಧಾನ ತೋಡಿಕೊಂಡಿದ್ದರು, ಅಲ್ಲದೆ ಇನ್ನು ಕೆಲವು ದಿನಗಳಲ್ಲಿಯೇ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದಿದ್ದರು.

# ಪ್ರತಿಕ್ರಿಯಿಸುವುದಿಲ್ಲ:
ಇನ್ನು ಹೊಸಪೇಟೆಯಲ್ಲಿಂದು ಬೆಳಗ್ಗೆ ಮಾಧ್ಯಮಗಳಿಗೆ ಸಚಿವ ಆನಂದ್ ಸಿಂಗ್ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿಯವರ ತೀರ್ಮಾನವೇ ಅಂತಿಮ, ಎಲ್ಲವನ್ನೂ ಅವರಿಗೆ ಬಿಟ್ಟಿದ್ದೇನೆ ಎಂದಿದ್ದಾರೆ.

Facebook Comments