ಮುಗಿಯದ ಖಾತೆ ಕ್ಯಾತೆ, ಸಿಎಂ ಭೇಟಿ ಮಾಡಿದ ಸಚಿವ ಆನಂದ್ ಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.14- ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪ ಹೊತ್ತಿರುವ ಅರಣ್ಯ ಸಚಿವ ಆನಂದ್ ಸಿಂಗ್ ಖಾತೆ ಬದಲಾಗುವ ಸಾಧ್ಯತೆ ಹೆಚ್ಚಾಗಿದೆ. ಕುರಿ ಕಾಯಲು ತೋಳವನ್ನೇ ನೇಮಿಸಿದಂತೆ ಎಂದು ಪ್ರತಿಪಕ್ಷಗಳು ಆನಂದ್ ಸಿಂಗ್ ಮೇಲೆ ಗಂಭೀರ ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರ ಖಾತೆಯನ್ನು ಬದಲಾಯಿಸಿ ಬೇರೊಂದು ಜವಾಬ್ದಾರಿಯನ್ನು ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ಗಂಭೀರ ಚಿಂತನೆ ನಡೆಸಿದ್ದಾರೆ.

ಇದಕ್ಕೆ ಪುಷ್ಠಿ ನೀಡುವಂತೆ ಇಂದು ಬೆಳ್ಳಂಬೆಳಗ್ಗೆಯೇ ಆನಂದ್ ಸಿಂಗ್ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸಕ್ಕೆ ಆಗಮಿಸಿ ಮುಖ್ಯಮಂತ್ರಿ ಅವರೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿದರು.  ನಾನು ಅರಣ್ಯ ಖಾತೆಯನ್ನು ಕೇಳಿರಲಿಲ್ಲ. ಮೊದಲು ಆಹಾರ ಮತ್ತು ನಾಗರಿಕ ಪೂರೈಕೆಯನ್ನು ನೀಡಲಾಗಿತ್ತು. ನಂತರ ನೀವೇ ಬದಲಾಯಿಸಿ ಈ ಖಾತೆಯನ್ನು ನೀಡಿದ್ದೀರಿ. ಈಗ ಪುನಃ ಬದಲಾವಣೆ ಮಾಡಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ನೋವು ತೋಡಿಕೊಂಡರು.

ನನ್ನ ಮೇಲೆ ದಾಖಲಾಗಿರುವ ಪ್ರಕರಣಗಳ ಕುರಿತಂತೆ ನ್ಯಾಯಾಲಯದಿಂದ ತಡೆಯಾಜ್ಞೆ ನೀಡಲಾಗಿದೆ. ಹಿಂದೆ ಕಾಂಗ್ರೆಸ್ ಸೇರಿದ್ದಾಗ ಯಾವ ಪ್ರಕರಣಗಳು ದಾಖಲಾಗಿದ್ದವೋ ಇಂದಿಗೂ ಅದೇ ಪ್ರಕರಣಗಳಿವೆ. ಹೊಸದಾಗಿ ಯಾವ ದೂರು ಕೂಡ ದಾಖಲಾಗಿಲ್ಲ. ಕೆಲವರು ನಾನು ಮಂತ್ರಿಯಾಗಿರುವುದನ್ನು ಸಹಿಸದೆ ಇಂತಹ ವದಂತಿಯನ್ನು ಹಬ್ಬಿಸುತ್ತಿದ್ದಾರೆ ಎಂದು ಆನಂದ್ ಸಿಂಗ್ ತಮ್ಮ ನೋವು ಹೊರಹಾಕಿದ್ದಾರೆಂದು ತಿಳಿದುಬಂದಿದೆ.

ನನ್ನ ಮೇಲೆ ದಾಖಲಾಗಿರುವ ಪ್ರಕರಣಗಳ ಕುರಿತಂತೆ ಕಾನೂನು ಹೋರಾಟ ನಡೆಸುತ್ತೇನೆ. ಅಂತಿಮವಾಗಿ ನ್ಯಾಯಾಲಯದಲ್ಲಿ ನಾನು ಆರೋಪಿ ಎಂದು ಸಾಬೀತಾದರೆ ಶಿಕ್ಷೆಯನ್ನು ಅನುಭವಿಸುತ್ತೇನೆ. ಸದ್ಯ ಖಾತೆಯನ್ನು ಬದಲಾವಣೆ ಮಾಡಬಾರದೆಂದು ಮನವಿ ಮಾಡಿದ್ದಾರೆ.

ಜಿಲ್ಲಾ ಉಸ್ತುವಾರಿ ನೀಡಿ: ವಿಜಯನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡುವ ಪ್ರಸ್ತಾವನೆಯನ್ನ ಕೈಬಿಟ್ಟಿದ್ದೀರಿ. ಕಡೆ ಪಕ್ಷ ನನಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿಯನ್ನಾದರೂ ನೀಡಬೇಕೆಂದು ಆನಂದ್ ಸಿಂಗ್ ಸಿಎಂ ಬಳಿ ಬೇಡಿಕೆ ಇಟ್ಟಿದ್ದಾರೆ. ಉಪಮುಖ್ಯಮಂತ್ರಿಯಾಗಿರುವ ಲಕ್ಷ್ಮಣ್ ಸವದಿಗೆ ಜಿಲ್ಲಾ ಉಸ್ತುವಾರಿ ನೀಡಲಾಗಿದೆ. ಇದನ್ನು ಬದಲಾಯಿಸಿ ನನಗೆ ಬಳ್ಳಾರಿ ಜಿಲ್ಲೆಯ ಹೊಣೆಗಾರಿಕೆ ನೀಡಬೇಕೆಂದು ಕೋರಿದ್ದಾರೆ.

Facebook Comments